Friday, 20th September 2024

CM Siddaramaiah: ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ಶಾಸಕ ಯಶ್​​ಪಾಲ್ ಸುವರ್ಣ ಮೇಲೆ ಕೇಸು​

Yashpal Suvarna

ಉಡುಪಿ: ಪ್ರತಿಭಟನೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದ ಬಿಜೆಪಿ ಶಾಸಕ ಯಶ್​ಪಾಲ್​ ಸುವರ್ಣ (BJP MLA Yashpal Suvarna) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕುಂದಾಪುರದ (Udupi news) ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ಘೋಷಿಸಿದ್ದ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ (Best teacher award) ಪ್ರಶಸ್ತಿಯನ್ನು ತಡೆಹಿಡಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿತ್ತು. ಈ ವೇಳೆ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದ ಶಾಸಕ ಯಶ್​​ಪಾಲ್ ಸುವರ್ಣ (Yashpal Suvarna) ಸೇರಿದಂತೆ 11 ಜನರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಬಿಜೆಪಿ ಶಾಸಕ ಯಶ್​​ಪಾಲ್ ಸುವರ್ಣ ಎ5 ಆಗಿದ್ದಾರೆ.

ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರಿಗೆ ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ, ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಹಿಜಾಬ್ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನ ಒಳಗಡೆ ಬಿಟ್ಟುಕೊಳ್ಳದೆ ಪ್ರಾಂಶುಪಾಲರು​ ಗೇಟ್ ಬಳಿ ತಡೆದಿದ್ದರು.

ವಿದ್ಯಾರ್ಥಿಯರನ್ನು ಗೇಟ್ ಬಳಿ ಪ್ರಾಂಶುಪಾಲರು ತಡೆದಿದ್ದ ಫೋಟೋ ವೈರಲ್ ಆಗಿತ್ತು. ಹೀಗಾಗಿ ಪ್ರಶಸ್ತಿ ಹಿಂಪಡೆಯುವಂತೆ ಹಿಜಾಬ್ ಪರ ಹೋರಾಟಗಾರರು ಒತ್ತಡ ಹಾಕಿದ್ದು, ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಪ್ರಶಸ್ತಿ ತಡೆ ಹಿಡಿದಿತ್ತು.

ಪ್ರಾಂಶುಪಾಲರಿಗೆ ಘೋಷಿಸಿದ್ದ ಪ್ರಶಸ್ತಿ ತಡೆ ಹಿಡಿದಿದ್ದಕ್ಕೆ ಬಿಜೆಪಿ ನಾಯಕರು ಮಣಿಪಾಲದ ಸಿಂಡಿಕೇಟ್ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ರಸ್ತೆ ತಡೆದು ಮುಖ್ಯಮಂತ್ರಿಗಳ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ್ದರು. ಹಿಂದೂ ವಿರೋಧಿ ಸಿದ್ದರಾಮಯ್ಯರನ್ನು ತೊಲಗಿಸಿ ಎಂದು ಘೋಷಣೆ ಕೂಗಿದ್ದರು.

ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಕೃತ್ಯ ಎಸಗಿದ್ದಾರೆ ಎಂದು ಎನ್​ಎಸ್​ಯುಐ ಮುಖಂಡ ಸೌರಭ್ ಬಲ್ಲಾಳ್ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಯಶ್​​ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಗಿರೀಶ್ ಅಂಚನ್, ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ ವಿರುದ್ಧ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಓದಿ: Job News: Railway Recruitment 2024: ರೈಲ್ವೆಯಲ್ಲಿ 11558 ಹುದ್ದೆಗಳಿಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ