ರಾಮನಗರ: ಚನ್ನಪಟ್ಟಣ ಉಪಚುನಾವಣೆಯ (Channapatna By Election) ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರ ನೀಡಿದ್ದಾರೆ. ಅದರ ಪ್ರಕಾರ, ಅವರ ಆಸ್ತಿ ಮೌಲ್ಯ ಕಳೆದ ಒಂದು ವರ್ಷದಲ್ಲಿ 36 ಕೋಟಿ ರೂ. ಏರಿಕೆಯಾಗಿದೆ.
ನಿಖಿಲ್ ಬಿಬಿಎ ಪದವೀಧರನಾಗಿದ್ದು, ಒಟ್ಟು 78.15 ಕೋಟಿ ಮೌಲ್ಯದ ಚರಾಸ್ತಿ, 29.34ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49 ಕೋಟಿ ಮೌಲ್ಯದ ಚರಾಸ್ತಿ, 43 ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ. ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ಹಣ ಇದೆ.
ನಿಖಿಲ್ ಕುಮಾರಸ್ವಾಮಿ ಹೆಸರಲ್ಲಿ 1.488 ಕೆಜಿ ಚಿನ್ನ, 16 ಕೆಜಿ ಬೆಳ್ಳಿ ಹಾಗೂ ರೇವತಿ ಹೆಸರಲ್ಲಿ 1.411 ಕೆಜಿ ಚಿನ್ನ, 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ ಎರಡು ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟ ಕಾರು ಇದೆ. ಇನ್ನು ನಿಖಿಲ್ ಹೆಸರಲ್ಲಿ ಒಟ್ಟು 70.44 ಕೋಟಿ ಸಾಲ ಇದೆ. ತಮ್ಮ ಪತ್ನಿ ಹೆಸರಲ್ಲಿ 4.96 ಕೋಟಿ ರೂ. ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ನಡೆದ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋಲುಕಂಡಿದ್ದರು. ಆಗ ನಿಖಿಲ್ ತಮ್ಮ ಬಳಿ 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದರು. ಆದ್ರೆ, ಇದೀಗ ಚನ್ನಪಟ್ಟಣ ಉಪಚುನಾವಣೆ ವೇಳೆ 113 ಕೋಟಿ ರೂ. ಆಸ್ತಿ ಇದೆ ಎಂದು ತೋರಿಸಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ನಿಖಿಲ್ ಆಸ್ತಿ ಬರೋಬ್ಬರಿ 36 ಕೋಟಿ ರೂ. ಏರಿಕೆಯಾಗಿದೆ.
ಇನ್ನು ಆಗ ನಿಖಿಲ್ 38.94 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರು. ಈಗ ಆ ಸಾಲ 70.44 ಕೋಟಿ ರೂಪಾಯಿಗೆ ಏರಿಕೆಯಾಗಿದೆ.