Tuesday, 17th December 2024

CM Siddaramaiah: ಇಂದು ನಮ್ಮ ಸರ್ಕಾರ, ಮುಂದೆಯೂ ನಮ್ಮದೇ ಸರ್ಕಾರ; ಸಿದ್ದರಾಮಯ್ಯ

CM Siddaramaiah

ಬೆಳಗಾವಿ: ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ‍ ಪರವಾಗಿದ್ದಾರೆ. ಇದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ವಿಧಾನಸಭೆ-ಪರಿಷತ್‌ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳನ್ನು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ ಎಂದು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದರು.

ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ

ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಅತಿ ಹೆಚ್ಚು ನೋಟಿಸ್ ಕೊಟ್ಟಿರುವುದು, ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕ್ಫ್ ಆಸ್ತಿ ತೆರವುಗೊಳಿಸಲು ನೋಟಿಸ್‌ಗಳನ್ನು ಕೊಡಲಾಗಿದೆ. ಹೀಗಾಗಿ ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ತಿಳಿಸಿದರು.

ಬಿಜೆಪಿ 9 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿದ್ದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಲಿಲ್ಲ. ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಬಿಜೆಪಿ ಪ್ರಯತ್ನವನ್ನೇ ಮಾಡಲಿಲ್ಲ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | KSDL: ಕೆಎಸ್‌ಡಿಎಲ್ ಲಾಭಾಂಶದ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ!

ನಂಜುಂಡಪ್ಪ ಅವರ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳು ಇರುವುದೇ ಉತ್ತರ ಕರ್ನಾಟಕದಲ್ಲಿ. 176 ರಲ್ಲಿ 116 ತಾಲೂಕುಗಳು ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಬೇಕು ಅಂತಲೂ ಹೇಳಿದ್ದಾರೆ. ನಂಜುಂಡಪ್ಪ ಅವರ ವರದಿಯ ಅನುಷ್ಠಾನ ಮತ್ತು ಸಾಮಾಜಿಕ, ಆರ್ಥಿಕ ಬದಲಾವಣೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿಯನ್ನು ರಚಿಸಲಾಗಿದೆ ಎಂದರು.

ಗೋವಿಂದರಾವ್ ಸಮಿತಿ ರಚಿಸಿರುವುದೂ ನಮ್ಮದೇ ಸರ್ಕಾರ

ಉತ್ತರ ಕರ್ನಾಟಕದ ಅಭಿವೃದ್ಧಿಗೆ 371ಜೆ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ತಿರಸ್ಕರಿಸಿದ್ದರು. ಇದು ಬಿಜೆಪಿಯ ಸತ್ಯವಾದ ಮುಖ ಎಂದು ಟೀಕಿಸಿದ ಸಿಎಂ ಅವರು, ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ್ದು, ಕಾನೂನು ಮಾಡಿದ್ದು, ಜಾರಿ ಮಾಡಿದ್ದೆಲ್ಲಾ ಕಾಂಗ್ರೆಸ್ ಸರ್ಕಾರವೇ. ಈಗ ಹೊಸದಾದ ಗೋವಿಂದರಾವ್ ಸಮಿತಿ ರಚಿಸಿರುವುದೂ ನಮ್ಮದೇ ಸರ್ಕಾರ ಎಂದು ಹೇಳಿದರು.

ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ರಕ್ತದಲ್ಲಿ ಬರೆದು ಕೊಡ್ತೀನಿ ಎಂದು ಬಸವರಾಜ ಬೊಮ್ಮಾಯಿ ಅವರು ಪ್ರಾಮಿಸ್ ಮಾಡಿದರು. ಆದರೆ ಅವರು ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದ್ದರೂ ತಮ್ಮ ಪ್ರಾಮಿಸ್ ಉಳಿಸಿಕೊಳ್ಳಲಿಲ್ಲ. ಅವರಿಗೆ ಅವಕಾಶ ಇದ್ದಾಗ ಏನೂ ಮಾಡಲಿಲ್ಲ. ಈಗಲೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಮಹದಾಯಿ ಸಮಸ್ಯೆ ಬಗೆಹರಿಸಲು ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಮೂರಕ್ಕೆ ಮೂರೂ ಉಪ ಚುನಾವಣೆಯಲ್ಲಿ ನಾವು ಗೆದ್ದಿರುವುದು, ಬಿಜೆಪಿ ಕೈಯಿಂದ ಎರಡು ಸೀಟುಗಳನ್ನು ಕಾಂಗ್ರೆಸ್ ಗೆದ್ದಿರುವುದು, ಬಿಜೆಪಿಯನ್ನು ರಾಜ್ಯದ ಜನತೆ ತಿರಸ್ಕರಿಸಿರುವುದಕ್ಕೆ ಸ್ಪಷ್ಟ ನಿದರ್ಶನ. ನನ್ನ ಮೇಲೆ, ನಮ್ಮ ಸರ್ಕಾರದ ಮೇಲೆ ಮಾಡಿದ ಸರಣಿ ಸುಳ್ಳು ಆರೋಪ, ಅಪಪ್ರಚಾರ ಮಾಡಿದರೂ ಅದೆಲ್ಲವನ್ನೂ ತಿರಸ್ಕರಿಸಿ ರಾಜ್ಯದ ಜನತೆ ನಮ್ಮ ಕೈ ಹಿಡಿದಿದ್ದಾರೆ ಎಂದು ತಿಳಿಸಿದರು.

ಇತ್ತೀಚಿಗೆ ಹಾಸನದಲ್ಲಿ ನಾವು ಮಾಡಿದ ಸ್ವಾಭಿಮಾನಿ ಸಮಾವೇಶ ಐತಿಹಾಸಿಕವಾದದು. ಆದ್ದರಿಂದ ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ‍ ಪರವಾಗಿದ್ದಾರೆ ಎಂದರು.

ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ

ರೋಣದಲ್ಲಿ 200 ಕೋಟಿ, ಎಚ್.ಡಿ.ಕೋಟೆಯಲ್ಲಿ ನೂರಾರು ಕೋಟಿ, ತುಮಕೂರಿನಲ್ಲಿ 1700 ಕೋಟಿ ರೂಪಾಯಿಯ ಅಭಿವೃದ್ಧಿ ಕೆಲಸಗಳನ್ನು ನಾವೇ ಉದ್ಘಾಟಿಸಿದ್ದೀವಿ. ಇವು ಉದಾಹರಣೆಗಳಷ್ಟೆ. ಪ್ರತೀ ಜಿಲ್ಲೆ, ಪ್ರತೀ ತಾಲೂಕುಗಳಲ್ಲೂ ನೂರಾರು ಕೋಟಿಯ ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಉದ್ಘಾಟನೆ ಆಗುತ್ತಲೇ ಇವೆ. ಬಜೆಟ್‌ನಲ್ಲಿ 120000 ಕೋಟಿ ಅಭಿವೃದ್ಧಿ ಹಣ ತೆಗೆದಿಡಲಾಗಿದೆ. ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ. 52009 ಕೋಟಿ ರೂಪಾಯಿ ಗ್ಯಾರಂಟಿಗಳ ಮೂಲಕ ಜನರ ಜೇಬಿಗೆ, ಜನರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ. ಹೀಗಾಗಿ ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ.

ಈ ಸುದ್ದಿಯನ್ನೂ ಓದಿ | Bengaluru News: ಡಾ. ಶ್ರುತಿ ಬಲ್ಲಾಳ್, ಪ್ರಗತಿ ಅನೂನ್‌ಗೆ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಟೂರಿಸಂ ಕಿರೀಟ

ಹೀಗಾಗಿ ನಮ್ಮ ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಸತ್ಯವನ್ನು, ಸತ್ಯದ ಅಂಕಿ ಅಂಶಗಳನ್ನು ಜನರ ಮುಂದಿಟ್ಟು ತೋರಿಸಿದರೂ ಸಾಕು. ಸತ್ಯವನ್ನು ಮನೆ ಮನೆ ತಲುಪಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.