ರಾಮನಗರ: ಚನ್ನಪಟ್ಟಣ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಗೆ (Channapatna bypoll) ಟಿಕೆಟ್ ಪಡೆಯಲು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿಗಳಾಗಿದ್ದು, ತಮಗೇ ಟಿಕೆಟ್ ಸಿಗಲಿದೆ ಎಂದು ಇಬ್ಬರೂ ಹೇಳುತ್ತಿದ್ದಾರೆ. ಈ ನಡುವೆ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಅಚ್ಚರಿಯ ಅಭ್ಯರ್ಥಿಯ ಹೆಸರು ಕೇಳಿಬಂದಿದೆ. ಇದಕ್ಕೆ ಬಿಜೆಪಿ ಹೈಕಮಾಂಡ್ ನಾಯಕರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹೌದು, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರ, ಇ. ತುಕಾರಾಂ ಅವರಿಂದ ತೆರವಾದ ಸಂಡೂರು ಕ್ಷೇತ್ರ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಬೇಕಿದೆ. ಈ ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣವು ಹೈವೋಲ್ಟೇಜ್ ಕ್ಷೇತ್ರವಾಗಿದೆ.
ಚನ್ನಪಟ್ಟಣ ಕ್ಷೇತ್ರವು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ʼಕೈʼ ವಶಕ್ಕೆ ಪಡೆಯಲು ಡಿಕೆಶಿ ರಣತಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಚನ್ನಪಟ್ಟಣಕ್ಕೆ ಭೇಟಿ ನೀಡಿದಾಗಲೆಲ್ಲಾ, ತಾನೇ ಅಭ್ಯರ್ಥಿ ಎಂದು ತಿಳಿದುಕೊಂಡು ವೋಟು ಹಾಕಬೇಕು ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಸಹೋದರ ಡಿ.ಕೆ.ಸುರೇಶ್ ಸೋಲಿನಿಂದ ಮುಖಭಂಗವಾದ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಸಿದ್ಧತೆ ಆರಂಭಿಸಿದ್ದಾರೆ.
ಇನ್ನು ಕ್ಷೇತ್ರದಲ್ಲಿ ಒಂದೆಡೆ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದ್ದರೆ, ಮತ್ತೊಂದೆಡೆ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಮಾಜಿ ಸಂಸದ ಪ್ರತಾಪ್ ಸಿಂಹಗೆ (Pratap simha) ಮೈತ್ರಿ ಟಿಕೆಟ್ ಒಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ತಮಗೇ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ. ಆದರೆ, ಸೋತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಅವರಿಗೂ ಮನಸ್ಸಿಲ್ಲ. ಅಲ್ಲದೇ ಡಿ.ಕೆ.ಶಿವಕುಮಾರ್ ಅವರು ಸವಾಲಾಗಿ ಸ್ವೀಕರಿಸಿರುವ ಕ್ಷೇತ್ರದಲ್ಲಿ ಪುತ್ರ ನಿಖಿಲ್‌ನ ಕಣಕ್ಕಿಸಿ, ಅವರ ರಾಜಕೀಯ ಭವಿಷ್ಯ ಪಣಕ್ಕಿಡಲು ಸಿದ್ಧರಿಲ್ಲ. ಹೀಗಾಗಿ ಜೆಡಿಎಸ್ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಸ್ವತಃ ಕೆಲ ಜೆಡಿಎಸ್ ನಾಯಕರೂ ಸಹಮತ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | One Nation One Election: ಒಂದು ದೇಶ ಒಂದು ಚುನಾವಣೆ ಅಪ್ರಾಯೋಗಿಕ ನೀತಿ ಎಂದು ಖರ್ಗೆ ಟೀಕೆ; ಬಿಜೆಪಿ ತಿರುಗೇಟು
ಪ್ರತಾಪ್ ಸಿಂಹಗೆ ಜೆಡಿಎಸ್‌ನಿಂದಲೇ ಟಿಕೆಟ್!
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಪ್ರತಾಪ್ ಸಿಂಹ ಅವರಿಗೆ ಒಕ್ಕಲಿಗ ಸಮುದಾಯದಲ್ಲಿ ಅನುಕಂಪವಿದೆ. ಅಲ್ಲದೇ ಎರಡು ಬಾರಿ ಸಂಸದರಾಗಿದ್ದಾಗ ಉತ್ತಮ ಕಾರ್ಯನಿರ್ವಹಣೆಯಿಂದ ಕ್ಷೇತ್ರದಲ್ಲಿ ಮೆಚ್ಚುಗೆ ಪಡೆದಿದ್ದರು. ಅಲ್ಲದೇ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ, ಶಾಸಕ ಜಿ.ಟಿ. ದೇವೇಗೌಡ ಸೇರಿ ಹಲವು ದಳ ನಾಯಕರೊಂದಿಗೆ ಪ್ರತಾಪ್‌ಸಿಂಹ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿ ಸ್ವತಃ ಜೆಡಿಎಸ್ ನಾಯಕರಾದ ಮಾಜಿ ಸಚಿವ ಸಾ.ರಾ. ಮಹೇಶ್, ಬಂಡೆಪ್ಪ ಕಾಶೆಂಪುರ್ ಸೇರಿ ಹಲವು ನಾಯಕರು ಪ್ರತಾಪ್ ಸಿಂಹ ಅವರಿಗೆ ಜೆಡಿಎಸ್ ಟಿಕೆಟ್ ನೀಡಿ, ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.