Wednesday, 23rd October 2024

Channapatna By Election: ಬಿಜೆಪಿ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆಗೆ ಮುಂದಾದ ಯೋಗೇಶ್ವರ್, ಬಂಡಾಯ ಖಚಿತ

cp yogeshwara

ಬೆಂಗಳೂರು: ಬಿಜೆಪಿ (BJP) ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ (CP Yogeshwara) ಅವರು ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ (MLC) ಇಂದು (ಅ.21) ರಾಜೀನಾಮೆ (Resignation) ಸಲ್ಲಿಸಲಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ (Channapatna By Election) ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು, ಟಿಕೆಟ್‌ ತಮಗೆ ದೊರೆಯುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಬಂಡಾಯ ಎದ್ದಿದ್ದಾರೆ.

ಇಂದು ನಾಲ್ಕು ಗಂಟೆಗೆ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಯೋಗೇಶ್ವರ ನೀಡಲಿದ್ದಾರೆ. ಈಗಾಗಲೇ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ್ದಾರೆ.

ಮೂಲಗಳ ಪ್ರಕಾರ ಸಿ.ಪಿ. ಯೋಗೇಶ್ವರ್​ ಅವರು ಕಾಂಗ್ರೆಸ್​ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿ ಅಥವಾ ಎನ್​ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಂಗಿತವನ್ನು ಯೋಗೇಶ್ವರ್​ ವ್ಯಕ್ತಪಡಿಸಿದ್ದರು. ಆದರೆ, ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪದ ಜೆಡಿಎಸ್​, ನಿಖಿಲ್​ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಚುನಾವಣಾ ಕಣಕ್ಕೆ ಇಳಿಸುವ ಸಾಧ್ಯತೆ ಇರುವುದರಿಂದ ಯೋಗೇಶ್ವರ್​ ಅವರು ಕಾಂಗ್ರೆಸ್​ ಸೇರಿ, ದಳಪತಿಗಳ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಯೋಗೇಶ್ವರ್​ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಜತೆ ಮಾತುಕತೆ ನಡೆಸಿದ್ದು, ಇಂದು ಬಿಜೆಪಿ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್​ ಸೇರಲಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ. ಯೋಗೇಶ್ವರ್​ ಅವರು ಡಿಕೆಶಿ ಭೇಟಿ ಮಾಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್​.ಡಿ ಕುಮಾರಸ್ವಾಮಿ ಕೂಡ ಹೇಳಿದ್ದು, ಇದನ್ನು ಡಿಕೆಶಿ ಅಲ್ಲಗಳೆದಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿ ಯೋಗೇಶ್ವರ್​, ಎಚ್​ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನನಗೆ ಟಿಕೆಟ್​ ಕೊಡಲು ಇಷ್ಟವಿರದಿದ್ದರೆ ತಮ್ಮ ಮಗನಿಗೆ ಕೊಡಲಿ. ಅದನ್ನು ಬಿಟ್ಟು ನಾನು ಕಾಂಗ್ರೆಸ್​ ನಾಯಕರನ್ನು ಸಂಪರ್ಕಿಸಿದ್ದೇನೆ ಎಂದು ಸುಳ್ಳು ಆರೋಪ ಮಾಡುವ ಅವಶ್ಯಕತೆ ಅವರಿಗಿಲ್ಲ. ನಾನು ಯಾವ ಕಾಂಗ್ರೆಸ್​ ನಾಯಕರನ್ನೂ ಭೇಟಿ ಮಾಡಿಲ್ಲ. ನನಗೆ ಜೆಡಿಎಸ್​ ಚಿಹ್ನೆ ಅಡಿ ಸ್ಪರ್ಧಿಸಲು ಇಷ್ಟವಿಲ್ಲ. ನಾನು ಬಿಜೆಪಿಯಿಂದ ಸ್ಪರ್ಧೆ ಮಾಡಲು ಇಚ್ಛಿಸಿದ್ದೇನೆ. ನನ್ನ ಜನರು ಕೂಡ ಜೆಡಿಎಸ್​ನಿಂದ ಸ್ಫರ್ಧೆ ಬೇಡ ಎನ್ನುತ್ತಿದ್ದಾರೆ. ಈ ವಿಚಾರವಾಗಿ ಕುಮಾರಸ್ವಾಮಿ ಬಳಿಯೂ ಚರ್ಚೆ ಮಾಡಿದ್ದೇನೆ. ಆದರೆ, ಅವರಿಗೆ ತಮ್ಮ ಮಗನಿಗೆ ಟಿಕೆಟ್​ ಕೊಡಿಸಬೇಕೆಂಬ ಆಸೆ ಇದೆ. ನಾನು ಬಿಜೆಪಿಯಿಂದಲೇ ಸ್ಪರ್ಧೆ ಮಾಡಲು ನಿರ್ಧರಿದ್ದೇನೆ. ಆದರೆ, ಯಾರೊಬ್ಬರೂ ನನಗೆ ಬೆಂಬಲ ಕೊಡುತ್ತಿಲ್ಲ ಎಂದು ಯೋಗೇಶ್ವರ್ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: HD Kumaraswamy: ಜೆಡಿಎಸ್‌ ಟಿಕೆಟ್ ಒಪ್ಪದ ಯೋಗೇಶ್ವರ್ ಮೇಲೆ ಹೆಚ್‌ಡಿ ಕುಮಾರಸ್ವಾಮಿ ಸಿಡಿಮಿಡಿ; ಕಾಂಗ್ರೆಸ್‌ ನಾಯಕರ ಕುತಂತ್ರ ಆರೋಪ