Sunday, 24th November 2024

Cauvery Phase-5 Project: ವಿಜಯದಶಮಿಗೆ ಕಾವೇರಿ 5ನೇ ಹಂತ ಉದ್ಘಾಟನೆ; ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು

Cauvery Phase-5 Project

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಒದಗಿಸುವ ಕಾವೇರಿ 5 ನೇ ಹಂತದ ವಿವಿಧ ಕಾಮಗಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ (Cauvery Phase-5 Project) ಅವರು ಸೋಮವಾರ ವೀಕ್ಷಕಿಸಿದರು. ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್ ಹಾಗೂ ಬಿಡಬ್ಲ್ಯೂಎಸ್‌ಎಸ್ ಬಿ ಚೇರ್ಮನ್, ಡಿಸಿಎಂ ಕಾರ್ಯದರ್ಶಿ, ಬಿಎಂಆರ್ ಡಿಎ ಕಮಿಷನರ್ ರಾಜೇಂದ್ರ ಚೋಳನ್ ಹಾಗೂ ಜಲ ಮಂಡಳಿ ಅಧಿಕಾರಿಗಳ ಜತೆ ಕಾಮಗಾರಿಗಳನ್ನು ಪರಿಶೀಲಿಸಿದ ಡಿಸಿಎಂ ಅವರು, ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕೆಂಗೇರಿ-ಉತ್ತರಹಳ್ಳಿ ಮುಖ್ಯರಸ್ತೆಯ ಕೃಷ್ಣಪ್ರಿಯ ಕಲ್ಯಾಣ ಮಂಟಪದ ಬಳಿಯ ಕಾಮಗಾರಿ, ಬೆಂಗಳೂರಿನ ತಾತಗುಣಿ ವರೆಗೆ ಕಾವೇರಿ ಕುಡಿಯುವ ನೀರನ್ನು ಪಂಪ್ ಮಾಡುವ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ 5 ನೇ ಹಂತದ ಪಂಪ್ ಸ್ಟೇಷನ್, ಹಾರೋಹಳ್ಳಿಯಲ್ಲಿ 5ನೇ‌ ಹಂತದ ಜಲರೇಚಕ‌ ಯಂತ್ರಗಾರ ಹಾಗೂ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ನಿರ್ಮಿಸಿರುವ ಜಲಶುದ್ಧೀಕರಣ ಹಾಗೂ ಜಲರೇಚಕ ಯಂತ್ರಾಗಾರವನ್ನಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ವೀಕ್ಷಿಸಿದರು.

ಈ ವೇಳೆ ಮಾತನಾಡಿರುವ ಡಿಸಿಎಂ ಡಿಕೆಶಿ ಅವರು, ವಿಜಯದಶಮಿ ದಿನದಂದು ಯೋಜನೆ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ. ಅದಕ್ಕೂ ಮುನ್ನ ಕಾಮಗಾರಿಯನ್ನು ಕಣ್ಣಾರೆ ನೋಡಬೇಕೆನ್ನುವ ಉದ್ದೇಶದಿಂದ ಇಂದು ಪರಿಶೀಲನೆ ನಡೆಸಿದ್ದೇನೆ. ಡ್ರೈನೇಜ್ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. 110 ಕಿ.ಮೀ. ನೀರು ಸರಬರಾಜಿಗೆ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಕೆ ಮಾಡಲಾಗಿದೆ. ಕನಕಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಪರವಾನಿಗೆ ಪಡೆದು ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ ಯೋಜನಾ ವ್ಯಾಪ್ತಿ ಸೇರಿದೆ. ಬೆಂಗಳೂರು ಮೂರನೇ ಒಂದು ಭಾಗ 110 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. ಈ ಮೊದಲು 1450 ಎಂಎಲ್​ಡಿ ನೀರನ್ನು ನಾಲ್ಕು‌ ಹಂತದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಇದೀಗ ಒಂದೇ ಹಂತ‌ 775 ಎಂಎಲ್​ಡಿ ನೀರು ಸರಬರಾಜು ಮಾಡಲಾಗುತ್ತಿದೆ. 4 ಲಕ್ಷ ಹೊಸ ನೀರಿನ ಸಂಪರ್ಕ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರನ್ನು ವಾಟರ್ ಸರ್ಪ್ಲಸ್‌ ಮಾಡುವುದು ನಮ್ಮ ದಿಟ್ಟ ಹೆಜ್ಜೆ. ಇಡೀ ದೇಶದಲ್ಲಿ ಇದೇ ಅತಿ ದೊಡ್ಡ ನೀರಿನ ಯೋಜನೆ. ದಸರಾ ಹಬ್ಬಕ್ಕೆ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ವಿಶ್ವಾಸವಿದೆ.

ಈ ಸುದ್ದಿಯನ್ನೂ ಓದಿ | Bengaluru’s NCA facility : ಸೆ.28ರಂದು ಬೆಂಗಳೂರಿನ ಹೊಸ ಎನ್‌ಸಿಎ ಸೌಲಭ್ಯ ಉದ್ಘಾಟನೆ

ಕಾವೇರಿ 5 ನೇ ಘಟ್ಟ ಯೋಜನೆಯ ಪ್ರಮುಖ ಅಂಶಗಳು

  • ಬೆಂಗಳೂರು ಜಲಮಂಡಳಿಯಿಂದ ದೇಶದ ಮೂರನೇ ಅತಿದೊಡ್ಡ ನಗರವಾಗಿರುವ ಬೃಹತ್ ಬೆಂಗಳೂರಿಗೆ ಜೀವಜಲವನ್ನು ಒದಗಿಸುವ ಮಹತ್ವದ ಕಾರ್ಯ.
  • ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲು 2,200 ಎಂ.ಎಲ್.ಡಿ ನೀರಿನ ಅವಶ್ಯಕತೆಯಿದೆ.
  • ಪ್ರಸ್ತುತ ಇರುವ ನಾಲ್ಕೂ ಹಂತಗಳ ಮೂಲಕ ನಮಗೆ ಲಭ್ಯವಾಗುತ್ತಿರುವುದು ಕೇವಲ 1450 ಎಂ.ಎಲ್.ಡಿಗಳಷ್ಟು ಮಾತ್ರ
  • ನಗರದ ನೀರಿನ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕಾವೇರಿ 5 ನೇ ಘಟ್ಟ 2 ಹಂತಗಳ ಯೋಜನೆಯನ್ನು ಪ್ರಾರಂಭಿಸಲು ಅಂದಿನ ಕಾಂಗ್ರೆಸ್ ಸರಕಾರ 2014 ರಲ್ಲಿ ಯೋಜನೆ ರೂಪಿಸಿ ಅನುಮೋದನೆ ನೀಡಿತು.
  • 2016 ರಲ್ಲಿ ಬೆಂಗಳೂರಿಗೆ ಹೆಚ್ಚುವರಿಯಾಗಿ ಅಗತ್ಯವಿರುವಂತಹ 10 ಟಿಎಂಸಿ ನೀರನ್ನು ಹಂಚಿಕೆ ಮಾಡಿಸುವಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಯಶಸ್ವಿಯಾಯಿತು.
  • 2016 ರಿಂದ 2018 ರ ವರೆಗೆ ಈ ಬೃಹತ್ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ರಚಿಸಲಾಯಿತು.
  • 2018 ರಲ್ಲಿ ಜೈಕಾಗೆ ಡಿಪಿಆರ್ ಪ್ರಸ್ತಾವನೆ ಸಲ್ಲಿಸಿ, JICA ಜತೆ ಔಪಚಾರಿಕ ಸಾಲ ಒಪ್ಪಂದಕ್ಕೆ
    ಸಹಿ ಮಾಡಲಾಯಿತು.
  • ಈ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗಳು 2020 ರ ಮಾರ್ಚ್ ತಿಂಗಳಿನಿಂದ ನವೆಂಬರ್ ತಿಂಗಳ ವರೆಗೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿ ಕಾರ್ಯಾದೇಶಗಳನ್ನು ನೀಡಲಾಯಿತು.
  • ಒಂದೇ ಹಂತದಲ್ಲಿ 50 ಲಕ್ಷ ಜನರಿಗೆ ನೀರು ಒದಗಿಸುವ ದೇಶದ ಬೃಹತ್ ಯೋಜನೆ ಇದಾಗಿದೆ
  • ಭಾರತದಲ್ಲಿ ಅತಿದೊಡ್ಡ 775 ಎಂ.ಎಲ್.ಡಿ ಸಾಮರ್ಥ್ಯದ ಅತ್ಯಾಧುನಿಕ ನೀರು ವಾಟರ್ ಟ್ರೇಟ್‌ಮೆಂಟ್ ಪ್ಲಾಂಟ್ ನಿರ್ಮಾಣ ಈ ಯೋಜನೆಯ ಪ್ರಮುಖ ಅಂಶ
  • ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಜ್ಞಾನದ ಸುಧಾರಿತ ಬೂಸ್ಟರ್ ಪಂಪಿಂಗ್ ಕೇಂದ್ರಗಳನ್ನು ನಿರ್ಮಾಣ
  • 1,45,000 ಮೆಗಾ ಟನ್ ಸ್ಟೀಲ್ ಪ್ಲೇಟ್‌ಗಳ ಬಳಕೆ – ಅತ್ಯಾಧುನಿಕ ಪ್ರವಾಹ ನಿಯಂತ್ರಣ ವ್ಯವಸ್ಥೆಯ ಅಳವಡಿಕೆ
  • 110 ಕಿಲೋಮೀಟರ್ ದೂರದಿಂದ ಬೃಹತ್ ಉಕ್ಕಿನ ಪೈಪ್‌ಗಳ ಮೂಲಕ ಕಾವೇರಿ ನೀರನ್ನು ಸುಮಾರು 50 ಅಂತಸ್ತಿನ ಕಟ್ಟಡದಷ್ಟು ಎತ್ತರಕ್ಕೆ ನೀರು ಪಂಪ್ ಮಾಡಲಾಗುತ್ತದೆ (450 ಮೀಟರ್ ಎತ್ತರಕ್ಕೆ ಹರಿಸಿ)
  • ಯೋಜನೆ ಪೂರೈಸಲು 2.4 ಕೋಟಿ ಮಾನವ ಗಂಟೆಗಳ ಶ್ರಮ ಬಳಕೆಯಾಗಿದೆ.
  • ಈ ಬೃಹತ್ ಯೋಜನೆ ‘Modern Engineering Marvel’ ಆಗಿದೆ.
  • ಆಗಸ್ಟ್ 2024 ರಿಂದ ಪ್ರಿ ಕಮಿಷನಿಂಗ್ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿತ್ತು
  • ಎಲ್ಲಾ ರೀತಿಯ ಪರಿಶೀಲನೆ ನಡೆಸಿದ ನಂತರ, ಬೆಂಗಳೂರಿನ ಮೂಲೆ ಮೂಲೆಗಳಿಗೆ ಮನೆ ಮನೆಗೂ ಕಾವೇರಿಯನ್ನು ಹರಿಸುವ ಯೋಜನೆ ಅಂತಿಮಗೊಂಡಿದೆ
  • ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ಕಾವೇರಿ ನೀರು ಸರಬರಾಜು ಆಗಲಿದೆ.
  • ಇದುವರೆಗೂ ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ.
  • ಕಾವೇರಿ 5ನೇ ಹಂತದ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ. ಇದರಿಂದ ಜಲಮಂಡಳಿಯ ಆದಾಯ ಹೆಚ್ಚಲಿದೆ
  • ಬೆಂಗಳೂರನ್ನು ‘ವಾಟರ್ ಸರ್‌ಪ್ಲಸ್ ಮಾಡುವತ್ತ ನಮ್ಮ ದಿಟ್ಟ ಹೆಜ್ಜೆ ಇಟ್ಟಿದೆ.