Thursday, 19th September 2024

Chamarajapet Playground: ಹುಬ್ಬಳ್ಳಿ ಈದ್ಗಾ ಮೈದಾನದಂತೆ ಚಾಮರಾಜಪೇಟೆ ಮೈದಾನದಲ್ಲೂ ಗಣೇಶ ಕೂರಿಸಲು ಬಿಡಿ; ಹೈಕೋರ್ಟ್‌ಗೆ ಮನವಿ

CHAMARAJAPET playground

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ (Chamarajapet Playground) ಸಾರ್ವಜನಿಕ ಗಣೇಶ ಮೂರ್ತಿ (Ganeshotsava) ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ಕೋರಿ ಚಾಮರಾಜಪೇಟೆ ನಾಗರೀಕ ಒಕ್ಕೂಟ ನಾಳೆ ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಇದರೊಂದಿಗೆ, ಕೆಲವು ವರ್ಷಗಳಿಂದ ಸದಾ ವಿವಾದದಲ್ಲಿರುವ ಮೈದಾನ ಮತ್ತೊಮ್ಮೆ ಸುದ್ದಿಯಾಗಲು ಸಜ್ಜಾಗಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಚಾಮರಾಜಪೇಟೆ ‌ನಾಗರೀಕರ‌ ಒಕ್ಕೂಟದ ಅಧ್ಯಕ್ಷ ರಾಮೇಗೌಡ, ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಚಾಮರಾಜಪೇಟೆ ‌ಆಟದ ಮೈದಾನ, ಅದು ಸರ್ಕಾರಿ ಸ್ವತ್ತು. ಕಂದಾಯ ಇಲಾಖೆಯ ಹೆಸರಿನಲ್ಲಿ ಆಟದ ಮೈದಾನ ಇದೆ. ಸಾಕಷ್ಟು ಹೋರಾಟ ಮಾಡಿದ ಫಲವಾಗಿ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ದಿನಾಚರಣೆ ಮೈದಾನದಲ್ಲಿ ನಡೆಸಲಾಗುತ್ತಿದೆ. ಇದೀಗ ಗಣೇಶ ಹಬ್ಬದ ಸಂಭ್ರಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೂ ಅವಕಾಶ ಮಾಡಿಕೊಡುವಂತೆ ನಾವು ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಲಿದ್ದೇವೆ ಎಂದರು.

ನಾವು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಪ್ರಕರಣ ಕೋರ್ಟ್‌ನಲ್ಲಿದೆ ಅಂತ ಹೇಳಿದ್ದಾರೆ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಕ್ಕಿದೆ. ಅದೇ ರೀತಿ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲೂ ಅನುಮತಿ ಕೊಡಬೇಕು. ಮುಸ್ಲಿಂ ಸಮುದಾಯ ವರ್ಷದಲ್ಲಿ ಸಾಮೂಹಿಕವಾಗಿ ಹಬ್ಬ ಆಚರಣೆ ಮಾಡ್ತಾರೆ. ಅದಕ್ಕೆ ‌ನಾವು ಸಹಕಾರ‌ ಕೊಡುತ್ತಾ ಬಂದಿದ್ದೇವೆ. ಅದೇ ರೀತಿ ನಮಗೂ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಬೇಕು ಎಂದರು.

ಮೈದಾನ ಸಿಗದೆ ಒಕ್ಕೂಟದ ವತಿಯಿಂದ ರಸ್ತೆಯಲ್ಲಿ ಗಣೇಶೋತ್ಸವ ಮಾಡ್ತಾ ಇದ್ದೇವೆ. ಆದ್ರೆ ಈ ಬಾರಿ ಆ ರೀತಿ ಮಾಡೋದು ಬೇಡ. ನಾವು ಗಣೇಶೋತ್ಸವ ಮಾಡಿದ್ರೆ ಚಾಮರಾಜಪೇಟೆ ಮೈದಾನದಲ್ಲೇ ಮಾಡಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದೇವೆ. ನಮಗೆ ಅನುಮತಿ ಸಿಗುತ್ತೆ ಕೋರ್ಟ್ ಮೇಲೆ ವಿಶ್ವಾಸವಿದೆ. ಈ ವಾರದಲ್ಲೇ ಅನುಮತಿ ಸಿಕ್ಕರೆ ಗಣೇಶೋತ್ಸವ ಮಾಡೇ ಮಾಡುತ್ತೇವೆ ಎಂದರು.

ಈ ಸುದ್ದಿ ಓದಿ: ಈದ್ಗಾ ಮೈದಾನದ ಮಾಲೀಕತ್ವ: ಇಂದು ವಿಚಾರಣೆ