Sunday, 15th December 2024

CM Siddaramaiah: RSS ಬಂಡವಾಳ ಗೊತ್ತಾಗಿ ಉಗ್ರಪ್ಪ ಸಾಮಾಜಿಕ ನ್ಯಾಯದ ಪರ ನಿಂತರು: ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ವಿ.ಎಸ್.ಉಗ್ರಪ್ಪ ಅವರು ಸಮರ್ಥರೂ ಹೌದು, ಜನ ನಾಯಕರೂ ಹೌದು. ವಿದ್ಯಾರ್ಥಿ ಜೀವನದಲ್ಲೇ ಜನಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಅವರು ಧ್ವನಿ ಇಲ್ಲದವರ ದನಿ ಆಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಅವರ ಬದುಕು, ಹೋರಾಟವನ್ನು ಕಟ್ಟಿಕೊಟ್ಟಿರುವ ಸಮರ್ಥ ಜನ ನಾಯಕ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಉಗ್ರಪ್ಪ ಬಹಳ ನಿಷ್ಠುರವಾದಿ. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳ ವಿಚಾರದಲ್ಲಿ ಯಾರ ಜೊತೆಗೂ ರಾಜಿ ಮಾಡಿಕೊಳ್ಳುವುದಿಲ್ಲ. ರಾಜಕೀಯ ಹೋರಾಟದಲ್ಲಿ ಉಗ್ರರಾಗಿದ್ದರೂ‌ ಮನೆಯಲ್ಲಿ ಮಾತ್ರ ಸೌಮ್ಯವಾದಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಸಂವಿಧಾನದ ಆಚೆಗೆ ಯೋಚಿಸುವವರಲ್ಲ. ವಕೀಲರಾಗಿ ಹಲವಾರು ವರ್ಷ ಸಂವಿಧಾನದ ಪಾಠ ಮಾಡಿ ಈಗ ಸಂವಿಧಾನ‌ ನಾಲಿಗೆ ತುದಿಯಲ್ಲೇ ಇದೆ. ತಪ್ಪುಗಳನ್ನು ಹುಡುಕುವುದರಲ್ಲಿ ಉಗ್ರಪ್ಪರು ನಿಸ್ಸೀಮರು. ಎಲ್ಲಾ ಕಾಲದಲ್ಲೂ ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಪ್ರತೀ ಮಾತು, ಭಾಷಣ ಅವಕಾಶ ವಂಚಿತರ ಪರವಾಗಿಯೇ ಇರುತ್ತದೆ ಎಂದರು.

ಕಾನೂನುಗಳನ್ನು ಚೆನ್ನಾಗಿ ಅರಿತಿರುವ ಉಗ್ರಪ್ಪ ಅವರ ಅನುಭವ, ತಿಳಿವಳಿಕೆ ಪಕ್ಷ ಸಂಘಟನೆಗೆ ಬಹಳ ನೆರವು ನೀಡಿದೆ. ರಾಜಕಾರಣದ ಕೆಲವು ಹಂತಗಳಲ್ಲಿ ಉಗ್ರಪ್ಪ ಅವರಿಗೆ ನೆರವಾಗಲು ಸಾಧ್ಯವಾಗಿದೆ. ಉಳಿದ ಸಂದರ್ಭಗಳಲ್ಲಿ ಸಾಧ್ಯವಾಗಿಲ್ಲ. ಆದರೆ ಎಲ್ಲಾ ಏರಿಳಿತಗಳಲ್ಲೂ ಉಗ್ರಪ್ಪ ಅವರು ತಮ್ಮ ಸಿದ್ಧಾಂತ ಹಾಗೂ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಎಂದು ಮೆಚ್ಚುಗೆ ಸೂಚಿಸಿದರು.

ಉಗ್ರಪ್ಪ ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ‌ ಸಿಗಬೇಕಿತ್ತು. ಸಿಕ್ಕಿಲ್ಲ ಎನ್ನುವ ಬೇಸರ ನನಗೂ ಇದೆ. ಮುಂದೆ ಅವಕಾಶ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ರೆಡ್ಡಿ ಬ್ರದರ್ಸ್ ವಿರುದ್ಧ ತೋಳು ತಟ್ಟಿದ ಹೋರಾಟಕ್ಕೆ ಉಗ್ರಪ್ಪರೂ ಕಾರಣ

ನಾನು ಬಳ್ಳಾರಿ ಪಾದಯಾತ್ರೆ ಮಾಡುವುದಕ್ಕೂ ಮೊದಲೇ ಉಗ್ರಪ್ಪ ಗಣಿ ಹಗರಣ ಮತ್ತು ರೆಡ್ಡಿ ಬ್ರದರ್ಸ್ ವಿಚಾರದ ಬಗ್ಗೆ ಸತ್ಯ ಶೋಧನಾ ವರದಿ ನೀಡಿದ್ದರು. ಈ ವರದಿ ಬಳ್ಳಾರಿ ಪಾದಯಾತ್ರೆಗೆ ನಾನು ತೋಳು ತಟ್ಟುವಂತಾಯಿತು. ಪಾದಯಾತ್ರೆ ಯಶಸ್ವಿಗೆ ಉಗ್ರಪ್ಪ ಅವರ ಪಾತ್ರ ಕೂಡ ಪ್ರಮುಖವಾದದ್ದು ಎಂದರು.

ಉಗ್ರಪ್ಪ ಮತ್ತು ನಾನು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಂಡವರಲ್ಲ. ಈ ಕಾರಣಕ್ಕೇ ನನಗೆ ಮಸಿ ಬಳಿಯಲು ಕೆಲವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನಗಳು ಹೇಗೆ ಯಶಸ್ವಿ ಆಗ್ತದೆ ನಾನೂ ನೋಡ್ತೀನಿ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ಕೂಡ ರವಾನಿಸಿದರು.

ಉಗ್ರಪ್ಪ ಮತ್ತು ಪಿ.ಜಿ.ಆರ್.ಸಿಂಧ್ಯಾ ಇಬ್ಬರೂ ಆರ್‌ಎಸ್‌ಎಸ್‌ನಲ್ಲಿದ್ದವರು. ಇಬ್ಬರಿಗೂ ಆರ್‌ಎಸ್‌ಎಸ್‌ನ ದ್ವೇಷದ, ತಾರತಮ್ಯದ, ಜಾತಿವಾದದ ಸತ್ಯ ಗೊತ್ತಾಗಿ ಆರ್‌ಎಸ್‌ಎಸ್‌ನಿಂದ ಹೊರಗೆ ಬಂದು ಸಾಮಾಜಿಕ ನ್ಯಾಯದ ಪರವಾಗಿ ನಿಂತು, ಪ್ರಬುದ್ಧ ಜನಪರ ರಾಜಕಾರಣಿಯಾಗಿದ್ದಾರೆ ಎಂದರು.

ಈ ಸುದ್ದಿಯನ್ನೂ ಓದಿ | Muda Case: ಮುಡಾ ಕಡತ ನಾಪತ್ತೆ ಆರೋಪ, ಸಚಿವ ಬೈರತಿ ಸುರೇಶ್ ಮೇಲೂ ಸ್ನೇಹಮಯಿ ಕೃಷ್ಣ ದೂರು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಸಮಾಜದ ಗುರುಗಳಾದ ಆತ್ಮಾನಂದ ಸ್ವಾಮೀಜಿ, ರಾಮಲಿಂಗೇಶ್ವರ ಸ್ವಾಮೀಜಿ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.