Thursday, 12th December 2024

ಭಾರಿ ಮಳೆ: ಹಾನಿಗೊಳಗಾದ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರ – ಸಿಎಂ ಘೋಷಣೆ

ಬೆಂಗಳೂರು: ನಗರದಲ್ಲಿ ಉಂಟಾದ ಭಾರಿ ಮಳೆಯಿಂದ ಮನೆ ಹಾನಿ ಹಾಗೂ ಇನ್ನಿತರೆ ಸಂಕಷ್ಟಗಳನ್ನು ಅನುಭವಿಸಿದ ಕುಟುಂಬಕ್ಕೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಸಚಿವರು, ಅಧಿಕಾರಿಗಳ ಜತೆ ಸಭೆ ಬಳಿಕ ಯಡಿಯೂರಪ್ಪ ಈ ಘೋಷಣೆ ಮಾಡಿದ್ದಾರೆ. ಹಾನಿಗೊಳಗಾದ ಕುಟುಂಬದವರಿಗೆ ಚೆಕ್ ಮೂಲಕ ತಲಾ 25,000 ರೂ. ಪರಿಹಾರವನ್ನು ತಕ್ಷಣಕ್ಕೆ ಒದಗಿಸುವುದಾಗಿ ಅವರು ಶನಿವಾರ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯ ಹಿನ್ನಲೆಯಲ್ಲಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋ ಕಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮತ್ತು ಭಾನುವಾರ ಕೂಡ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಯನ್ನು ನೀಡಿದೆ.

ಗೃಹ ಕಚೇರಿ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಂದಾಯ ಸಚಿವ ಆರ್. ಅಶೋಕ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಬಿ.ಬಿ.ಎಂ. ಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಉಪಸ್ಥಿತರಿದ್ದರು.