| ಪ್ರಸನ್ನ ಹೆಗಡೆ, ಬೆಂಗಳೂರು
ಚನ್ನಪಟ್ಟಣ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿದ್ದರೂ, ಗೊಂಬೆನಾಡಿನ (Channapatna By Election) ರಣ ಕಣವೇ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಲ್ಪಟ್ಟಿತ್ತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಈ ಕ್ಷೇತ್ರದ ಎನ್ಡಿಎ ಮೈತ್ರಿಕೂಟದ ಟಿಕೆಟ್ ಜೆಡಿಎಸ್ ಪಾಲೋ ಅಥವಾ ಬಿಜೆಪಿ ಪಾಲೋ ಎನ್ನುವ ಲೆಕ್ಕಾಚಾರಗಳು ಇತ್ತು. ಕಾಂಗ್ರೆಸ್ನಿಂದ ಉಮೇದುವಾರಿಕೆ ಸಲ್ಲಿಸೋದು ಯಾರು ಎನ್ನುವ ಕುತೂಹಲವೂ ಇತ್ತು. ಆದರೀಗ ಇದೆಲ್ಲದಕ್ಕೆ ಉತ್ತರ ಸಿಕ್ಕಿದೆ. ಎನ್ಡಿಎಯಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕೀಳಿಯೋದು ಕನ್ಫರ್ಮ್ ಆಗಿದೆ. ಇತ್ತ ಬಿಜೆಪಿ ನಾಯಕ ಯೋಗೇಶ್ವರ್ ದಿಢೀರ್ ʼಕೈʼ ಹಿಡಿದು, ಕಾಂಗ್ರೆಸ್ನಿಂದ ಕಣಕ್ಕಿಳಿಯೋ ತಯಾರಿಯಲ್ಲಿದ್ದಾರೆ.
ಎನ್ಡಿಎಗೆ ಶಾಕ್ ಕೊಟ್ಟ ʼಸೈನಿಕʼ!:
ಮಾಜಿ ಸಚಿವ, ಪರಿಷತ್ ಬಿಜೆಪಿ ಸದಸ್ಯ ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆಗೆ ಎನ್ಡಿಎ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕುಮಾರಸ್ವಾಮಿ ರಾಜೀನಾಮೆಯಿಂದ ಕ್ಷೇತ್ರ ತೆರವಾಗಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ಗೇ ಚನ್ನಪಟ್ಟಣ ಟಿಕೆಟ್ ಎನ್ನುವ ಸುದ್ದಿ ಆರಂಭದಿಂದಲೂ ಇತ್ತು. ಈ ನಡುವೆ ಸಾಲು ಸಾಲು ಬೆಂಬಲಿಗರ ಸಭೆ ನಡೆಸಿದ್ದ ಸಿ.ಪಿ.ಯೋಗೇಶ್ವರ್ ಟಿಕೆಟ್ಗಾಗಿ ನಾಯಕರ ಮೇಲೆ ಒತ್ತಡ ಹಾಕಿದ್ದರು. ಆದರೆ ಅದ್ಯಾವುದೂ ಪ್ರಯೋಜನಕ್ಕೆ ಬಾರದು ಎಂದು ಮನಗಂಡ ʼಸೈನಿಕʼ ಈಗ ʼಕೈʼ ಕುಲುಕಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ರಿಂದ ಬೊಂಬೆನಾಡಿನ ರಾಜಕೀಯ ಚಿತ್ರಣವೇ ಬದಲಾಗಿದೆ.
ಸಿಪಿವೈ ನಡೆಯಿಂದ ಬದಲಾದ ಗೇಮ್?:
ಟಿಕೆಟ್ ಹೋದ್ರೆ ಯೋಗೇಶ್ವರ್ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಪಿವೈ, ಕಾಂಗ್ರೆಸ್ ಸೇರ್ಪಡೆಯಾಗಿರೋದು ಮೈತ್ರಿ ಪಡೆಗೆ ಶಾಕ್ ಕೊಟ್ಟಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ಗೆ ತಮ್ಮದೇ ಆದ ವರ್ಚಸ್ಸಿದ್ದು, ದೊಡ್ಡ ಬೆಂಬಲಿಗರ ಪಡೆಯನ್ನೂ ಹೊಂದಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರ ಪ್ರಚಂಡ ಗೆಲುವಿನಲ್ಲಿಯೂ ಸಿಪಿವೈ ಪಾತ್ರವಿತ್ತು. ಹೀಗಾಗಿ ಯೋಗೇಶ್ವರ್ ಪಕ್ಷ ತೊರೆದಿರೋದು ಮೈತ್ರಿ ಪಡೆಗೆ ಡ್ಯಾಮೇಜ್ ಮಾಡೋದು ಖಚಿತ ಎನ್ನಲಾಗುತ್ತಿದೆ.
ʼಕೈʼಗೆ ಯೋಗೇಶ್ವರ್ ಬಲ:
ಕಳೆದ ವಿಧಾನಸಭಾ ಚುನಾವಣೆ ವೇಳೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿತ್ತು. ಕೈ ಅಭ್ಯರ್ಥಿಯಾಗಿದ್ದ ಗಂಗಾಧರ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಬಳಿಕ ಲೋಕಸಭಾ ಚುನಾವಣೆ ವೇಳೆಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಡಿ.ಕೆ. ಸುರೇಶ್ ಸೋತು ಸುಣ್ಣವಾಗಿದ್ದು ಇತಿಹಾಸ. ಆದರೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಬಲ ನಾಯಕ ಸಿ.ಪಿ. ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿರೋದು ಕೈ ಪಡೆಗೆ ಹೊಸ ಹುಮ್ಮಸ್ಸು ನೀಡಿದೆ.
JDSಗೆ ಮಾಡು ಇಲ್ಲವೇ ಮಡಿ ಸ್ಥಿತಿ!:
ತನ್ನದೇ ಆಗಿದ್ದ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿಯೇನೋ ಜೆಡಿಎಸ್ ಯಶಸ್ವಿಯಾಗಿದೆ ನಿಜ. ಆದರೆ ಯೋಗೇಶ್ವರ್ ನೀಡಿದ ಮಾಸ್ಟರ್ ಸ್ಟ್ರೋಕ್ನಿಂದಾಗಿ ಉಪ ಚುನಾವಣೆಯಲ್ಲಿ ಗೆಲುವಿನ ಬಾವುಟ ಹಾರಿಸೋದೀಗ ಜೆಡಿಎಸ್ಗೆ ಸವಾಲಿನ ಕೆಲಸ. ಗೊಂಬೆನಾಡು ಜೆಡಿಎಸ್ನ ಭದ್ರಕೋಟೆ. ಆದರೆ ಪ್ರತೀ ಬಾರಿಯೂ ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಇರುತ್ತಿದ್ದರಿಂದ ಮತಗಳು ಹರಿದು ಹಂಚಿಕೆಯಾಗ್ತಿದ್ದವು. ಸದ್ಯ ಪರಿಸ್ಥಿತಿ ಹಾಗಿಲ್ಲ. ಕಾಂಗ್ರೆಸ್ ಹಾಗೂ ಮೈತ್ರಿಪಡೆಯ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿಯ ಮತಗಳು ಜೆಡಿಎಸ್ ಮತಗಳ ಜೊತೆ ಸೇರಿದಾಗ ಗೆಲುವು ಸಾಧ್ಯ ಎನಿಸಿದ್ರೂ, ಅದು ಅಂದುಕೊಂಡಷ್ಟು ಸುಲಭದ ಮಾತಲ್ಲ.
ಈ ಸುದ್ದಿಯನ್ನೂ ಓದಿ | CP Yogeshwara: ʼಕೈʼಸೇರಿದ ಸಿಪಿ ಯೋಗೇಶ್ವರ್; ಇನ್ನೂ ಕೈಸೇರದ ಚನ್ನಪಟ್ಟಣ ಕಾಂಗ್ರೆಸ್ ಟಿಕೆಟ್
ಅಭ್ಯರ್ಥಿ ಆಯ್ಕೆಯೇ ದಳಕ್ಕೀಗ ಸವಾಲು:
ಹೌದು… ಜೆಡಿಎಸ್ನಿಂದ ಚನ್ನಪಟ್ಟಣದಲ್ಲಿ ಕಣಕ್ಕಿಳಿಯೋದು ಯಾರು ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ. ಆರಂಭದಲ್ಲಿ ಪುತ್ರ ನಿಖಿಲ್ಗೆ ಕುಮಾರಸ್ವಾಮಿ ಮಣೆ ಹಾಕಬಹುದು ಎನ್ನುವ ಲೆಕ್ಕಾಚಾರಗಳಿತ್ತು. ಆದರೆ ಕಾಂಗ್ರೆಸ್ನಿಂದ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸೋದು ಕನ್ಫರ್ಮ್ ಆದ ಕಾರಣ ಎಚ್ಡಿಕೆ ಇಷ್ಟೊಂದು ರಿಸ್ಕ್ ತಗೋತಾರಾ ಎನ್ನುವ ಅನುಮಾನವೂ ಇದೆ. ಅನಿತಾ ಕುಮಾರಸ್ವಾಮಿ ಮತ್ತು ಅನಸೂಯಾ ಮಂಜುನಾಥ್ ಅವರ ಹೆಸರು ಕೂಡ ಕೇಳಿಬರ್ತಿದ್ದು, ದಳಪತಿಗಳ ನಡೆ ಏನು ಅನ್ನೋ ಕುತೂಹಲವಂತೂ ಇದ್ದೇ ಇದೆ.
ಮೊದಲೇ ಭವಿಷ್ಯ ನುಡಿದಿದ್ದ ವಿಶ್ವವಾಣಿ:
ಬದಲಾದ ರಾಜಕೀಯ ಚಿತ್ರಣದಲ್ಲಿ ಎನ್ಡಿಎಯಿಂದ ಟಿಕೆಟ್ ಸಿಗದೇ ಹೋದರೆ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದು ಈ ಹಿಂದೆಯೇ ವಿಶ್ವವಾಣಿ ಭವಿಷ್ಯ ನುಡಿದಿತ್ತು. ಅದೀಗ ಸತ್ಯವಾಗಿದೆ. ಈ ಕುರಿತ ವಿಡಿಯೊ ಕೂಡ ಈ ಸುದ್ದಿಯ ಜತೆಗಿದೆ.