Sunday, 15th December 2024

ಸಿಎಂ ಕುರ್ಚಿಗೆ ಕೋವಿಶೀಲ್ಡ್ !

ಸದ್ಯಕ್ಕೆ ಬದಲಾಗದು ನಾಯಕತ್ವ | ತಕ್ಷಣಕ್ಕೆ ಬದಲಿ ವ್ಯವಸ್ಥೆ ಇಲ್ಲದೆ ಹಿಂದೆ ಸರಿದ ಹೈಕಮಾಂಡ್

ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ಕೋವಿಡ್ ಭೀಕರತೆಯ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಬೇಕೆನ್ನುವ ಸೋಂಕು ಈಗ ಪಕ್ಷದೊಳಗೆ ವ್ಯಾಪಕವಾಗಿ ಹರಡುತ್ತಿದೆ.

ಇಷ್ಟು ದಿನ ತೆರೆಮರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆಗಳ ಮೂಲಕ ಜೀವಂತವಾಗುತ್ತಿದ್ದ ನಾಯಕತ್ವ
ವಿಚಾರ ಈಗ ಸುಪ್ತವಾಗಿಯೇ ಬಲಗೊಳ್ಳುತ್ತಿದೆ. ಅದರಲ್ಲೂ ಮಖ್ಯಮಂತ್ರಿಯಾದಿಯಾಗಿ ಇಡೀ ಸರಕಾರವೇ ಕೋವಿಡ್ ಸೋಂಕಿತರ ಹಾಸಿಗೆ, ಆಕ್ಸಿಜನ್, ಔಷಧ ಒದಗಿಸುವ ಹೋರಾಟದಲ್ಲಿ ನಿರತರಾಗಿರುವ ಸಂದರ್ಭದಲ್ಲೂ ಕೆಲವರು ನಾಯಕತ್ವ ಬದಲಾವಣೆಗೆ ಆದ್ಯತೆ ನೀಡಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದರೆ ಇದರ ಹಿಂದೆ ಬಲವಾದ ತಂತ್ರಗಾರಿಕೆ ನಡೆಯುತ್ತಿದೆ
ಎನ್ನುವುದು ಸಾಮಾನ್ಯನಿಗೂ ತಿಳಿಯುತ್ತಿದೆ.

ಅಂದಹಾಗೆ, ಪಕ್ಷದೊಳಗೆ ನಾಯಕತ್ವ ಬದಲಾವಣೆ ಪ್ರಸ್ತಾಪ ಇರುವುದು ನಿಜ. ಇದಕ್ಕೆ ಪಕ್ಷದ ದಿಲ್ಲಿ ವರಿಷ್ಠರು ಪುಷ್ಠಿ ನೀಡುತ್ತಿರುವುದೂ ಅಷ್ಟೇ ವಾಸ್ತವ. ವಿಚಿತ್ರವೆಂದರೆ, ನಾಯಕತ್ವ ಬದಲಾವಣೆಗೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ತಾತ್ವಿಕವಾಗಿ ಸಮ್ಮತಿಸಿರುವುದೂ ದಿಟ.

ಇಷ್ಟಾದರೂ ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಆಗುವುದಿಲ್ಲ. ಅವರ ಬದಲಾವಣೆ ಮಾಡುವ ಪ್ರಯತ್ನ ಗಳೂ ಫಲಿಸುವುದಿಲ್ಲ. ಏಕೆಂದರೆ, ಈಗ ಯಡಿಯೂರಪ್ಪ ಅವರನ್ನು ಕಾಪಾಡಲು ಅವರ ಬೆನ್ನಿಗೆ ಪಕ್ಷದ ವರಿಷ್ಠರಾಗಲಿ, ಲಿಂಗಾಯತ ಮಠಾಧೀಶರಾಗಲಿ ಇಲ್ಲ. ಬದಲಾಗಿ ಭೀಕರ ಕರೋನಾವೇ ಬಂದು ನಿಂತಿದೆ ಎನ್ನುತ್ತಿದ್ದಾರೆ ಪಕ್ಷದ ಹಿರಿಯ
ನಾಯಕರು.

ಸದ್ಯ ಸಿಎಂ ಕುರ್ಚಿ ರಕ್ಷಕ ಯಾರು?: ಮೂಲಗಳು ಪ್ರಕಾರ ನಾಯಕತ್ವ ಬದಲಾವಣೆ ಸಮಯ ಬಂದಾಗ ಸದ್ಯ ಕೇಳಿಬರುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಡಿಸಿಎಂ ಅಶ್ವತ್ ನಾರಾಯಣ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಹಾಗೂ ಅರವಿಂದ ಲಿಂಬಾವಳಿ ಇವರ‍್ಯಾರ ಹೆಸರುಗಳೂ ಇರುವುದಿಲ್ಲ. ಬದಲಾಗಿ ಪಕ್ಷದ ವರಿಷ್ಠರು, ಮುಂದಿನ ಕಾಂಗ್ರೆಸ್ ನಡೆ ನೋಡಿ ಮತ್ತು ಬಿಜೆಪಿ ವರ್ಚಸ್ಸು ಬೆಳೆಸುವವರನ್ನು ಸೂಚಿಸುತ್ತಾರೆ. ಆದರೆ ಅಂಥವರ ಪ್ರಸ್ತಾಪ ಸದ್ಯ ವರಿಷ್ಠರ ಮುಂದಿಲ್ಲ.ಈಗ
ಅದರ ಅಗತ್ಯವೂ ಅವರಿಗೆ ಕಾಣುತ್ತಿಲ್ಲ

ಏಕೆಂದರೆ, ಈಗೇನಾದರೂ ಯಡಿಯೂರಪ್ಪ ಅವರನ್ನು ಬದಲಿಸಿದರೆ, ಹೊಸ ಮುಖ್ಯಮಂತ್ರಿ ಆಯ್ಕೆ ರಾಜಕಾರಣಕ್ಕೆ ದಾರಿ ಮಾಡಿದಂತಾಗುತ್ತದೆ. ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ದಿಲ್ಲಿ- ಬೆಂಗಳೂರು ದಾರಿ ಒಂದು ಮಾಡುತ್ತಾರೆ. ಇದರಿಂದ ಯಡಿಯೂರಪ್ಪ ಬೆಂಬಲಿತ ಸಚಿವರು, 21 ಮಂದಿ ವಲಸಿಗರು ದಿಕ್ಕುತಪ್ಪಿ, ಅನಗತ್ಯ ಚಟುವಟಿಕೆಗೆ ದಾರಿಯಾಗುತ್ತದೆ. ಪಕ್ಷ ಮತ್ತು ಸಂಘಟನೆ ದಿಕ್ಕೆಟ್ಟು ಹೋಗುತ್ತದೆ. ಪರಿಣಾಮ ರಾಜ್ಯದಲ್ಲಿ ಕೋವಿಡ್ ಸಾವು, ನೋವು ಹೆಚ್ಚಾಗಿ ಪಕ್ಷಕ್ಕೆ ದೊಡ್ಡ ಕಳಂಕ ಎದುರಾಗುತ್ತದೆ ಎನ್ನುವ ಭೀತಿ ವರಿಷ್ಠರದು.

ಹೀಗಾಗಿ ಜೂನ್‌ವರೆಗೂ ಯಡಿಯೂರಪ್ಪ ಅವರನ್ನು ಕೋವಿಡ್ ರಕ್ಷಣೆ ಮಾಡಿದೆ. ನಂತರ ಮಳೆ ಮತ್ತು ಪ್ರವಾಹ ಉಂಟಾದರೆ ವರುಣನ ರಕ್ಷಣೆ ಸಿಗುತ್ತದೆ. ತದ ನಂತರದಲ್ಲಿ ಕೋವಿಡ್ ಮೂರನೇ ಅಲೆ ಬಂದರೆ, ನಂತರ ಜಿಲ್ಲಾ ಪಂಚಾಯಿತಿ ಚುನಾವಣೆ
ಎಟುಕಿಸಿಕೊಂಡರೆ ಯಡಿಯೂರಪ್ಪ ಅವರನ್ನು ಮುಟ್ಟುವುದು ಕಷ್ಟ ಸಾಧ್ಯ ಎನ್ನುವುದು ವರಿಷ್ಠರ ಲೆಕ್ಕಾಚಾರವಾಗಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಬದಲಾವಣೆ ತಂತ್ರದ ಹಿಂದೆ ಯಾರು ?: ಕೋವಿಡ್ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಹಾಗೂ 75 ರ ಹರೆಯ ದಾಟಿದ್ದಾರೆ ಎನ್ನುವ ನೆಪ ಮುಂದಿಟ್ಟು ಯಡಿಯೂರಪ್ಪ ಅವರನ್ನು ಮೇ 16ರ ಒಳಗಾಗಿ ಬದಲಿಸಬೇಕು ಎನ್ನುವ ಪ್ರಯತ್ನಗಳು ತೆರೆಮರೆ ಯಲ್ಲಿ ಕಳೆದೊಂದು ತಿಂಗಳಿನಿಂದ ನಡೆದಿವೆ.

ಇದು ಫಲ ನೀಡದ ಕಾರಣ ಈ ತೆರೆಮರೆಯ ಬದಲಾವಣೆ ಗುರಿ ಈಗ ಜೂನ್ 10ಕ್ಕೆ ನಿಗದಿಯಾಗಿದೆ. ಈ ಹೊಸ ಗುರಿ ಬೆನ್ನತ್ತಿರು ವವರ ಗುಂಪಿನಲ್ಲಿ ಶಾಸಕರಾದ ಪೂರ್ಣಿಮಾ, ಅಭಯ ಪಾಟೀಲ, ಉದಯ ಗರುಡಾಚಾರ್, ಸತೀಶ್ ರೆಡ್ಡಿ, ಬಸನಗೌಡ
ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ, ಸುನೀಲ್ ಕುಮಾರ್ ಸೇರಿದಂತೆ ಅನೇಕರಿzರೆ. ಇವರೆಲ್ಲರನ್ನೂ ಸಮನ್ವಯ ಮಾಡಲು ಇತ್ತೀಚೆಗೆ ಸಂಪುಟ ಸೇರಿದ, ಬಿ.ಎಲ್.ಸಂತೋಷ್ ಬೆಂಬಲಿತ ಸಚಿವರೊಬ್ಬರಿದ್ದಾರೆ.

ಈ ಸಚಿವರು ತಮಗೆ ಜಲಸಂಪನ್ಮೂಲ ಅಥವಾ ಇಂಧನ ಖಾತೆ ಬೇಕು. ಇಲ್ಲವಾದರೆ 25 ಸಿ.ಆರ್. ಬೇಕೆನ್ನುವ ಬೇಡಿಕೆಯನ್ನು ಯಡಿಯೂರಪ್ಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಮೆಗಾ ಸಿಟಿ ಯೋಜನೆಯ ಕೋರ್ಟ್ ಹೋರಾಟ ವ್ಯತಿರಿಕ್ತವಾಗಿದ್ದು, ಇದನ್ನು ತಪ್ಪಿಸಿಕೊಳ್ಳಲು ತಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯ ಮಾಡಿದ್ದಾರೆ.

ಇದಕ್ಕೆ ಬಿಎಸ್‌ವೈ ಒಪ್ಪದ ಕಾರಣ ಕೋವಿಡ್ ಸಂಕಷ್ಟ ಕಾಲದಲ್ಲೂ ನಾಯಕತ್ವ ಬದಲಾವಣೆ ಸೋಂಕನ್ನು ಎಲ್ಲರಿಗೂ ಅಂಟಿಸುತ್ತಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ಹೇಳಿವೆ. ನಾಯಕತ್ವ ಬದಲಾವಣೆ ಬಗ್ಗೆ ತೆರೆಮರೆ ಸಭೆಗಳನ್ನು ನಡೆಸು ತ್ತಿರುವ ಈ ಸಚಿವರು, ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮುಖ್ಯಮಂತ್ರಿ ಪದವಿಯ ಹುಳ ಬಿಡುತ್ತಿದ್ದು, ಇದರ ಪರಿಣಾಮ ಕಷ್ಟಕಾಲದಲ್ಲಿ ಬದಲಾವಣೆ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.