ರಾಮನಗರ: ಸರ್ಕಾರಿ ಶಾಲೆಗೆ 25 ಎಕರೆ ದಾನ ಮಾಡಲು ಅವರೇನು ಮಹಾರಾಜರ ವಂಶಸ್ಥರಾ? ಅವರು ಎಲ್ಲಿ ಜಮೀನು ಕೊಟ್ಟಿದ್ದಾರೆ? 25 ಎಕರೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ, ನಾನೂ ಸಂತೋಷ ಪಡುತ್ತೇನೆ. ಸುಳ್ಳು ಹೇಳಲು ಇತಿ ಮಿತಿ ಇರಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ (Channapatna By Election) ವೇಳೆ ಮುಕುಂದ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಅವರು ಎಲ್ಲಿ ಜಮೀನು ಕೊಟ್ಟಿದ್ದಾರೆ? 25 ಎಕರೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ದಾಖಲೆ ಸಮೇತ ಜನರಿಗೆ ತಿಳಿಸಲಿ, ನಾನೂ ಸಂತೋಷ ಪಡುತ್ತೇನೆ. ಸುಳ್ಳು ಹೇಳಲು ಇತಿ ಮಿತಿ ಇರಬೇಕು. ನಾನು ಇವರ ರೀತಿ ಅದು ಮಾಡಿದ್ದೇನೆ, ಇದು ಮಾಡಿದ್ದೇನೆ ಎಂದು ಬೋರ್ಡ್ ಹಾಕಿಕೊಂಡಿಲ್ಲ. ಆದರೆ, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಎಷ್ಟೆಲ್ಲ ಅಭಿವೃದ್ದಿ ಮಾಡಿದ್ದೇನೆ ಎಂಬುದು ಜನತೆಗೆ ಗೊತ್ತಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | R Ashok: 15 ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಬರೆಯಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ; ಆರ್. ಅಶೋಕ್ ಆರೋಪ
ಶಿಕ್ಷಣ ಕ್ಷೇತ್ರಕ್ಕೆ ನನ್ನ ಕೊಡುಗೆ ಗಮನಿಸಲಿ
ನಾನು ಸಿಎಂ ಆಗುವ ಮೊದಲು ರಾಜ್ಯದಲ್ಲಿ ಎಷ್ಟು ಕಾಲೇಜು, ಹೈಸ್ಕೂಲ್‌ಗಳು ಇದ್ದವು? ನನ್ನ 20 ತಿಂಗಳ ಆಡಳಿತದಲ್ಲಿ ಎಷ್ಟಾದವು ಎಂಬುದಕ್ಕೆ ದಾಖಲೆಗಳೇ ಮಾಹಿತಿ ಕೊಡುತ್ತವೆ. ಯಾರಾದರೂ ತೆಗೆದು ನೋಡಬಹುದು. ಶಿಕ್ಷಣ ಕ್ಷೇತ್ರಕ್ಕೆ ಈ ವ್ಯಕ್ತಿಯ ಕೊಡುಗೆ ಏನು? ಸಾತನೂರು, ಕನಕಪುರ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ. ಪಟ್ಟಿ ಮಾಡಲಿ. ಇಷ್ಟು ವರ್ಷ ಆಡಳಿತ ಮಾಡಿರುವವರಿಗೆ ಅವರ ತವರೂರು ದೊಡ್ಡಾಲಹಳ್ಳಿಯಲ್ಲಿ ಮತಗಳ ಲೀಡ್ ಬರುತ್ತಿಲ್ಲ ಯಾಕೆ? ಇವರು 25 ಎಕರೆ ಕೊಟ್ಟಿದ್ದಾರೋ ಅಥವಾ 25 ಗುಂಟೆ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಜನ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಡಲೆಕಾಯಿ ಕೀಳುತ್ತೇವೆ ಎಂದಿಲ್ಲ, ಸರ್ಕಾರ ಕಿತ್ತೆಸೆಯುತ್ತೇವೆ ಎಂದಿದ್ದೇವೆ
ಸರ್ಕಾರ ಕಿತ್ತೊಗೆಯುವುದು ಎಂದರೆ ಕಡಲೆಕಾಯಿ ಕಿತ್ತ ಹಾಗಲ್ಲ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕಡಲೆಕಾಯಿ ಗಿಡ ಕೀಳುತ್ತೇವೆ ಎಂದಿಲ್ಲ. ಸರ್ಕಾರವನ್ನೇ ಕಿತ್ತೊಗೆಯುತ್ತೇವೆ ಎಂದಿರೋದು. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂಬುದು ಜನರ ಆಸೆ. ಜನರ ಭಾವನೆಯನ್ನಷ್ಟೇ ದೇವೇಗೌಡರು ಹೇಳಿದ್ದಾರೆ ಎಂದರು.
ಮೇಕೆದಾಟಿಗೆ ಪರ್ಮಿಷನ್ ಕೊಟ್ಟರೆ ಮೂರೇ ವರ್ಷದಲ್ಲಿ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ಅವರ ಮಿತ್ರಪಕ್ಷ ಡಿಎಂಕೆಯನ್ನು ಒಪ್ಪಿಸಲಿ. ಕೇಂದ್ರ ಸರ್ಕಾರವನ್ನು ಒಪ್ಪಿಸುವ ಭಾರ ನಮ್ಮದು. ಅವರ ಮಿತ್ರಪಕ್ಷ ಕ್ಯಾತೆ ತೆಗೆದುಕೊಂಡು ಕೂತಿದೆಯಲ್ಲ, ಅದರ ಬಗ್ಗೆ ಅವರು ಮೊದಲು ಬಾಯಿ ತೆರೆಯಲಿ ಎಂದರು.
ನಿಖಿಲ್ ಗೆಲುವು ಖಚಿತ
ಚನ್ನಪಟ್ಟಣ ಕ್ಷೇತ್ರದಲ್ಲಿ ಜನರ ಒಲವು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ವಿಭಿನ್ನ ಪಕ್ಷಗಳಿಂದ ಐದು ಬಾರಿ ಶಾಸಕರಾಗಿ ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಈಗ ಒಬ್ಬ ಯುವಕ ಸ್ಪರ್ಧೆ ಮಾಡಿದ್ದಾನೆ, ಆತನನ್ನು ಒಮ್ಮೆ ನೋಡೋಣ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Pralhad Joshi: ಉಪ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ʼಟೋಕನ್ʼ ಮೊರೆ ಹೋಗಿದೆ; ಜೋಶಿ ಆರೋಪ
ನಾನು ಕೂಡ ಈ ಬಾರಿ 122 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದೇನೆ. ನಿಖಿಲ್ 190 ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ದೇವೇಗೌಡರು, ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ದಾಳಿ ತಡೆಯಲು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿಖಿಲ್ ಗೆಲ್ಲುವುದು ಖಚಿತ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.