Thursday, 19th September 2024

Assault on Doctor: ವೈದ್ಯನ ಕುತ್ತಿಗೆ ಪಟ್ಟಿ ಹಿಡಿದು, ಚಪ್ಪಲಿಯಿಂದ ಹಲ್ಲೆ ಮಾಡಿದ ಬುರ್ಖಾಧಾರಿ ಮಹಿಳೆ!

Assault on Doctor

ಚಿಕ್ಕಮಗಳೂರು: ವೈದ್ಯನ ಮೇಲೆ ಬುರ್ಖಾಧಾರಿ ಮಹಿಳೆಯೊಬ್ಬರು ಹಲ್ಲೆ ಮಾಡಿರುವ ಘಟನೆ ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೂಳೆರೋಗ ತಜ್ಞ ಡಾ. ವೆಂಕಟೇಶ್ ಎಂಬುವರ ಮೇಲೆ ಹಲ್ಲೆ (Assault on Doctor) ನಡೆದಿದ್ದು, ಕುತ್ತಿಗೆ ಪಟ್ಟಿ ಹಿಡಿದು, ಎಳೆದಾಡಿ ಚಪ್ಪಲಿಯಿಂದ ಹಲ್ಲೆ ಮಾಡಲಾಗಿದೆ.

ಮೂಳೆರೋಗ ತಜ್ಞ ಡಾ. ವೆಂಕಟೇಶ್ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಮಹಿಳೆ ಪರಾರಿಯಾಗಿದ್ದಾರೆ. ರೋಗಿಯ ಸಹೋದರಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ವೈದ್ಯನ ಮೇಲೆ ಮಹಿಳೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಖಂಡಿಸಿದ್ದು, ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಪಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಿ.ಟಿ.ರವಿ ಅವರು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿ, ಡಾ. ವೆಂಕಟೇಶ್ ಅವರ ಮೇಲೆ ಹಲ್ಲೆಯಾದ ಅಮಾನವೀಯ ಘಟನೆ ನಡೆದಿದೆ. ಗೃಹ ಸಚಿವರಾದ ಡಾ.ಪರಮೇಶ್ವರ ಅವರು, ಇಂತಹ ನೀಚ ಕೃತ್ಯ ಎಸಗಿದವರನ್ನು ಈ ಕೂಡಲೇ ಬಂಧಿಸಿ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು. ಡಿಜಿಪಿ ಅಲೋಕ್ ಮೋಹನ್ ಅವರೇ, ತಾವು ಈ ಕೂಡಲೇ ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟು, ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವೈದ್ಯನ ಮೇಲೆ ಹಲ್ಲೆ ಖಂಡಿಸಿ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ, ದಿಢೀರ್ ಮುಷ್ಕರ ನಡೆಸಿದರು. ಇದರಿಂದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಯ ಬಳಿ ನೂರಾರು ಸಾರ್ವಜನಿಕರೂ ಕೂಡ ಸೇರಿದರು. ಇದರಿಂದ ಚಿಕಿತ್ಸೆ ಆಗಮಿಸಿದ್ದ ರೋಗಿಗಳು ಪರದಾಡುವಂತಾಯಿತು.

Leave a Reply

Your email address will not be published. Required fields are marked *