Sunday, 19th May 2024

ಡಿಸಿಎಂ ಸವದಿ ನೇತೃತ್ವದಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ರಣತಂತ್ರ

ಬಸವಕಲ್ಯಾಣ: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ತುರುಸಿನ ಚಟುವಟಿಕೆಗಳು ಗರಿಗೆದರಿದ್ದು, ಆ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇಂದು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳ ಮತ್ತು ಬಿಜೆಪಿ ಮುಖಂಡರ ಸಭೆ ನಡೆಯಿತು.

ಈ ಸಭೆಯಲ್ಲಿ ಸಚಿವರಾದ ಪ್ರಭು ಚೌವ್ಹಾಣ್, ವಿ. ಸೋಮಣ್ಣ, ಬೀದರ್ ಕ್ಷೇತ್ರದ ಸಂಸದರಾದ ಭಗವಂತ ಖೂಬಾ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ವಿಭಾಗ ಸಹ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್, ಮಾಜಿ ಶಾಸಕರಾದ ಅಮರನಾಥ್ ಪಾಟೀಲ್, ಬಿಜೆಪಿಯ ಬೀದರ್ ಜಿಲ್ಯಾಧ್ಯಕ್ಷರಾದ ಶಿವಾನಂದ ಮಂಟಾಲ್ಕರ್ ಹಾಗೂ ಜಿಲ್ಲೆಯ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಬಿಜೆಪಿಯ ಟಿಕೆಟ್ ಬಯಸಿದ 18ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಉಸ್ತುವಾರಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಕುರಿತು ರಣತಂತ್ರವನ್ನು ಈ ಸಭೆಯಲ್ಲಿ ರೂಪಿಸಲಾಯಿತು.

ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಹಲವಾರು ಮುಖಂಡರು ಅಪೇಕ್ಷೆಪಟ್ಟು ಬಿಜೆಪಿಯ ಟಿಕೆಟ್‍ಗೆ ಮನವಿ ಮಾಡಿಕೊಂಡಿ ರುವುದು ಸಹಜ. ಆದರೆ ಈ ಎಲ್ಲಾ ಆಕಾಂಕ್ಷಿಗಳ ವಿವರಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗುವುದು ಮತ್ತು ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರೇ ಕೈಗೊಳ್ಳುತ್ತಾರೆ. ಅವರು ಯಾವುದೇ ತೀರ್ಮಾನ ಕೈಗೊಂಡರೂ ಸಹ ಎಲ್ಲರೂ ಸಹಮತ ದಿಂದ ಮತ್ತು ಒಗ್ಗಟ್ಟಿನಿಂದ ವರಿಷ್ಠರು ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಸಮರೋಪಾದಿಯಲ್ಲಿ ಶ್ರಮಿಸುವುದು ಅಗತ್ಯ ಎಂದು ಶ್ರೀ ಲಕ್ಷ್ಮಣ ಸವದಿ ಅವರು ತಿಳಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಭಾರೀ ಬಹುಮತದಿಂದ ಗೆಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಯಾವುದೇ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳದೇ ಪಕ್ಷದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುವಂತೆ ಶ್ರೀ ಸವದಿ ಅವರು ಸ್ಥಳೀಯ ಮುಖಂಡರಿಗೆ ಕರೆ ಕೊಟ್ಟರು.

ಈ ಚುನಾವಣೆಯಲ್ಲಿ ಮತದಾರರ ಮನ ಮತ್ತು ಮನೆಯನ್ನು ತಲುಪುವಲ್ಲಿ ಬಿಜೆಪಿ ಕಾರ್ಯಕರ್ತರು ಮುಂದಿರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಸ್ಥಳೀಯರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಬಸವಕಲ್ಯಾಣ ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಚುನಾವಣಾ ಪ್ರಚಾರದ ರೂಪುರೇಷೆಗಳ ಕುರಿತು ಸಭೆಯಲ್ಲಿ ಭಾಗವಹಿಸಿದ ಮುಖಂಡರು ತಮ್ಮ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!