Sunday, 15th December 2024

Cheating case: ವಂಚನೆ ಕೇಸ್‌ನಲ್ಲಿ ಪ್ರಲ್ಹಾದ್‌ ಜೋಶಿ ಪಾತ್ರ ಇಲ್ಲ, ಕೊಟ್ಟಿರೋದು 25 ಲಕ್ಷ ಮಾತ್ರ: ದೂರುದಾರೆ ಸ್ಪಷ್ಟನೆ

Cheating case

ಹುಬ್ಬಳ್ಳಿ: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 2.25 ಕೋಟಿ ವಂಚನೆ ಪ್ರಕರಣದಲ್ಲಿ (Cheating case) ಸಹೋದರನ ವಿರುದ್ಧ ಎಫ್‌ಐಆರ್‌ ಆಗಿರುವ ಹಿನ್ನೆಲೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ತಮ್ಮ ಸಹೋದರ ಗೋಪಾಲ್‌ ಜೋಶಿ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ. ಇನ್ನು ಈ ಬೆಳವಣಿಗೆಗಳ ಬಗ್ಗೆ ದೂರುದಾರೆ ಸುನೀತಾ ಚವ್ಹಾಣ ಪ್ರತಿಕ್ರಿಯಿಸಿ, ಈ ಕೇಸ್‌ನಲ್ಲಿ ಪ್ರಲ್ಹಾದ್‌ ಜೋಶಿ ಪಾತ್ರ ಏನೂ ಇಲ್ಲ, ಅವರು ತುಂಬಾ ಒಳ್ಳೆಯವರು. ವಿನಾಕಾರಣ ಪ್ರಲ್ಹಾದ್‌ ಜೋಶಿ ಹಾಗೂ ಅಮಿತ್ ಶಾ ಅವರ ಹೆಸರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ದೂರುದಾರೆ ಸುನೀತಾ ಚವ್ಹಾಣ ಅವರು, ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಪಾತ್ರ ಏನೂ ಇಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಪಾಪ ಪ್ರಲ್ಹಾದ್ ಜೋಶಿ ಅವರ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತುಂಬಾ ಒಳ್ಳೆಯವರು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಲ್ಹಾದ್ ಜೋಶಿ ಅವರನ್ನು ನಾನು ಭೇಟಿ ಮಾಡಬೇಕಿತ್ತು. ಆದರೆ, ಅದಕ್ಕೆ ಇವರು ಬಿಡಲಿಲ್ಲ. ಈ ವಂಚನೆ ಪ್ರಕರಣದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಅವರದ್ದಾಗಲಿ, ದೇವಾನಂದ ಚವ್ಹಾಣ ಅವರದ್ದಾಗಲಿ ಯಾವ ಪಾತ್ರವೂ ಇಲ್ಲವೆಂದು ಹೇಳಿದರು.

ಅಮಿತ್ ಶಾರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ: ‌

ತಾವು ದಾಖಲಿಸಿರುವ ಈ ಪ್ರಕರಣದಲ್ಲಿ ಅಮಿತ್ ಶಾ ಮತ್ತು ಪ್ರಲ್ಹಾದ ಜೋಶಿ ಅವರನ್ನು ಎಳೆದು ತರುವುದು ನನಗೆ ಸರಿ ಕಾಣುವುದಿಲ್ಲ ಎಂದು ಸುನೀತಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

25 ಲಕ್ಷ ಮಾತ್ರ ಕೊಟ್ಟಿದ್ದೇನೆ

ಬಿಜೆಪಿ ಟಿಕೆಟ್‌ಗಾಗಿ ಗೋಪಾಲ್ ಜೋಶಿ ಅವರಿಗೆ ನಾನು ಕೊಟ್ಟಿರುವುದು 25 ಲಕ್ಷ ಮಾತ್ರ. 2 ಕೋಟಿ ಎಲ್ಲಾ ಸುಳ್ಳು. 2 ಕೋಟಿ ಅಂತೆಲ್ಲಾ ಹೇಳುತ್ತಾರಷ್ಟೇ! ಎಂದು ಸ್ವತಃ ದುರುದಾರೆ ಸುನೀತಾ ಅವರೇ ಮಧ್ಯಮಗಳೆದುರು ಸ್ಪಷ್ಟಪಡಿಸಿದರು.

ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದೂರು ಕೊಟ್ಟಿದ್ದೇನೆ. ಆದರೆ, ಇದರಲ್ಲಿ ಬಿಜೆಪಿ ಹೈಕಮಾಂಡ್ ಹೆಸರನ್ನು ವಿನಾಕಾರಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುನೀತಾ ಚವ್ಹಾಣ ತೀವ್ರ ಬೇಸರ ಹೊರ ಹಾಕಿದರು. ಗೋಪಾಲ್ ಜೋಶಿ ಹೊರತಾಗಿ ಪ್ರಲ್ಹಾದ ಜೋಶಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಹೈಕಮಾಂಡ್ ಅನ್ನು ಇದಕ್ಕೆ ತಳುಕು ಹಾಕಬೇಡಿ ಎಂದು ಮಾದ್ಯಮದವರಲ್ಲಿ ಮನವಿ ಮಾಡಿದರು.

ನಾನು ನೇರವಾಗಿ ಗೋಪಾಲ್ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ. ಹಣ ವಾಪಸ್ ಕೊಟ್ಟಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರಲಿಲ್ಲ ಎಂದು ಸುನೀತಾ ಚೌವ್ಹಾಣ್ ಪ್ರತಿಕ್ರಿಯಿಸಿದರು.