ಮೈಸೂರು: ತಪ್ಪು ಮಾಹಿತಿ ಕೊಟ್ಟ ತೋಟಗಾರಿಕಾ ಇಲಾಖೆಯ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಅವರು ಕ್ಲಾಸ್ ತೆಗೆದುಕೊಂಡ ಪ್ರಸಂಗ ನಗರದಲ್ಲಿ ಶನಿವಾರ ನಡೆದಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಪ್ಪು ಮಾಹಿತಿ ಮುದ್ರಿಸಿ ನೀಡಿದ್ದರಿಂದ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ (CM Siddaramaiah) ಗರಂ ಆಗಿದ್ದಾರೆ.
ಸಭೆಗೆ ಹಿಂದಿನ ದಿನ ಸರಿಯಾದ ಹೋಂವರ್ಕ್ ಯಾಕೆ ಮಾಡಲಿಲ್ಲ? ಈ ರೀತಿ ತಪ್ಪು ಮಾಹಿತಿ ಮುದ್ರಿಸಿ ಸಭೆಗೆ ನೀಡಿದರೆ ನೀವೇ ಹೊಣೆ ಆಗಬೇಕಲ್ವಾ ಎಂದು ಸಿಎಂ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಅಧಿಕಾರಿ ಕ್ಷಮೆ ಕೋರಿ, ಮುಂದೆ ಯಡವಟ್ಟುಗಳು ಆಗದಂತೆ ಎಚ್ಚರಿಕೆ ವಹಿಸುವುದಾಗಿ ತಪ್ಪೊಪ್ಪಿಕೊಂಡು, ತಿದ್ದಿಕೊಳ್ಳುವುದಾಗಿ ಸಭೆಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕುಸಿದಿರುವುದಕ್ಕೆ ಸಿಎಂ ಗರಂ
ರೇಷ್ಮೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು, ಒಂದು ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಹೆಚ್ಚು ಬೆಳೆಯುತ್ತಿದ್ದರು. ಬಹಳಷ್ಟು ರೈತರು ಇದರ ಮೇಲೆ ಅವಲಂಭಿತರಾಗಿದ್ದರು. ಈಗ ನಮ್ಮ ಸಿದ್ದರಾಮನಹುಂಡಿಯಲ್ಲಿ ಯಾರೂ ರೇಷ್ಮೆ ಬೆಳೆಯುತ್ತಿಲ್ಲ ಏಕೆ ? ರೇಷ್ಮೆ ಬೆಳೆಗಾರರು ಏಕೆ ಕಡಿಮೆ ಆಗಿದ್ದಾರೆ ಎಂದು ಸಿಎಂ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿ ಹೌದು ಸಾರ್, ಸಿದ್ದರಾಮನಹುಂಡಿಯಲ್ಲಿ ಕೇವಲ ಇಬ್ಬರು ಮಾತ್ರ ರೇಷ್ಮೆ ಬೆಳೆಯುತ್ತಿದ್ದಾರೆ ಎಂದು ಉತ್ತರಿಸಿದರು. ಈಗ ರೇಷ್ಮೆ ಬೆಳೆ ಪ್ರದೇಶ ವಿಸ್ತರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಪ್ರಶ್ನಿಸಿದರು. ಈ ವೇಳೆ ಉತ್ತರಿಸಿದ ಅಧಿಕಾರಿ, ನಾವು ಇರುವ ಸಿಬ್ಬಂದಿಯಲ್ಲೇ 10 ಹಳ್ಳಿ ಆಯ್ಕೆ ಮಾಡಿಕೊಂಡು ವಿಸ್ತರಣೆಗೆ ಕೆಲಸ ಮಾಡುತ್ತಿದ್ದೇವೆ. ನಾವೇ ಗೂಡುಗಳನ್ನು ನಿರ್ಮಿಸಿ ಕೊಟ್ಟು, ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ವಿವರಿಸಿದರು. ಈ ವೇಳೆ ಪಶು ಸಂಗೋಪನಾ ಸಚಿವರು, ಸಿಬ್ಬಂದಿ ಕೊರತೆ ಇದೆ ಎನ್ನುವ ಮಾಹಿತಿ ನೀಡಿದರು. ಈ ಮಾತನ್ನು ಒಪ್ಪದ ಸಿಎಂ, ರೇಷ್ಮೆ ಕೃಷಿ ಕುಸಿಯಲು ಇದೊಂದೇ ಕಾರಣ ಅಲ್ಲ. ಬೇರೆ ಬೇರೆ ಕಾರಣಗಳಿವೆ. ಅಧಿಕಾರಿಗಳು ಅವನ್ನೆಲ್ಲಾ ಗುರುತು ಮಾಡಿ ಪರಿಹಾರ ರೂಪಿಸಬೇಕು ಎಂದರು.
ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಅವರು, ಮುಂಗಾರು, ಪೂರ್ವ ಮುಂಗಾರು ಕೃಷಿ ಚಟುವಟಿಕೆ ಪ್ರಮಾಣದ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿಗಳು ತಾಲೂಕು ವಾರು ಬಿತ್ತನೆ ಮಾಹಿತಿ ನೀಡಿ ವಾಡಿಕೆಗಿಂತ ಕೃಷಿ ಚಟುವಟಿಕೆ ಕಡಿಮೆ ಆಗಿಲ್ಲ ಎಂದರು. ಬಳಿಕ ಮುಖ್ಯಮಂತ್ರಿಗಳು, “ಜಿಲ್ಲೆಯಲ್ಲಿ ಕೃಷಿ ಬೆಳೆಗಳಿಗೆ ಯಾವುದಾದರೂ ರೋಗ ತಗುಲಿದೆಯೇ? ಔಷಧ, ಗೊಬ್ಬರ ರೆಡಿ ಇದೆಯೇ” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಕೃಷಿ ಬೆಳೆಗೆ ರೋಗ ತಗುಲಿಲ್ಲ. ಔಷಧ, ಗೊಬ್ಬರ ಅಗತ್ಯವಿದ್ದಷ್ಟು ಸಂಗ್ರಹ ಇದೆ ಎಂದರು.
ಮೂರು ಲಕ್ಷ ತೊಂಬತ್ತು ಸಾವಿರ ಹೆಕ್ಟೇರ್ನಲ್ಲಿ ಮೂರು ಲಕ್ಷ ಎಂಬತ್ತು ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಬರುವ ದಿನಗಳಲ್ಲಿ ನಿರೀಕ್ಷಿತ ಮಳೆ ಆಗದಿದ್ದರೆ ರಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ. ಆದರೆ ಅದಕ್ಕೆ ಅವಕಾಶ ಇಲ್ಲದಂತೆ ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಭತ್ತ ಬೆಳೆಗೆ ಯಾವುದೇ ತೊಂದರೆ ಇಲ್ಲ. ನೆನ್ನೆಗೆ ಉತ್ತರ ಮಳೆ ಮುಗಿದಿದೆ. ಕೃತ್ತಿಕಾ ಮತ್ತು ರೋಹಿಣಿ ಮಳೆಯಿಂದ ಮೇ ತಿಂಗಳಲ್ಲಿ 255 ಹೆಕ್ಟೇರ್ ನಷ್ಟು ಬೆಳೆ ನಷ್ಟ ಆಗಿದೆ ಎಂದು ತಾಲೂಕುವಾರು ಹಾನಿ ಕುರಿತು ಕೃಷಿ ಅಧಿಕಾರಿಗಳು ವಿವರಿಸಿದರು. ತಂಬಾಕು ಸೇರಿ ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗಿದೆ ಎಂದರು.
ಈ ವೇಳೆ ಮುಖ್ಯಮಂತ್ರಿಗಳು, “ಮಳೆ ಹಾನಿಯಿಂದ ಆದ ಜೀವ ಹಾನಿ ಮತ್ತು ಮನೆ ಹಾನಿಗಳಿಗೆ ಪರಿಹಾರ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಜಿಲ್ಲಾಧಿಕಾರಿಗಳು, “ಒಂದು ಜೀವ ಹಾನಿ ಆಗಿತ್ತು. ಇದನ್ನೂ ಸೇರಿಸಿ ಹಾನಿ ಮನೆಗಳಿಗೆ ಪರಿಹಾರ ಸಂಪೂರ್ಣ ನೀಡಲಾಗಿದೆ” ಎಂದರು.
ಕಳೆದ ವರ್ಷ ಎಷ್ಟು ಬೆಳೆ ಹಾನಿ ಆಗಿತ್ತು, ಎಷ್ಟು ಪರಿಹಾರ ನೀಡಿದ್ದೀರಿ ಎಂದು ಸಿಎಂ ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು 95000 ಹೆಕ್ಟೇರ್ ಬೆಳೆ ಹಾನಿಗೆ 63 ಕೋಟಿ ರೂಪಾಯಿ ಪರಿಹಾರ ನೀಡಿದ್ದೇವೆ ಎಂದರು.
ರೈತರ ಸಾವು, ಬೆಳೆ ಹಾನಿ ವರದಿಗಳನ್ನು ನಿರ್ಲಕ್ಷಿಸಬೇಡಿ
ಮಾಧ್ಯಮಗಳಲ್ಲಿ ವರದಿ ಆಗಿರುವ ರೈತರ ಸಾವು ಮತ್ತು ಬೆಳೆ ಹಾನಿ ವರದಿಗಳನ್ನು ನಿರ್ಲಕ್ಷಿಸಬೇಡಿ. ವರದಿಗಳ ಸತ್ಯಾಸತ್ಯತೆ ಪರಿಶೀಲಿಸಿ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಸಿ.ಮಹದೇವಪ್ಪ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಾಲದಿಂದ 31 ರೈತರು ಆತ್ಮಹತ್ಯೆ ಆಗಿದೆ. ಸಮಿತಿ ಮುಂದೆ ಮಂಡಿಸಿದ ಪ್ರಕರಣ 29, ತಿರಸ್ಕೃತ 8, ಎಫ್ಎಸ್ಎಲ್ ಬಾಕಿ-2, ಉಳಿದ ಎಲ್ಲಕ್ಕೂ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತಿರಸ್ಕೃತಗೊಂಡ ಪ್ರಕರಣಗಳ ಕುರಿತು ಸಿಎಂ ಹೆಚ್ಚಿನ ವಿವರಣೆ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು-, ಕೆಲವರಿಗೆ ಜಮೀನು ಇರಲಿಲ್ಲ. ಒಬ್ಬರು ತಾಯಿ ಹೆಸರಲ್ಲಿ ಸಾಲ ಪಡೆದು ನಾಲ್ಕು ದಿನದಲ್ಲಿ ಪಿರಿಯಾಪಟ್ಟಣದಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಸಾಲ ವಸೂಲಾತಿ ಬಗ್ಗೆ ಒತ್ತಡವೂ ಇರಲಿಲ್ಲ. ಹೀಗಾಗಿ ಈ ಪ್ರಕರಣವನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕರಣವನ್ನು ವಿವರಿಸಿದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ವೆಂಕಟೇಶ್ ಅವರು ಈ ಪ್ರಕರಣವನ್ನೂ ಪರಿಗಣಿಸಿ ಪರಿಹಾರ ಕೊಡಿ ಎಂದರು.
ಕೆಳ ಹಂತದ ಅಧಿಕಾರಿಗಳು ಡೈರಿ ಬರೆಯುವುದನ್ನು, ಜಮೀನುಗಳಿಗೆ ಭೇಟಿ ನೀಡುವುದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಖಚಿತಪಡಿಸಿಕೊಳ್ಳಿ. ಕೆಳ ಹಂತದ ಅಧಿಕಾರಿಗಳು ನೀಡುವ ವರದಿ ಆಧರಿಸಿ ಅಗತ್ಯ ಕಂಡ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಸಿಎಂ ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜನಸಂಪರ್ಕ ನಡೆಸುತ್ತಲೇ ಇರಬೇಕು. ನೀವು ಜನರ ಮಧ್ಯೆ ಇದ್ದು ಕೆಲಸ ಮಾಡಲೇಬೇಕು. ಆಗ ಮಾತ್ರ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ. ನೀವು ಜನಸಂಪರ್ಕ ಸಭೆ ನಡೆಸದೆ ಕೇವಲ ಸಭೆಗಳಲ್ಲಿ ಬಂದು ನೀವು ಹೇಳಿದ್ದನ್ನು ಕೇಳಿಕೊಂಡು ನಾವು ಹೋಗುವುದಿಲ್ಲ.
ಈ ಸುದ್ದಿಯನ್ನೂ ಓದಿ | Kumki elephants: ಕಾಡಾನೆ ಸೆರೆ ಕಾರ್ಯಾಚರಣೆಗೆ ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆ: ಸಚಿವ ಈಶ್ವರ್ ಖಂಡ್ರೆ
ಅಧಿಕಾರಿಯ ಡೈರಿ-ಫೋಟೋ ಕೇಳಿದ ಸಿಎಂ
ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಬೇಕು. ರೈತರ ಸಭೆಗಳನ್ನು ನಡೆಸಬೇಕು. ಇದನ್ನೆಲ್ಲಾ ನೀವು ಮಾಡಿದ್ದೀರಾ ಎಂದು ಸಿಎಂ ಪ್ರಶ್ನಿಸಿದರು. ಈ ವೇಳೆ ಕೃಷಿ ಅಧಿಕಾರಿ ತಾವು ಗ್ರಾಮ ಭೇಟಿ ನೀಡಿದ್ದ ಡೈರಿಯನ್ನು ಸಿಎಂಗೆ ನೀಡಿದರು. ಸಿಎಂ ಡೈರಿ ಪರಿಶೀಲಿಸಿದರು. ಸಮಾಧಾನ ಆಗಲಿಲ್ಲ. ನೀವು ಭೇಟಿ ನೀಡಿದ ಫೋಟೋಗಳನ್ನು ತೋರಿಸಿ ಎಂದರು. ಅಧಿಕಾರಿಗಳು ತಾವು ಭೇಟಿ ನೀಡಿದ್ದ ಫೋಟೋಗಳನ್ನು ಪ್ರದರ್ಶಿಸಿದರು.
ಆದರೂ ಸಮಾಧಾನ ಆಗದ ಮುಖ್ಯಮಂತ್ರಿಗಳು, ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ರೈತರಿಗೆ ಹೆಚ್ಚು ತಿಳಿವಳಿಕೆ ಇದೆಯಾ? ನಿಮಗೆ ಹೆಚ್ಚು ತಿಳಿವಳಿಕೆ ಇದೆಯಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಪ್ರಾಕ್ಟಿಕಲ್ ಆಗಿ ರೈತರು ಬುದ್ಧಿವಂತರಿರುತ್ತಾರೆ. ನಾವು ಅವರಿಂದ ಕಲಿಯುತ್ತೀವಿ ಎಂದರು.