ಚನ್ನಪಟ್ಟಣ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಪೂರ್ಣಗೊಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Deve Gowda) ಭವಿಷ್ಯ ನುಡಿದಿದ್ದಾರೆ. ಕ್ಷೇತ್ರದ ಎಸ್.ಎಂ. ಹಳ್ಳಿಯಲ್ಲಿ (Channapatna By Election) ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಜನರನ್ನು ಈ ಸರ್ಕಾರ ಸುಲಿಗೆ ಮಾಡುತ್ತಿದೆ. ಎಲ್ಲಾ ರೀತಿಯಲ್ಲಿಯೂ ಜನತೆಯನ್ನು ಶೋಷಣೆ ಮಾಡುತ್ತಿದೆ. ಇಂಥ ಸರ್ಕಾರ ಇರಬಾರದು. ಇದ್ದರೆ ಜನರಿಗೆ ಒಳ್ಳೆಯದು ಆಗುವುದಿಲ್ಲ ಎಂದು ತಿಳಿಸಿದರು.
ಮೇಕೆದಾಟು ಮಾಡಿಯೇ ತೀರುತ್ತೇವೆ
ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಯೋಜನೆ ಕಾರ್ಯಗತ ಮಾಡಲು ಸಾಧ್ಯವಿಲ್ಲ. ನಿಖಿಲ್ ಕುಮಾರಸ್ವಾಮಿ ಅವರು ಗೆದ್ದರೆ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಹೋರಾಟ ನಡೆಸಿ ಮೇಕೆದಾಟು ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ದೇವೇಗೌಡ ಅವರು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ | R Ashok: 15 ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಬರೆಯಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ; ಆರ್. ಅಶೋಕ್ ಆರೋಪ
ಐ.ಎನ್.ಡಿ.ಐ.ಎ. ಮೈತ್ರಿಕೂಟದಲ್ಲಿ ಪ್ರಧಾನಿಯಾಗಬಲ್ಲ ಯಾವುದೇ ನಾಯಕ ಇದ್ದಾರೆಯೇ? ಸ್ಟಾಲಿನ್ ಅಥವಾ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದೇ? ಎಂದು ಅವರು ಟಾಂಗ್ ನೀಡಿದರು. ಮಾಡುವ ಕೆಲಸವನ್ನು ಅಚ್ಚುಕಟ್ಟಿನಿಂದ ಮಾಡಬೇಕು. ಜನರ ನಿರೀಕ್ಷೆ ತಲುಪುವಲ್ಲಿ ಗ್ಯಾರಂಟಿಗಳು ಇವು ವಿಫಲವಾಗಿವೆ. ಇವುಗಳನ್ನು ಬಹಳ ಕಾಲ ನಿಭಾಯಿಸಲು ಸರ್ಕಾರದಿಂದ ಆಗುವುದಿಲ್ಲ ಎಂದು ಟೀಕಿಸಿದ ಅವರು, ಅಗ್ಗದ ಭರವಸೆಗಳನ್ನು ಕೊಟ್ಟು ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ. ಆದರೆ, ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲ ಜನರನ್ನು ಬಲಪಡಿಸಬೇಕು. ನಾನು ಕಾಡುಗೊಲ್ಲ ಮತ್ತು ಬೆಸ್ತ ಸಮುದಾಯಗಳನ್ನು ಎಸ್ಟಿ ಪ್ರವರ್ಗಕ್ಕೆ ಸೇರಿಸುವ ಖಚಿತ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾಡುಗೊಲ್ಲ ಸಮುದಾಯವನ್ನು ಈ ಪ್ರವರ್ಗಕ್ಕೆ ಸೇರಿಸಲು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಅವರು ಹೇಳಿದರು.
ನಿಖಿಲ್ ಕುಮಾರಸ್ವಾಮಿ ಬೆಂಬಲಿಸಿ
ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಸತತ ಐದನೇ ದಿನ ಪ್ರಚಾರ ನಡೆಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ಶನಿವಾರ ಎಸ್.ಎಂ. ಹಳ್ಳಿ, ಮಳೂರು ಪಟ್ಟಣ, ಚೆಕ್ಕರೆ ಹಾಗೂ ಮತ್ತಿಕೆರೆ ಭಾಗಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು. ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ಮೂಲಕ ಪ್ರಧಾನಿ ಮೋದಿ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಲಪಡಿಸಿ ಎಂದು ಎಚ್.ಡಿ. ದೇವೇಗೌಡ ಮತದಾರರಲ್ಲಿ ಮನವಿ ಮಾಡಿದರು. 1957ರಲ್ಲಿ ಚನ್ನಪಟ್ಟಣ ರಾಜಕೀಯದಲ್ಲಿ ತಮ್ಮ ಆರಂಭಿಕ ಹೆಜ್ಜೆಗಳನ್ನು ನೆನಪಿಸಿಕೊಂಡ ಅವರು, ʼಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ನಾನು ಆಗ ವರದೇಗೌಡರನ್ನು ಸಂಪರ್ಕಿಸಿದ್ದೆʼ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ʼಟೋಕನ್ʼ ಮೊರೆ ಹೋಗಿದೆ; ಜೋಶಿ ಆರೋಪ
ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಮಾತನಾಡಿದರು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಬಿಜೆಪಿ, ಜೆಡಿಎಸ್ನ ಹಿರಿಯ ಮುಖಂಡರು ಭಾಗವಹಿಸಿದ್ದರು.