Saturday, 16th November 2024

CM Siddaramaiah: ಕಿತ್ತೂರು ಉತ್ಸವ ಚಾಲನೆ ವೇಳೆ ಸಿಎಂ ಬಟ್ಟೆಗೆ ಸಿಡಿದ ಬೆಂಕಿ

kittur utsav 2024 cm siddaramaiah

ಬೆಂಗಳೂರು: ಕಿತ್ತೂರು ಉತ್ಸವಕ್ಕೆ (Kittur Utsav 2024) ಚಾಲನೆ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಜುಬ್ಬಾದ ಕೈಗೆ ಸಣ್ಣ ಪ್ರಮಾಣದಲ್ಲಿ ಬೆಂಕಿಯ ಕಿಡಿ ತಾಗಿದೆ. ಜಾಗೃತರಾಗಿದ್ದ ಸಿಎಂ ಭದ್ರತಾ ಸಿಬ್ಬಂದಿ ಕೂಡಲೇ ಅದನ್ನು ಆರಿಸಿದ್ದು, ಅವಘಡ ತಪ್ಪಿದೆ.

ಬುಧವಾರ ವಿಧಾನಸಭೆ ಆವರಣದಲ್ಲಿ ನಡೆದ ಕಿತ್ತೂರು ಉತ್ಸವಕ್ಕೆ ಚಾಲನೆ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ಜ್ಯೋತಿಗೆ ಚಾಲನೆ ನೀಡುವಾಗ ಸಣ್ಣ ಪ್ರಮಾಣದಲ್ಲಿ ದೀಪದ ಕಿಡಿ ಜುಬ್ಬಾಗೆ ತಗುಲಿದ್ದು, ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು ತಕ್ಷಣವೇ ಎಚ್ಚೆತ್ತುಕೊಂಡು ಬೆಂಕಿಯನ್ನು ಆರಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಬ್ರಿಟಿಷರು ವಿಧಿಸಿದ ತೆರಿಗೆಯನ್ನು ವಿರೋಧಿಸಿದ್ದರು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದನ್ನು ವಿರೋಧಿಸಿದರು. ತೆರಿಗೆ ಕೊಡುವುದಿಲ್ಲ ಎಂದು ನೇರವಾಗಿ ಬ್ರಿಟಿಷರಿಗೆ ಹೇಳಿದ ದಿಟ್ಟ ಮಹಿಳೆ ಈಕೆ. ಸಂಗೊಳ್ಳಿ ರಾಯಣ್ಣ ಕೂಡ ಇವರ ಸೈನ್ಯದಲ್ಲಿದ್ದವರು. ಮೊದಲ ಯುದ್ಧದಲ್ಲಿ ಕಿತ್ತೂರು ರಾಣಿ ಬ್ರಿಟಿಷರ ವಿರುದ್ಧ ಜಯ ಗಳಿಸಿದರು. ಎರಡನೇ ಯುದ್ಧದಲ್ಲಿ ಬ್ರಿಟಿಷರು ಮೋಸದಿಂದ ಗೆದ್ದು ಕಿತ್ತೂರನ್ನು ವಶಪಡಿಸಿಕೊಂಡರು ಎಂದರು.

ನಾವು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರಿಂದ ದೇಶಪ್ರೇಮ, ಸ್ವಾಭಿಮಾನ ಕಲಿಯಬೇಕು. ನಮ್ಮ ದೇಶದ ಎಲ್ಲ ರಾಣಿಯರ ಸಾಲಿನಲ್ಲಿ ಚೆನ್ನಮ್ಮ ಮೊದಲ ಸಾಲಿನಲ್ಲಿ ಇರುತ್ತಾರೆ. ರಾಜ್ಯ ಸರ್ಕಾರ ಕಿತ್ತೂರಿನ ಅಭಿವೃದ್ಧಿಗೆ ಎಲ್ಲ ರೀತಿ ಸಹಕಾರ ಕೊಡುತ್ತಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ 100 ವರ್ಷದ ಸಂಭ್ರಮಾಚರಣೆ ಆರಂಭವಾಗುತ್ತಿದೆ. ಹೆಚ್.ಡಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಲಾಗಿದೆ. ಶಾಂತಿಯುತವಾಗಿ ಸತ್ಯಾಗ್ರಹದಿಂದ ಬ್ರಿಟಿಷರನ್ನ ದೇಶದಿಂದ ತೊಲಗಿಸಿ ಸ್ವತಂತ್ರ ತಂದು ಕೊಡಲಾಯಿತು. ಇದರ ಮುಂಚೂಣಿಯಲ್ಲಿ ನಾಯಕತ್ವವನ್ನು ಗಾಂಧಿ ವಹಿಸಿಕೊಂಡಿದ್ದರು. ಗಾಂಧೀಜಿ ಬಂದ ನಂತರ ಈ ದೇಶದಲ್ಲಿ ಬಂದೂಕು ಕೈಬಿಟ್ಟು ಶಾಂತಿಯುತ ಹೋರಾಟದ ಮೂಲಕ ರಕ್ತಪಾತವಿಲ್ಲದೆ ಸ್ವಾತಂತ್ರ್ಯ ಗಳಿಸಲಾಯಿತು. ಅಂಥ ಗಾಂಧೀಜಿಯವರಿಗೆ ನಮನ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: Muda Case: ಸಿಎಂ ಪತ್ನಿಯ 14 ನಿವೇಶನಗಳ ಖಾತೆ ರದ್ದು; ವಶಕ್ಕೆ ಪಡೆದ ಮುಡಾ