Friday, 27th September 2024

CBI Investigation: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಕಡಿವಾಣ; ಸಚಿವ ಸಂಪುಟ ನಿರ್ಧಾರ

CBI Investigation

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ವಾಪಸ್ ಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸಿಬಿಐ ದುರ್ಬಳಕೆ ಆಗುತ್ತಿದ್ದು, ಕಾನೂನು ಬದ್ಧವಾಗಿ ತನಿಖೆ ನಡೆಯುತ್ತಿಲ್ಲ. ಅಲ್ಲದೇ ಸಿಬಿಐಗೆ ಕೊಟ್ಟ ಪ್ರಕರಣಗಳಲ್ಲಿ ಕೆಲವುಗಳಲ್ಲಿ ಸರಿಯಾಗಿ ಚಾರ್ಜ್ ಶೀಟ್ ಸಲ್ಲಿಸುತ್ತಿಲ್ಲ. ಹೀಗಾಗಿ ಸಿಬಿಐಗೆ ನೀಡಿರುವ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು (CBI Investigation) ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಿಬಿಐ ಪೂರ್ವಗ್ರಹ ಪೀಡಿತವಾಗಿ ಕೆಲಸ ಮಾಡುವುದನ್ನು ಗಮನಿಸಿದ್ದೇವೆ. ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ದುರ್ಬಳಕೆ ಮಾಡುತ್ತಿರುವ ಸಂಸ್ಥೆಗಳು ಪೂರ್ವಾಗ್ರಹ ಪೀಡಿತವಾಗಿದೆ ಎಂದರು.

ರಾಜ್ಯಪಾಲರು ಮೇಲಿಂದ ಮೇಲೆ ಒಂದು ರೀತಿ ಅಸಹನೆಯ ವರ್ತನೆಯಿಂದ ಪತ್ರ ಬರೆಯುತ್ತಿದ್ದಾರೆ. ಹೀಗಾಗಿ ಯಾವುದೇ ದಾಖಲೆಗಳನ್ನು ಪಡೆಯಬೇಕಾದರೆ ಕ್ಯಾಬಿನೆಟ್ ತೀರ್ಮಾನಿಸಿದ ನಂತರ ಆ ದಾಖಲೆಗಳನ್ನು ರಾಜ್ಯಪಾಲರಿಗೆ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ. ದಾಖಲೆಗಳ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ರಾಜ್ಯಪಾಲರ ಕಚೇರಿಯಿಂದ ಮೇಲಿಂದ ಮೇಲೆ ಸೋರಿಕೆಯಾಗುತ್ತಿದೆ. ಈಗ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ 1946 ಅಡಿ ಕರ್ನಾಟಕದಲ್ಲಿನ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವಿತ್ತು. ಆದರೆ, ಈಗ ಸಿಬಿಐಗೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ಯಾವುದೇ ಪ್ರಕರಣಗಳ ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡುವ ಮೂಲಕ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿದೆ. ಈಗಾಗಲೇ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪಂಜಾಬ್‌ ಮತ್ತಿತರ ರಾಜ್ಯಗಳು ಸಿಬಿಐಗೆ ನೀಡಿರುವ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದೆ.

ಈ ಸುದ್ದಿಯನ್ನೂ ಓದಿ | Free Bus Passes: ಗ್ರಾಮೀಣ ಪತ್ರಕರ್ತರಿಗೆ ಗುಡ್‌ ನ್ಯೂಸ್‌; ಉಚಿತ ಬಸ್ ಪಾಸ್ ಜಾರಿಗೆ ಸರ್ಕಾರ ಆದೇಶ