ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಹುಬ್ಬಳಿಯಿಂದ ಬೆಂಗಳೂರಿಗೆ ಹೊರಟಿರುವ ಜಾಥಾ (CM Siddaramaiah) ಅಕ್ಟೋಬರ್ 4ರ ಗುರುವಾರ ತುಮಕೂರು ತಲುಪಲಿದ್ದು, ಅಕ್ಟೋಬರ್ 05ರ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅಲ್ಲಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಕುರುಬರ ಯುವ ವೇದಿಕೆ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಹಿಂದ ಸಂಘಟನೆಯ ಮುಖಂಡರಾದ ಮುತ್ತಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು ಲಕ್ಷಾಂತರ ಸಂಖ್ಯೆಯಲ್ಲಿ ಅಹಿಂದ ಕಾರ್ಯಕರ್ತರು, ಮುಖಂಡರು ಅಕ್ಟೋಬರ್ 04ರ ಗುರುವಾರ ಬೆಳಗ್ಗೆ ಜಾಥಾ ಹೊರಡಲಿದ್ದು, ಸಂಜೆ ತುಮಕೂರು ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 05ರ ಶುಕ್ರವಾರ ತುಮಕೂರಿನಿಂದ ಹೊರಟು ಫ್ರೀಡಂ ಪಾರ್ಕಿಗೆ ತಲುಪಿ, ಅಲ್ಲಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಯಲಿದೆ. ಇದು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ತುಂಬುವ ನಿಟ್ಟಿನಲ್ಲಿ ಅಹಿಂದ ವರ್ಗಗಳು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ನಡೆಸುತ್ತಿರುವ ಜಾಥಾ ಆಗಿದೆ ಎಂದರು.
ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವಿದ್ದೇವೆ ಎಂಬುದನ್ನು ಸಾರುವ ಉದ್ದೇಶದಿಂದ ಈ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಹಿತೈಷಿಗಳು, ಅಭಿಮಾನಿಗಳು ಅಹಿಂದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿದ್ದರಾಮಯ್ಯ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಅಹಿಂದ ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಕಿಚನ್ ಕ್ಯಾಬಿನೆಟ್‌ಗೆ ಅವಕಾಶ ನೀಡಿದವರಲ್ಲ. ಇಂತಹ ವ್ಯಕ್ತಿಯ ವಿರುದ್ಧ ಅರಿಶಿನ ಕುಂಕುಮಕ್ಕೆಂದು ಪತ್ನಿಗೆ ನೀಡಿದ್ದ ಭೂಮಿಯನ್ನು ವಿವಾದ ಮಾಡಿ, ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿ-ಜೆಡಿಎಸ್ ಮಾಡುತ್ತಿದೆ. ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರ ಬೆನ್ನಿಗೆ ಅಹಿಂದ ಇದೆ ಎಂದರು.
ಈ ಸುದ್ದಿಯನ್ನೂ ಓದಿ | World Senior Citizens Day: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜತೆ ಚರ್ಚೆ; ಲಕ್ಷ್ಮೀ ಹೆಬ್ಬಾಳಕರ್
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆದಿಲ್, ಅಹಿಂದ ರಾಷ್ಟ್ರೀಯ ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುನಿತಾ ನಟರಾಜ್, ನಿರ್ದೇಶಕರಾದ ಪ್ರೇಮ, ಲಕ್ಷ್ಮೀನಾರಾಯಣ ಸೇರಿ ಹಲವರು ಉಪಸ್ಥಿತರಿದ್ದರು.