Saturday, 16th November 2024

Channapatna By Election: ನೆಂಟರಂತೆ ಬಂದವರು, ನೆಂಟರಂತೆ ಹೋಗಲಿ; ಕುಮಾರಸ್ವಾಮಿಗೆ ಡಿ.ಕೆ. ಸುರೇಶ್ ಟಾಂಗ್‌

DK Suresh

ಚನ್ನಪಟ್ಟಣ: ಈ ಕ್ಷೇತ್ರದಲ್ಲಿ ನೆಂಟರಂತೆ ಬಂದು ಎಲ್ಲಾ ಅಧಿಕಾರ ಅನುಭವಿಸಿ, ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡದವರು ನೆಂಟರಂತೆ ಹೋಗಲಿ. ನಿಮ್ಮ ಮನೆ ಮಕ್ಕಳಂತೆ ನಾನು, ಸಿ.ಪಿ. ಯೋಗೇಶ್ವರ್, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಸರ್ಕಾರದ ಬೆಂಬಲದೊಂದಿಗೆ ನಿಮ್ಮ ಸೇವೆ ಮಾಡುತ್ತೇವೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ತಿಳಿಸಿದರು. ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆಯಲ್ಲಿ ದೊಡ್ಡಮಳೂರಿನಲ್ಲಿ ಸೋಮವಾರ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಮತಯಾಚಿಸಿದರು.

ಚನ್ನಪಟ್ಟಣದ ಮತದಾರರಿಗೆ ಕುಮಾರಸ್ವಾಮಿ ಅಪಮಾನ

ಕುಮಾರಸ್ವಾಮಿ ಅವರು ನಿಮ್ಮ ಆಶೀರ್ವಾದದಿಂದ ಎರಡನೇ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ಮಾಡಿದಾಗ ಕುಮಾರಸ್ವಾಮಿ ಅವರು ಏನು ಹೇಳಿದರು? ಶಾಸಕರಾಗಿ ಆಯ್ಕೆಯಾದ ನಂತರ ಐದು ವರ್ಷಗಳ ಕಾಲ ಜನರ ಮಧ್ಯೆ ಇರಬಾರದು, ನಿಮಗಾಗಿ ಕೆಲಸ ಮಾಡಬಾರದು. ಚುನಾವಣೆ ಸಮಯದಲ್ಲಿ ತಂತ್ರಗಾರಿಕೆ ಮಾಡಿ ಕಣ್ಣೀರು ಹಾಕಿ ಮತ ಕೇಳಿದರೆ ಸಾಕು ಎಂದು ಹೇಳಿದ್ದಾರೆ. ಇದು ಈ ತಾಲೂಕಿನ ಜನತೆಗೆ ಮಾಡಿರುವ ಅಪಮಾನ. ಇಂತಹ ಧೋರಣೆ ಹೊಂದಿರುವ ಕುಟುಂಬದ ಬಗ್ಗೆ ಚನ್ನಪಟ್ಟಣದ ಮತದಾರರು ತೀರ್ಮಾನ ಮಾಡಬೇಕು. ಅವರು ಹೇಳಿದಂತೆ ಕಳೆದ 8-10 ದಿನಗಳಿಂದ ಚುನಾವಣಾ ತಂತ್ರಗಾರಿಕೆ ಮಾಡಿಕೊಂಡು ಈಗ ಬಂದಿದ್ದಾರೆ. ಸಿದ್ದರಾಮಯ್ಯ ಅವರು ಹದಿನೈದು ದಿನಕ್ಕೊಮ್ಮೆ ಮೈಸೂರಿಗೆ ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಹದಿನೈದು ದಿನಕ್ಕೊಮ್ಮೆ ಕನಕಪುರಕ್ಕೆ ಹೋಗುತ್ತಾರೆ. ಕಾರಣ ಅವರಿಗೆ ತಮ್ಮ ಮತದಾರರ ಋಣ ತೀರಿಸುವ ಬದ್ಧತೆ ಇದೆ. ಕಷ್ಟ ಸುಖ ಕೇಳುವ ಬದ್ಧತೆ ಇದೆ. ಆದರೆ ಕುಮಾರಸ್ವಾಮಿ ಅವರು ಐದು ವರ್ಷಕ್ಕೊಮ್ಮೆ ಹಣ ಹಂಚಿದರೆ ಸಾಕು ಎಂಬ ಧೋರಣೆ ಇದೆ. ಜಾತಿ ಹೆಸರಲ್ಲಿ ಕಣ್ಣೀರು ಹಾಕಿದರೆ ಸಾಕು.

ಈ ಸುದ್ದಿಯನ್ನೂ ಓದಿ | Pustaka Santhe: ಮೂರು ದಿನಗಳ ʼವೀರಲೋಕ ಪುಸ್ತಕ ಸಂತೆʼ ನ.15ರಿಂದ; ನೂರಾರು ಅಂಗಡಿ, 100 ಲೇಖಕರು

ನೀವು ನಿಮ್ಮ ರಾಜಕೀಯ ಜೀವನದಲ್ಲಿ ಯಾರನ್ನು ಯಾವ ರೀತಿ ಬಳಸಿಕೊಂಡಿದ್ದೀರಿ? ಹೇಗೆ ಮೋಸ ಮಾಡಿದ್ದೀರಿ ಎಂದು ಆಲೋಚಿಸಿ. ಕುಮಾರಸ್ವಾಮಿ ಅವರು ನನ್ನ ಹೇಳಿಕೆಯನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿದ್ದೀರಿ. ಯೋಗೇಶ್ವರ್ ಹಾಗೂ ನಾನು 30 ವರ್ಷಗಳ ಹಳೇ ಸ್ನೇಹಿತರು. ಆತ ನನ್ನ ಬೈಯ್ಯುತ್ತಾನೆ. ನಾನು ಆತನಿಗೆ ಬೈಯ್ಯುತ್ತೇನೆ. ನೀವು ಯಾರನ್ನು ಬೈದಿದ್ದೀರಿ ಗೊತ್ತಾ? ನೀವು ಮತದಾರರನ್ನು ನಿಂದಿಸಿದ್ದೀರಿ ಎಂದು ಆರೋಪಿಸಿದ ಅವರು, ನಮ್ಮ ವಾಗ್ವಾದ ವೈಯಕ್ತಿಕವಾದುದ್ದು. ನೀವು ಟೀಕೆ ಮಾಡಿರುವುದು ನಿಮಗೆ ಆಶೀರ್ವಾದ ಮಾಡಿರುವ ಜನರಿಗೆ. ಇದಕ್ಕೆ ನೀವು ಉತ್ತರಿಸಿ ಎಂದು ತಿಳಿಸಿದರು.

ಕುಮಾರಸ್ವಾಮಿ ಒಂದು ದಿನ ಬಂದು ನಿಮ್ಮ ಕಷ್ಟ ಕೇಳಲಿಲ್ಲ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಈ ಕ್ಷೇತ್ರದ ಜನರ ಕಷ್ಟ ಕೇಳಲು ಒಂದೇ ಒಂದು ದಿನ ಬರಲಿಲ್ಲ. ಜನರ ಕಷ್ಟ ಕೇಳುವುದಿರಲಿ, ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಸ್ಯೆಯನ್ನು ಆಲಿಸಲಿಲ್ಲ. ಅವರು ಸಿಎಂ ಆಗಿದ್ದಾಗ ನಿಮ್ಮ ಕಷ್ಟ ಆಲಿಸಿದ್ದಾರಾ ಎಂದು ಆತ್ಮಸಾಕ್ಷಿಯಿಂದ ಹೇಳಿ ಎಂದು ಆ ಕಾರ್ಯಕರ್ತರಲ್ಲಿ ಕೇಳಲು ಬಯಸುತ್ತೇನೆ. ಅವರ ಬಗ್ಗೆ ನಿಮಗೆ ಇಷ್ಟು ಅಂಧ ಅಭಿಮಾನ ಯಾಕೆ? ಕಾಂಗ್ರೆಸ್ ಪಕ್ಷದಿಂದ, ಡಿ.ಕೆ. ಶಿವಕುಮಾರ್, ಯೋಗೇಶ್ವರ್, ನನ್ನಿಂದ ಯಾವ ತಪ್ಪಾಗಿದೆ? ಈ ಭಾಗದ ಕೆರೆ ತುಂಬಿಸಲು ಈ ಜಿಲ್ಲೆಯ ಅಭಿವೃದ್ಧಿಗೆ ನಾವು ಶ್ರಮಿಸಿಲ್ಲವೇ? ಅವರು ಈ ಕ್ಷೇತ್ರದ ಅಭಿವೃದ್ಧಿಗೆ ಯಾವ ಯೋಜನೆ ನೀಡಿದ್ದಾರೆ ಎಂದು ಪಟ್ಟಿ ಮಾಡಿ ಹೇಳಲಿ. ಕುಮಾರಸ್ವಾಮಿ ಅವರು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಧೈರ್ಯ ತುಂಬಿದ್ದಾರಾ?

ಇದ್ಯಾವುದನ್ನು ಮಾಡದೇ ಈಗ ಕ್ಷೇತ್ರಕ್ಕೆ ಬಂದು ಡಿ.ಕೆ. ಶಿವಕುಮಾರ್, ಯೋಗೇಶ್ವರ್ ಬಗ್ಗೆ ಮಾತನಾಡುತ್ತಾರೆ. ಯೋಗೇಶ್ವರ್ ಪಕ್ಷ ಬದಲಿಸುತ್ತಾರೆ ಎಂದು ಹೇಳುವ ಕುಮಾರಸ್ವಾಮಿ ಅವರೇ ನೀವು ಮಾಡುತ್ತಿರುವುದೇನು? ನಿಮ್ಮ ಹೇಳಿಕೆಗಳೇನಿದೆ? ನಿಮಗೆ ಯಾರು ಅಧಿಕಾರ ನೀಡುತ್ತಾರೋ ಅವರ ಜತೆ ಕೈ ಜೋಡಿಸುತ್ತೀರಿ. ಇದರ ಹೊರತಾಗಿ ನಿಮ್ಮ ಬಳಿ ಯಾವ ಸಿದ್ಧಾಂತವಿದೆ? ನಮ್ಮ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂದು ಬಹಿರಂಗ ಹೇಳಿಕೆ ನೀಡುತ್ತೀರಲ್ಲಾ, ನಿಮಗೆ ಈ ಯೋಜನೆಗಳು ಇಷ್ಟವಿಲ್ಲದಿದ್ದರೆ ಈ ಯೋಜನೆಗಳನ್ನು ನಿಲ್ಲಿಸಿ ಎಂದು ನೇರವಾಗಿ ಹೇಳಿ ನಿಮ್ಮ ತಾಕತ್ತು ಪ್ರದರ್ಶಿಸಿ. ನಿಮಗೆ ಆ ತಾಕತ್ತು ಇಲ್ಲ. ಯಾವ ಆಧಾರದ ಮೇಲೆ ಈ ಯೋಜನೆ ಟೀಕೆ ಮಾಡುತ್ತೀರಿ? ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಪಕ್ಷ ಬಡವರ ಕಣ್ಣೀರು ಒರೆಸಿದ್ದು ತಪ್ಪಾ? ಎಂದು ಪ್ರಶ್ನಿಸಿದರು.

ಅಭಿವೃದ್ಧಿ ಬಗ್ಗೆ ಮಾತನಾಡದ ಕುಮಾರಸ್ವಾಮಿ

ಈ ಉಪಚುನಾವಣೆಗೆ ಬಂದಿರುವ ಕುಮಾರಸ್ವಾಮಿ ಅವರು ಎಲ್ಲಾದರೂ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರಾ? ಅವರಿಗೆ ಕನಸಲ್ಲೆಲ್ಲಾ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ಯೋಗೇಶ್ವರ್, ಸಿದ್ದರಾಮಯ್ಯ ಅವರದ್ದೇ ಕನವರಿಕೆ. ಇವರ ಹೊರತಾಗಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರಾ? ಯೋಗೇಶ್ವರ್ ಈ ತಾಲೂಕಿಗೆ ನೀರು ನೀಡಿದ್ದಾರೆ. ನಾವು ಈ ತಾಲೂಕಿಗೆ ವಿದ್ಯುತ್ ನೀಡಿದ್ದೇವೆ, ಗ್ಯಾರಂಟಿ ಯೋಜನೆ ನೀಡಿದ್ದೇವೆ ಎಂದು ಮತ ಕೇಳುತ್ತಿದ್ದೇವೆ. ಆದರೆ ಕುಮಾರಸ್ವಾಮಿ ಅವರು ತಮ್ಮ ಕೆಲಸದ ಬಗ್ಗೆ ಚರ್ಚೆ ಮಾಡಿ ಮತ ಕೇಳುತ್ತಿದ್ದಾರಾ? ಎಂದರು.

ದೇವೇಗೌಡರೇ ನಿಮ್ಮ ನೈತಿಕತೆ ಎಲ್ಲಿ ಹೋಯಿತು?

ದೇವೇಗೌಡರೇ ನಾನು ಯಾವ ವಿಚಾರ ಮಾತನಾಡಲಿ, ನನಗೆ ಹೃದಯ ಇದೇಯೇ? ಇಲ್ಲವಲ್ಲ? ಕಣ್ಣೀರು ಹಾಕುವವರಿಗೆ ಹೃದಯ ಇರಬೇಕು ಎಂದಿದ್ದೀರಿ. ನಿಮ್ಮ ಹೃದಯ ಯಾವಾಗ ಕೆಲಸ ಮಾಡಬೇಕಿತ್ತು ಗೊತ್ತಾ? ನಿಮ್ಮನ್ನು ಸಾಕಿ ಸಲುಹಿ ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಧಾನಮಂತ್ರಿ ಸ್ಥಾನದವರೆಗೂ ಬೆಳೆಸಿದರಲ್ಲಾ ಅಂತಹ ತಾಯಂದಿರ ಮಾನವನ್ನು ನಿಮ್ಮ ಮೊಮ್ಮಕ್ಕಳು ಹಾರಾಜು ಹಾಕುವಾಗ ಕಣ್ಣೀರು ಹಾಕಬೇಕಿತ್ತು. ನನ್ನ ಮೊಮ್ಮಕ್ಕಳು ತಪ್ಪು ಮಾಡಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಬೇಕಿತ್ತು. ಆಗ ನಿಮ್ಮ ಆತ್ಮಗೌರವ ಉಳಿದು, ಘನತೆ ಹೆಚ್ಚುತ್ತಿತ್ತು. ನಿಮ್ಮ ಜತೆ ರಾಜಕಾರಣ ಮಾಡಿದ ಜೆಡಿಎಸ್ ಕಾರ್ಯಕರ್ತರ ಮನೆ ಹೆಣ್ಣು ಮಕ್ಕಳು, ಊಟಕ್ಕಾಗಿ ನಿಮ್ಮ ಮನೆಯಲ್ಲಿ ಕೂಲಿ ಮಾಡಿದವರ ಮೇಲೆ ಅತ್ಯಾಚಾರ ನಡೆದಾಗ ನೀವು ನನ್ನ ಮಕ್ಕಳು ಹಾಗೂ ಮೊಮ್ಮಕ್ಕಳಿಂದ ತಪ್ಪಾಗಿದೆ ಎಂದು ಹೇಳಬೇಕಿತ್ತು ಎಂದು ಟೀಕಿಸಿದರು.

ದೇವೇಗೌಡರೇ ನಿಮ್ಮನ್ನು ಕೂಡಿ ಹಾಕಿದ್ದು ಕಾಂಗ್ರೆಸ್‌ನವರಲ್ಲ

ಕಾಂಗ್ರೆಸ್‌ನವರು ನನ್ನನ್ನು ಮೂರು ತಿಂಗಳು ಕೂಡಿಹಾಕಿದ್ದರು ಎಂದು ಹೇಳಿದ್ದೀರಿ. ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಕೂಡಿಹಾಕಿದ್ದರೇ? ದೇವೇಗೌಡರೇ ನಿಮ್ಮನ್ನು ಕೂಡಿ ಹಾಕಿದ್ದು ಕಾಂಗ್ರೆಸ್‌ನವರಲ್ಲ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಎಂಬುದನ್ನು ಮರೆಯಬೇಡಿ. ಯಾಕೆ ಎಲ್ಲಾ ಆರೋಪಗಳನ್ನು ಕಾಂಗ್ರೆಸ್‌ನವರ ಮೇಲೆ ಹಾಕುತ್ತೀರಿ. ನೀವು ಇಂದು ಉಪ ಚುನಾವಣೆ ಮಾಡುತ್ತಿರುವುದು ಚನ್ನಪಟ್ಟಣದ ಬಡ ಜನರಿಗಾಗಿಯೇ? ಬಡ ರೈತರಿಗಾಗಿಯೇ? ನಿಮ್ಮ ಮೊಮ್ಮಗ ಹಾಸನದಲ್ಲಿ ಅಪಚಾರ ಮಾಡಿದಾಗ ಒಂದು ದಿನ ಹೋಗಿ ಅಲ್ಲಿನ ಜನರ ಬಳಿ ಕ್ಷಮೆ ಕೇಳಲಿಲ್ಲ. ಇಲ್ಲಿ ಬಂದು 8 ದಿನಗಳಿಂದ ಚುನಾವಣಾ ಪ್ರಚಾರ ಮಾಡುತ್ತಿದ್ದೀರಲ್ಲಾ ನಿಮ್ಮ ನೈತಿಕತೆ ಎಲ್ಲಿ ಹೋಯಿತು? ಎಂದು ಅವರು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Bengaluru International Airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ದಟ್ಟ ಮಂಜು, ಇಳಿಯಲಾಗದೆ ವಾಪಸ್‌ ಹೋದ ಹೈದರಾಬಾದ್‌ ವಿಮಾನ

ನಿಮ್ಮ ಪಕ್ಷದವರ ಏಳಿಗೆ ಸಹಿಸದ ನೀವು ಡಿ.ಕೆ. ಸಹೋದರರು, ಯೋಗೇಶ್ವರ್ ಏಳಿಗೆ ಸಹಿಸುತ್ತೀರಾ?

ನೀವು ನನ್ನ ಮೇಲೆ, ನನ್ನ ಸಹೋದರನ ಮೇಲೆ, ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ಸಂತೋಷ. ಯೋಗೇಶ್ವರ್ ಅವರನ್ನು ಕರೆದುಕೊಂಡಿದ್ದು ಯಾರು? ನಾನು, ಸಿದ್ದರಾಮಯ್ಯ, ಶಿವಕುಮಾರ್ ಕರೆದುಕೊಂಡರಾ? ನೀವು ನಿಮ್ಮ ರಾಜಕೀಯ ಜೀವನದಲ್ಲಿ ಎಷ್ಟು ಜನರನ್ನು ರಾಜಕೀಯವಾಗಿ ಬೆಳೆಯಲು ಬಿಟ್ಟಿಲ್ಲ ಎಂಬ ದೊಡ್ಡ ಪಟ್ಟಿಯೇ ಇದೆ. ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬಿಟ್ಟರೆ ಬೇರೆ ಯಾರನ್ನೂ ನೀವು ರಾಜಕೀಯವಾಗಿ ಬೆಳೆಸಲೇ ಇಲ್ಲ. ನಿಮ್ಮ ಪಕ್ಷದವರ ಏಳಿಗೆಯನ್ನೇ ಸಹಿಸದ ನೀವು, ನನ್ನ ಹಾಗೂ ಡಿ.ಕೆ. ಶಿವಕುಮಾರ್ ಏಳಿಗೆ ಸಹಿಸುತ್ತೀರಾ?

ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ಹಾಸನದ ಪುಟ್ಟಸ್ವಾಮಿಗೌಡರು, ವೈ.ಕೆ. ರಾಮಯ್ಯ, ಮಾದೇಗೌಡರು, ರಮೇಶ್ ಕುಮಾರ್, ಅಂಬರೀಶ್, ನಿಮ್ಮ ಮನೆಮಗನಂತೆ ಇದ್ದ ಬಿ.ಎಲ್. ಶಂಕರ್, ಮುದ್ದಹನುಮೇಗೌಡರು, ಮಳವಳ್ಳಿ ನಾಗೇಗೌಡರು, ಭೈರೇಗೌಡರು, ನಿಮ್ಮ ಒಡನಾಡಿ ಪಿಜಿಆರ್ ಸಿಂಧ್ಯಾ, ಸಿಎಂ ಇಬ್ರಾಹಿಂ, ಬಚ್ಚೇಗೌಡರು, ಬಸವರಾಜ ರಾಯರೆಡ್ಡಿ, ಡಿ.ಬಿ. ಚಂದ್ರೇಗೌಡರು, ವೈಜ್ಯನಾಥ ಪಾಟೀಲ್, ಎಂ.ಪಿ. ಪ್ರಕಾಶ್ , ನಾಣಯ್ಯ, ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಜಮೀರ್, ಬಾಲಕೃಷ್ಣ, ಚನ್ನಪಟ್ಟಣದ ಮಾನಸ ಪುತ್ರ ವರದೇಗೌಡರು ಹೀಗೆ ಎಷ್ಟು ಜನರನ್ನು ತುಳಿದಿದ್ದೀರಿ. ಈಗ ಈ ಪಟ್ಟಿಯಲ್ಲಿ ಕೊನೆಯ ಹೆಸರು ಸಿ.ಪಿ. ಯೋಗೇಶ್ವರ್. ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಯೋಗೇಶ್ವರ್ ಅವರನ್ನು, ನನ್ನನ್ನು ಸಹಿಸುತ್ತೀರಾ?

ನಿಮ್ಮ ರಾಜಕಾರಣದ ವ್ಯವಸ್ಥೆಯಲ್ಲಿ ನೀವು ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿದ್ದರೆ ಇಂದು ರಾಜ್ಯದಲ್ಲಿ ಅತ್ಯುತ್ತಮ ಪ್ರಾದೇಶಿಕ ಪಕ್ಷ ಅಲ್ಲಾಡಿಸಲು ಸಾಧ್ಯವಾಗಿರುತ್ತಿರಲಿಲ್ಲ. ನಿಮ್ಮ ಮಕ್ಕಳ ಜತೆಗೆ ಬೆಳೆಯುವವರನ್ನು ಒಬ್ಬೊಬ್ಬರಾಗಿ ತುಳಿಯುತ್ತಾ ಬಂದಿರಿ ಎಂದು ಡಿ.ಕೆ. ಸುರೇಶ್‌ ಆರೋಪಿಸಿದರು.

ರಾಜ್ಯಾದ್ಯಂತ ಚನ್ನಪಟ್ಟಣದ್ದೇ ಸದ್ದು

ಚನ್ನಪಟ್ಟಣದವರು ಇಷ್ಟು ಸದ್ದು ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ರಾಜ್ಯದ ಮೂಲೆ ಮೂಲೆಯಲ್ಲಿ ಚನ್ನಪಟ್ಟಣದ್ದೇ ಸದ್ದು. ಈ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ಯಾವ ತೀರ್ಪು ನೀಡುತ್ತಾರೆ ಎಂದು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ

ನಿಮ್ಮ ಸೇವೆ ಮಾಡಲು ಅವಕಾಶ ನೀಡಿ

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ನಿಮ್ಮ ಸೇವೆ ಮಾಡಲು ಶಕ್ತಿ ನೀಡಿ. ನಾವೆಲ್ಲರೂ ಈ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿ ಈ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ 500 ಕೋಟಿ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಆರಂಭಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಡಿ.ಕೆ. ಸುರೇಶ್‌ ತಿಳಿಸಿದರು.