ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದ (Guarantee Schemes) ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ, ರಾಜ್ಯದಲ್ಲಿ 2023-24 ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 1,14,292 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಇಂದು ವಿಧಾನಪರಿಷತ್ತಿನಲ್ಲಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು.
ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸದರಿ ಯೋಜನೆಗಳಿಗೆ ಆಯವ್ಯಯ ದಲ್ಲಿ 52,009 ಕೋಟಿ ರೂ ಗಳನ್ನು ಒದಗಿಸಿದೆ. ರಾಜ್ಯ ಸರ್ಕಾರವು 2023-24 ರಲ್ಲಿ 90,280 ಕೋಟಿ ರೂ ಗಳನ್ನು ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ 2.6% ಇದ್ದು, ರಾಜ್ಯ ಸರ್ಕಾರವು ಪಡೆದ ಒಟ್ಟು ಸಾಲ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಪಿಡಿಒ ಹುದ್ದೆಗಳ ನೇಮಕ; ತ್ರಿಸದಸ್ಯ ಸಮಿತಿ ವರದಿ ಆಧರಿಸಿ ಕ್ರಮ; ಸಿದ್ದರಾಮಯ್ಯ
ರಾಜ್ಯ ಸರ್ಕಾರವು ರಾಜಸ್ವ ಹಾಗು ಬಂಡವಾಳ ಸ್ವೀಕೃತಿಗಳಿಂದ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸುವ ಮಿತಿಯೊಳಗೆ ಸಾಲವನ್ನು ಪಡೆಯುವ ಮೂಲಕ ಆಯವ್ಯಯದಲ್ಲಿ ಅಂದಾಜಿಸಿರುವ ವೆಚ್ಚವನ್ನು ಭರಿಸುತ್ತದೆ. ಈ ಸ್ವೀಕೃತಿಗಳನ್ನು ಮೀರಿ ಈವರೆಗೂ ಯಾವುದೇ ವೆಚ್ಚದ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗಿರುವುದಿಲ್ಲ ಎಂದರು.
ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರ
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿದ್ದು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಎಸ್ಸಿಪಿ/ಟಿಎಸ್ಪಿ ಅನುದಾನ
ಎಸ್ಸಿಪಿ/ಟಿಎಸ್ಪಿಗಳಿಗೆ ಬಳಸಲಾಗಿರುವ ಹಣ 2017-18 ನೇ ಸಾಲಿನಲ್ಲಿ 36 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. ಈ ವರ್ಷ 39, 272 ಕೋಟಿ ರೂ.ಗಳ ಅನುದಾನ ಇಡಲಾಗಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಎಸ್ಸಿಪಿ/ಟಿಎಸ್ಪಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Lakshmi Hebbalkar: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್; ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು?
ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಈ ಕಾಯ್ದೆ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ ಸಿಎಂ, ಕೇಂದ್ರ ಸರ್ಕಾರ ಏಕೆ ಈ ಕಾಯ್ದೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಪ್ರಶ್ನಿಸಿದರು.