ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲದಿರುವಾಗ ಹೊಸ ಸಿಎಂ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಇತರ ಸಚಿವರ ಹೇಳಿಕೆಗಳ ಬಗ್ಗೆ ಅರಣ್ಯಭವನದ ಬಳಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ಹಾಗೂ ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತ ತನಿಖೆಗಳ ಪ್ರಗತಿ ಹಾಗೂ ಸಮನ್ವಯ ಸಂಬಂಧ ಕ್ರಮ ವಹಿಸುವ ನಿಟ್ಟಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಹಾಗೂ ಎಚ್.ಕೆ.ಪಾಟೀಲ್ ರವರು ಸದಸ್ಯರಾಗಿದ್ದಾರೆ. ಸಮಿತಿಯು ವರದಿಯನ್ನು ನೀಡಲು ಒಂದರಿಂದ ಎರಡು ತಿಂಗಳ ಅವಧಿಯನ್ನು ನೀಡಲಾಗಿದೆ. ಪಿಎಸ್‌ಐ ಹಗರಣ, 40% ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್ 19 ಬಗ್ಗೆ ತನಿಖಾ ಆಯೋಗ ಪೂರ್ವಭಾವಿ ವರದಿಯನ್ನು ನೀಡಿದ್ದು, ಅಧಿಕಾರಿಗಳ ಪರಿಶೀಲನೆಯ ನಂತರ ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತ
ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ತಪ್ಪು ಮಾಡಿದವರ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸ್ ಐ ಹಗರಣ- ಎಸ್ ಐಟಿ ಕ್ರಮಕ್ಕೆ ಸೂಚನೆ
ಪಿಎಸ್‌ಐ ಹಗರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವೀರಪ್ಪ ಆಯೋಗ ವರದಿಯನ್ನು ನೀಡಿದ್ದು, ಯಾವುದೇ ಕ್ರಮವಾಗಿಲ್ಲದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ಹಗರಣದ ಬಗ್ಗೆ ವಿಶೇಷ ತನಿಖಾ ತಂಡ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ | Chalavadi Narayanaswamy: ನೆಹರೂ ಮನೋಭಾವದಲ್ಲೇ ಮೀಸಲು ರದ್ದು ಪ್ರಸ್ತಾಪಿಸಿದ ರಾಹುಲ್; ಬಿಜೆಪಿ ಟೀಕೆ
ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಹಾಗೂ ಕೇಂದ್ರ ಜಾರಿ ನಿರ್ದೇಶನಾಲಯದ ತನಿಖೆಗಳು ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಪ್ರಕರಣದ ಬಗ್ಗೆ ಎಸ್‌ಐಟಿಯವರೂ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದರು.