ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಗೆ (Channapatna By Election, Channapatna Bypoll) ಕಾಂಗ್ರೆಸ್‌ನಿಂದ ಟಿಕೆಟ್ ಪಡೆದಿರುವ ಸಿಪಿ ಯೋಗೇಶ್ವರ್ (CP Yogeshwara) ಅವರ ಸ್ಪರ್ಧೆಗೆ ಪಕ್ಷದೊಳಗೇ ಮುನಿಸು ಕಾಣಿಸಿಕೊಂಡಿದೆ. ಅಸಮಾಧಾನ ತಣಿಸಲು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಅವರು ಪ್ರಯತ್ನಿಸುತ್ತಿದ್ದು, ಕ್ಷೇತ್ರದಲ್ಲಿನ ಮೂಲ ಕಾಂಗ್ರೆಸಿಗರು ಹಾಗೂ ಯೋಗೇಶ್ವರ್ ಬೆಂಬಲಿಗರ ಜೊತೆ ಸಮನ್ವಯ ಸಭೆಗೆ ಮುಂದಾಗಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಈವರೆಗೂ ಬಿಜೆಪಿಯಲ್ಲಿದ್ದು ಚುನಾವಣೆ ಎದುರಿಸಿರುವುದರಿಂದ ಅವರ ಬೆಂಬಲಿಗರೂ ಹಾಗೂ ಕಾಂಗ್ರೆಸ್ಸಿಗರ ನಡುವೆ ಸಾಂಪ್ರದಾಯಿಕ ವೈರತ್ವ ಇದೆ. ಈಗ ಸೈನಿಕ ಕಾಂಗ್ರೆಸ್ ಸೇರಿದ ಬಳಿಕ ಬೆಂಬಲಿಗರ ನಡುವೆ ಗೊಂದಲ, ಅಸಮಾಧಾನ ಭುಗಿಲೆದ್ದಿದೆ.
ಈ ಹಿನ್ನೆಲೆಯಲ್ಲಿ ಇಂದು ಡಿ.ಕೆ.ಸುರೇಶ್ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಮೂಲ ಕಾಂಗ್ರೆಸ್ಸಿಗರು ಹಾಗೂ ಯೋಗೇಶ್ವರ್ ಬೆಂಬಲಿಗರು ಭಾಗಿಗಳಾಗಲಿದ್ದಾರೆ. ಹೊಂಗನೂರು – ಮಳೂರು – ಬೇವೂರು ಜಿ.ಪಂ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್ ಭಾಗಿಯಾಗಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಇಬ್ಬರೂ ನಾಯಕರು, ಎರಡೂ ಕಡೆಯ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
“ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನವಿಲ್ಲ. ಕೆಲವರು ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಈಗ ಅಸಮಾಧಾನವಿಲ್ಲ. ಸುರೇಶ್ ಅವರೇ ಜವಾಬ್ದಾರಿ ವಹಿಸಿದ್ದು, ಅವರೇ ಅಭ್ಯರ್ಥಿಯನ್ನು ಮೊದಲು ಭೇಟಿ ಮಾಡಿದ್ದಾರೆ. ಪಕ್ಷದ ಹಿತದಿಂದ ನಾವು ಈ ತೀರ್ಮಾನ ಮಾಡಿದ್ದೇವೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: Channapatna by election: ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ; ಚನ್ನಪಟ್ಟಣ ಕೈ ಅಭ್ಯರ್ಥಿ ಗೆಲ್ಲೋ ವಿಶ್ವಾಸವಿದೆ ಎಂದ ಸಿಎಂ