ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಗೆ (Channapatna by election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಮೈತ್ರಿ ಅಭ್ಯರ್ಥಿಯನ್ನು ಜೆಡಿಎಸ್ ಮತ್ತು ಬಿಜೆಪಿ ಘೋಷಿಸಿವೆ. ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಿಂದ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸ್ಪರ್ಧಿಸುವುದಾಗಿ ಮೈತ್ರಿ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ನಾಯಕರು ಸೇರಿ ಟಿಕೆಟ್ ಬಗ್ಗೆ ಗುರುವಾರದ ಅಂತಿಮ ಚರ್ಚೆ ನಡೆಸಿ, ಅಭ್ಯರ್ಥಿಯನ್ನು ಘೋಷಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೇವೆ. ನಮಗೆ ಪ್ರಧಾನಿ ಮೋದಿ ಅವರ ಆಶೀರ್ವಾದವಿದೆ. ಮೋದಿ ಅವರ ಬೆಂಬಲದಿಂದ ಕುಮಾರಸ್ವಾಮಿ, ಅಶೋಕ್ ಎಲ್ಲರೂ ಒಟ್ಟಾಗಿ ಸೇರಿದ್ದೇವೆ. ನೂರಕ್ಕೆ ನೂರು ನಿಖಿಲ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ | Council bypolls: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಭರ್ಜರಿ ಗೆಲುವು
ನಂತರ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೇರಿ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿದ್ದು, ಕಾರ್ಯಕರ್ತರ ಒತ್ತಡದ ಕಾರಣದಿಂದಾಗಿ ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿಯಿಂದ ಟಿಕೆಟ್ ಸಿಗದೆ ಬೇಸರಗೊಂಡು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್‌ಗೆ ಸೇರಿದ್ದರು. ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಲಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಜೆಡಿಎಸ್‌ನಿಂದ ಟಿಕೆಟ್ ಯಾರಿಗೆ ನೀಡಲಾಗುತ್ತದೆ ಎಂಬ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. ನಾಳೆ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಕ್ಷೇತ್ರದ ಉಪ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಗೆಲ್ಲಲೇಬೇಕೆಂದು ಪಣ ತೊಟ್ಟಿವೆ.