Thursday, 12th December 2024

CM Siddaramaiah: ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಪರಿಶೀಲಿಸಿ ಸೂಕ್ತ ಕ್ರಮ: ಸಿಎಂ ಭರವಸೆ

CM siddaramaiah

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ಹಾಗೂ ಇನ್ನಿತರ ಸೇವಾ ಬೇಡಿಕೆಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳೊಳಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಯೋಗದೊಂದಿಗೆ ಅವರ ಬೇಡಿಕೆಗಳ ಕುರಿತು ಬುಧವಾರ ಸಭೆ ನಡೆಸಿದ ಸಿಎಂ ಅವರು, ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕಾನೂನು ತೊಡಕುಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ನಿಯೋಗದ ಪ್ರತಿನಿಧಿಗಳು, 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ಮಾಡಿದ ಬಳಿಕ ಸೇವಾ ನಿಯಮಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಠಾನಗೊಳಿಸಬಾರದು. ಪದವೀಧರರಾಗಿರುವ 40 ಸಾವಿರಕ್ಕೂ ಹೆಚ್ಚು ಇರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಆದೇಶ ಹೊರಡಿಸಬೇಕು. ನೇಮಕಾತಿ 7ನೇ ತರಗತಿವರೆಗೆ ಎಂದು ಹೇಳಿ ಈಗ 5ನೇ ತರಗತಿವರೆಗೆ ಎಂದು ಹಿಂಬಡ್ತಿ ನೀಡಲಾಗಿದೆ. ಆಯಾ ಜಿಲ್ಲಾ ನೇಮಕಾತಿ ಸಮಿತಿಯ ಮಟ್ಟದಲ್ಲಿ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಈ ಮೊದಲು ಮುಂಬಡ್ತಿ ನೀಡಲಾಗುತ್ತಿತ್ತು. ಅದನ್ನು ಕಳೆದ ಮೂರು ವರ್ಷಗಳಿಂದ ನಿಲ್ಲಿಸಲಾಗಿದ್ದು, ಇದನ್ನು ಮುಂದುವರಿಸಬೇಕು.
ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿಯಲ್ಲಿ, ಮುಂಬಡ್ತಿ ಹುದ್ದೆಗಳನ್ನು ಶೇ.50ರಷ್ಟು ನಿಗದಿಪಡಿಸಬೇಕು. ಮುಂಬಡ್ತಿ ಸಂದರ್ಭದಲ್ಲಿ ಸೇವಾ ಜ್ಯೇಷ್ಠತೆಯನ್ನು ಪರಿಗಣಿಸಬೇಕು ಎಂದು ಶಿಕ್ಷಕರ ಸಂಘದ ನಿಯೋಗ ಮನವಿ ಸಲ್ಲಿಸಿತು.

ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ನಸೀರ್‌ ಅಹ್ಮದ್‌, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿರಂಜನಾರಾಧ್ಯ, ಇಲಾಖಾ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | HSRP Number Plate: ಈ ದಿನದೊಳಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ಭಾರಿ ದಂಡ ಖಚಿತ!

ಅರಣ್ಯ ಒತ್ತುವರಿಯನ್ನು ಕಟ್ಟು ನಿಟ್ಟಾಗಿ ತಡೆಯಿರಿ: ಸಿಎಂ ಖಡಕ್ ಸೂಚನೆ

ಬೆಂಗಳೂರು: ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂದಿರಾ ಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಇದು ಅತ್ಯಂತ ನಿಷ್ಠುರವಾಗಿದೆ. ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಅರಣ್ಯ ಒತ್ತುವರಿ ತಡೆಯಬೇಕು ಎಂದು ಸಿಎಂ ಸಿದ್ದರಾಮಯ್ಯ (Chief Ministers Medal) ಸೂಚನೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ 2022, 2023ನೇ ಸಾಲಿನ ಪದಕ ವಿತರಿಸಿ ಮಾತನಾಡಿದ ಅವರು, ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ, ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ ಎಂದರು.

ಮಹಾತ್ಮ ಗಾಂಧಿ ಅವರು ಪ್ರಕೃತಿ ಪ್ರಿಯರಾಗಿದ್ದರು, “ಪ್ರಕೃತಿ ಮನುಷ್ಯನ‌ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ಮನುಷ್ಯನ ದುರಾಸೆಗಳನ್ನು ಪೂರೈಸಲು ಆಗುವುದಿಲ್ಲ” ಎಂದು ಮಹಾತ್ಮಗಾಂಧಿ ಹೇಳಿದ್ದಾರೆ. ಇವತ್ತಿನ ಪರಿಸರದ ಅನಾಹುತಗಳಿಗೆ ಮನುಷ್ಯನ ದುರಾಸೆಯೇ ಕಾರಣ ಎಂದರು.

ಇಂದು ಪ್ರಶಸ್ತಿ ಸ್ವೀಕರಿಸಿದವರು ಉಳಿದವರಿಗೆ, ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಹಾರೈಸಿ, ಆಯಾ ವರ್ಷದ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಲು ಸಿಎಂ ಸೂಚನೆ ನೀಡಿದರು.

ಸಚಿವ ಈಶ್ವರ್ ಖಂಡ್ರೆಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ‌ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡುತ್ತಾರೆ ಎಂದು ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಎಂ ಕರೆ ನೀಡಿದರು.

ಈ ಸುದ್ದಿಯನ್ನೂ ಓದಿ | Dengue fever: ʼಡೆಂಗ್ಯೂʼ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ರಾಜ್ಯ ಸರ್ಕಾರ; ಮಾರ್ಗಸೂಚಿ ಪಾಲಿಸದಿದ್ರೆ 2000 ರೂ. ದಂಡ!

ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು, ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ. ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಅರಣ್ಯ ಸಂಪತ್ತು ಕಾಪಾಡುವ ವಿಚಾರದಲ್ಲಿ ಪದಕ ಪುರಸ್ಕತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.

ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಉಪಸ್ಥಿತರಿದ್ದರು.