Sunday, 24th November 2024

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮೊದಲ ದಿನವೇ ನೂತನ ಸಿಎಂ ಬೊಮ್ಮಾಯಿ ಭಾಗಿ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮೊದಲ ದಿನವೇ ವಿಶ್ವವಾಣಿ ಕ್ಲಬ್ ಹೌಸ್ ಸಂವಾದದಲ್ಲಿ ಭಾಗವಹಿಸುವ ಮೂಲಕ ಸಂಚಲನ ಮೂಡಿಸಿದರು.

ಬುಧವಾರ ಸಂಜೆ 7 ಗಂಟೆಗೆ ಗಾಯಕ ವಿಜಯ ಪ್ರಕಾಶ್ ಅವರೊಂದಿಗೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ದಿಢೀರ್ ಎಂಟ್ರಿ ಕೊಟ್ಟ ನೂತನ ಸಿಎಂ, ತಮ್ಮ ಸಂಪುಟ ನಿರ್ಧಾರವನ್ನು ವಿಶ್ವವಾಣಿ ಕ್ಲಬ್‌ಹೌಸ್‌ನ ಮೂಲಕ ಪ್ರಕಟ ಮಾಡಿದರು.

ಈ ವೇಳೆ ಮಾತನಾಡಿದ ಅವರು, ವಿಶ್ವವಾಣಿ ಕ್ಲಬ್‌ಹೌಸ್ ಪರಿಕಲ್ಪನೆ ಅದ್ಭುತವಾಗಿದೆ. ಪ್ರತಿ ದಿನ ಒಬ್ಬೊಬ್ಬರು ಗಣ್ಯರೊಂದಿಗೆ ನಡೆಯುತ್ತಿರುವ ಸಂವಾದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ವಿಶ್ವವಾಣಿ ಮತ್ತು ವಿಶ್ವೇಶ್ವರ ಭಟ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ನಂತರ ತಮ್ಮ ಮೊದಲ ದಿನದ ಕ್ಯಾಬಿನೆಟ್‌ನಲ್ಲಿ ತೆಗೆದು ಕೊಂಡ ತೀರ್ಮಾನದ ಬಗ್ಗೆ ಮಾತನಾಡಿದ ಅವರು, ರೈತರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬಹಳ ಅನಾನುಕೂಲವಾಗು ವಂತೆ ಅವರ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುವ ನಿಟ್ಟಿನಲ್ಲಿ 1 ಸಾವಿರ ಕೋಟಿ ರು. ಮೀಸಲಿಡಲು ತೀರ್ಮಾನಿಸಲಾಗಿದೆ.

ಇದು ದೇಶದಲ್ಲೇ ಮೊದಲ ಪ್ರಯತ್ನವಾಗಿದ್ದು, ನಾನು ಸಿಎಂ ಆದ ದಿನವೇ ಘೋಷಣೆ ಮಾಡಿದ್ದೇನೆ. ರೈತರ ಮಕ್ಕಳು ಮುಂದೆ ಬರಬೇಕು, ವಿದ್ಯಾವಂತರಾಗ ಬೇಕು ಎನ್ನುವುದು ನನ್ನ ಉದ್ದೇಶ. ಹಿರಿಯ ನಾಗರೀಕರ ಮಾಶಾಸನವನ್ನು 1000 ದಿಂದ 1200 ರು. ಹಾಗೂ ದಿವ್ಯಾಂಗರ ಮಾಶಾಸನವನ್ನು 600 ರಿಂದ 800 ರು.ಗೆ ಹೆಚ್ಚಳ ಮಾಡಲು ತೀರ್ಮಾನಿಸಿದ್ದೇವೆ ಎಂದು ಘೊಷಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಯಲ್ಲಿ ವಿಜಯ ಪ್ರಕಾಶ್ ಹಾಡು
ಗಾಯಕ ವಿಜಯ ಪ್ರಕಾಶ್ ಅವರ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು, ತಾವು ಸಿಎಂ ಆಗಿ ಆಯ್ಕೆಯಾದ ನಂತರ ಕುಟುಂಬ ಸದಸ್ಯರೆಲ್ಲ ಸೇರಿ ಪುನೀತ್ ರಾಜ್‌ಕುಮಾರ್ ಅಭಿನಯದ ’ರಾಜಕುಮಾರ’ ಸಿನಿಮಾದಲ್ಲಿ ವಿಜಯಪ್ರಕಾಶ್ ಹಾಡಿರುವ ‘ಗೊಂಬೆ ಹೇಳುತೈತೆ, ಮತ್ತೇ ಹೇಳುತೈತೆ, ನೀನೇ ರಾಜಕುಮಾರ‘ ಎಂಬ ಗೀತೆ ಹಾಡಿದ್ದನ್ನು ಸ್ಮರಿಸಿದರು. ಈ ಗಾಯನದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯವನ್ನು ಸ್ವತಃ ಸಿಎಂ ಬೊಮ್ಮಾಯಿ ಅವರೇ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹಂಚಿಕೊಂಡು ಸಂತಸಪಟ್ಟರು. ವಿಜಯಪ್ರಕಾಶ್ ಅವರು ಬೊಮ್ಮಾಯಿ ಅವರಿಗೆ ಮತ್ತು ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು.