ಬೆಂಗಳೂರು: ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕರು ಹಾಗೂ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆಯಾಗದಂತೆ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕಿಯರು ಹಾಗೂ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯವನ್ನು (Childcare leave) ಮಂಜೂರು ಮಾಡಲು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎ.ಮಹಾಲಕ್ಷ್ಮಿ ಅವರು ಸುತ್ತೋಲೆ ಹೊರಡಿಸಿದ್ದಾರೆ. ಅನುದಾನಿತ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕರು, ನೌಕರರಿಗೆ ಶಿಶುಪಾಲನಾ ರಜೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆಯಾಗದಂತೆ ವಿಸ್ತರಿಸಲು ಹಾಗೂ ರಜೆಯ ಸಮಯದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಆಯಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರೇ ಸ್ವಂತ ಸಂಪನ್ಮೂಲದಿಂದ ಒದಗಿಸಿಕೊಂಡು ವಿಸ್ತರಿಸಲು ಅಗತ್ಯ ಕ್ರಮವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Laxmi hebbalkar: ಬಾಲಕಿಯ ಸಂಕಷ್ಟಕ್ಕೆ ಮಿಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್; ವಿದ್ಯಾಭ್ಯಾಸಕ್ಕೆ ನೆರವು
ಪಿಎಸ್ಐ ಪರೀಕ್ಷೆ ಅಂತಿಮ ಫಲಿತಾಂಶ ಪ್ರಕಟ; ಇಲ್ಲಿದೆ ಲಿಂಕ್
ಬೆಂಗಳೂರು: 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ (PSI Exam) ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಅಭ್ಯರ್ಥಿಗಳು ಕೆಇಎ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಅ.3ರಂದು ನಡೆದಿದ್ದ ಪಿಎಎಸ್ಐ ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ನ.6ರಂದ ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಇದೀಗ ಅಂತಿಮ ಅಂಕಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ನಿಗದಿತ ದಿನಾಂಕದೊಳಗೆ ಪತ್ರಿಕೆ-1ಕ್ಕೆ 313 ಹಾಗೂ ಪತ್ರಿಕೆ-2 ಕ್ಕೆ 219 ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಪತ್ರಿಕೆ-1ರ 1ನೇ ಮೌಲ್ಯಮಾಪನದ ಅಂಕಗಳು, 2ನೇ ಮೌಲ್ಯಮಾಪನದ ಅಂಕಗಳು ಮತ್ತು 3ನೇ ಮೌಲ್ಯಮಾಪನದ ಅಂಕಗಳು (1ನೇ & 2ನೇ ಮೌಲ್ಯಮಾಪನದಲ್ಲಿ 8 ಅಥವಾ 8 ಕ್ಕಿಂತ ಹೆಚ್ಚಿನ ಅಂಕಗಳ ವ್ಯತ್ಯಾಸವಿದ್ದ ಪತ್ರಿಕೆಗಳನ್ನು ಮಾತ್ರ 3ನೇ ಮೌಲ್ಯಮಾಪನ ಮಾಡಲಾಗಿದೆ. ಇವುಗಳನ್ನು ಮತ್ತೊಮ್ಮೆ ಪರಿಶೀಲಿಸಿದ್ದು (ಮರು ಏಣಿಕೆ), ಈಗಾಗಲೇ ಈ ವಿದ್ಯಾರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆದ್ದರಿಂದ ಇವರ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲವೆಂದು ತೀರ್ಮಾನಿಸಲಾಯಿತು ಎಂದು ತಿಳಿಸಿದೆ.
ಪತ್ರಿಕೆ-2 ರ ಒ.ಎಮ್.ಆರ್ ಉತ್ತರ ಪತ್ರಿಕೆಯು ಅಂತಿಮ ಕೀ ಉತ್ತರಗಳೊಂದಿಗೆ ಮೌಲ್ಯಮಾಪನವಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿದ್ದು, ಈಗಾಗಲೇ ಈ ವಿದ್ಯಾರ್ಥಿಗಳು ಪಡೆದಿರುವುದಾಗಿ ಪ್ರಕಟಿಸಿರುವ ಅಂಕಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ. ಆದ್ದರಿಂದ ಇವರ ಆಕ್ಷೇಪಣೆಗಳನ್ನು ಪುರಸ್ಕರಿಸಲು ಅವಕಾಶವಿರುವುದಿಲ್ಲವೆಂದು ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳು ಗಳಿಸಿದ ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿಯನ್ನು ಸಂಬಂಧಪಟ್ಟ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ಸಂಬಂಧಪಟ್ಟ ಸಂಸ್ಥೆಯವರು ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಿದ್ದಾರೆ ಎಂದು ಕೆಇಎ ತಿಳಿಸಿದೆ.
ಪಿಎಸ್ಐ ಪರೀಕ್ಷೆ ಅಂತಿಮ ಫಲಿತಾಂಶಕ್ಕೆ ಕೆಇಎ ವೆಬ್ಸೈಟ್ https://cetonline.karnataka.gov.in/kea/PSIREC2024 ಗೆ ಭೇಟಿ ನೀಡಿ.