Wednesday, 18th September 2024

CM Siddaramaiah: ಸುಳ್ಳಿನ‌ ಸರದಾರರ ಪಿತೂರಿ, ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ: ಸಿದ್ದರಾಮಯ್ಯ

CM Siddaramaiah

ಮಳವಳ್ಳಿ: ಮಂಡ್ಯ ಜಿಲ್ಲೆಯ (Mandya) ಅಭಿವೃದ್ಧಿಗೆ ಕೇಳಿದಾಗೆಲ್ಲಾ ಅಗತ್ಯವಿದ್ದಷ್ಟು ಅನುದಾನ ನೀಡುತ್ತಲೇ ಇದ್ದೇವೆ. ಅಧಿಕಾರ ಇದ್ದಾಗ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಕೊಡದ ಸುಳ್ಳಿನ‌ ಸರದಾರರ ಪಿತೂರಿ, ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಗಗನಚುಕ್ಕಿ ಜಲಪಾತೋತ್ಸವ 2024 ಅನ್ನು ಅದ್ದೂರಿ ವೇದಿಕೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಜನರ ಆರ್ಥಿಕ ಪ್ರಗತಿ-ಸಾಮಾಜಕ ನ್ಯಾಯ ಮತ್ತು ನಾಡಿನ ಸಮಗ್ರ ಪ್ರಗತಿ ವಿಚಾರದಲ್ಲಿ ರಾಜಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Traffic Restrictions: ಗಣೇಶ ಮೆರವಣಿಗೆ; ಇಂದು, ನಾಳೆ ಬೆಂಗಳೂರಿನ ಹಲವೆಡೆ ಮಾರ್ಗ ಬದಲಾವಣೆ

ರಾಜ್ಯದ ಎಲ್ಲಾ ಜಾತಿ, ಎಲ್ಲಾ ವರ್ಗ, ಎಲ್ಲಾ ಧರ್ಮದ ಜನರಿಗೆ ಆರ್ಥಿಕ ಶಕ್ತಿ ಕೊಡುವುದು ನಮ್ಮ ಗುರಿಯಾಗಿದೆ. ನಾವು ಜಾರಿ ಮಾಡಿರುವ ಐದೂ ಯೋಜನೆಗಳೂ ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮ ವರ್ಗದವರಿಗೆ ತಲುಪಿಸಿದ್ದು ಈ ಸಿದ್ದರಾಮಯ್ಯ. ನಮ್ಮ ಗ್ಯಾರಂಟಿಗಳನ್ನು ಟೀಕೆ ಮಾಡುತ್ತಾ ಇವುಗಳನ್ನು ಸ್ಥಗಿತಗೊಳಿಸಲು ಪಿತೂರಿ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಯಾವತ್ತೂ ಜನಪರ ಯೋಜನೆಗಳನ್ನು ಜಾರಿ ಮಾಡಲಿಲ್ಲ. ಆದ್ದರಿಂದ ಸುಳ್ಳಿನ‌ ಸರದಾರರ ಪಿತೂರಿ, ಷಡ್ಯಂತ್ರಗಳಿಗೆ ತಲೆ ಒತ್ತೆ ಇಡಬೇಡಿ ಎಂದು ಸಿಎಂ ಕರೆ ನೀಡಿದರು.

ಗಗನಚುಕ್ಕಿ-ಬರಚುಕ್ಕಿ ಜಲಪಾತಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗುವುದು‌. ಅಗತ್ಯವಿದ್ದಷ್ಟು ಹಣ ನೀಡಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.

ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಗತ್ಯವಾದ ಆಕರ್ಷಕವಾದ ನೂರಾರು ಸ್ಥಳಗಳಿವೆ. ಇವುಗಳ ಬೆಳವಣಿಗೆಗೆ ಎಷ್ಟು ಬೇಕಾದರೂ ಹಣ ಕೊಡಲು ಸರ್ಕಾರ ಸಿದ್ದವಿದೆ ಎಂದು ಸಿಎಂ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Sunita Williams: ನಾನು ಇಲ್ಲಿರುವುದನ್ನು ಇಷ್ಟಪಡುತ್ತೇನೆ; ಬಾಹ್ಯಾಕಾಶದಿಂದ ಸುನೀತಾ ವಿಲಿಯಮ್ಸ್‌ ಪ್ರತಿಕ್ರಿಯೆ

ದೇಶಕ್ಕೆ ಅತಿ ಹೆಚ್ವು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಕೃತಿದತ್ತವಾದ ಪೂರಕ ವಾತಾವರಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕ ಪ್ರಗತಿಯೂ ಆಗುತ್ತದೆ ಎಂದರು.

ವಿಸಿ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನಿಗಮದ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸ್ಥಳದಲ್ಲೇ ಸೂಚನೆ ನೀಡಿದರು.

ಕೇಂದ್ರದಿಂದ ಹಣ ತಂದು ಅಭಿವೃದ್ಧಿ ಮಾಡ್ತಿಲ್ಲ ಏಕೆ?

ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸಲು ಪಿತೂರಿ ಮಾಡುತ್ತಿರುವವರು ಕೇಂದ್ರದಿಂದ ಹಣ ತಂದು ಮಂಡ್ಯದ ಅಭಿವೃದ್ಧಿಗೆ ಕೆಲಸ ಮಾತ್ರ ಮಾಡುತ್ತಿಲ್ಲ. ಆದ್ದರಿಂದ ಕೇವಲ ಮಾತಾಡಿಕೊಂಡು ಕಾಲ ಕಳೆಯುವವರಿಗೆ ರೈತರು, ಹಿಂದುಳಿದವರು, ದಲಿತರ ಪರವಾದ ಕಾಳಜಿಯೇ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ ಕೃಷಿ ಇಲಾಖೆ, ನೀರಾವರಿ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗಗಳ ಇಲಾಖೆ, ಲೋಕೋಪಯೋಗಿ ಇಲಾಖೆಯ ಎಲ್ಲಾ ಕೆಲಸಗಳೂ ನಡೆಯುತ್ತಿವೆ. ಯಾವುದೇ ಇಲಾಖೆಯ ಒಂದೂ ಕೆಲಸವೂ ಸ್ಥಗಿತಗೊಂಡಿಲ್ಲ. ಆದ್ದರಿಂದ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಸುಳ್ಳಿನ ಸರದಾರರ ಮಾತಿಗೆ ಬೆಲೆ ಕೊಡಬೇಡಿ ಎಂದು ತಿಳಿಸಿದರು.

ಪೂರಿಗಾಲಿ ಏತನೀರಾವರಿ ಯೋಜನೆ ನಾನೇ ಉದ್ಘಾಟಿಸುತ್ತೇನೆ

ಪೂರಿಗಾಲಿ ಏತನೀರಾವರಿ ಯೋಜನೆಯನ್ನು ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಆರಂಭಿಸಿದ್ದೆ. ಈ ಯೋಜನೆಯನ್ನು ನಾನೇ ಉದ್ಘಾಟಿಸುತ್ತೇನೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಹೇಳಿದರು.

ಈ ಸುದ್ದಿಯನ್ನೂ ಓದಿ | Edible Oils: ಖಾದ್ಯ ತೈಲಗಳ ಆಮದು ಸುಂಕ ಹೆಚ್ಚಿಸಿದ ಕೇಂದ್ರ

ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಚಲುವರಾಯಸ್ವಾಮಜ, ಶಾಸಕರುಗಳಾದ ಮಾಗಡಿ ಬಾಲಕೃಷ್ಣ, ಕೊಳ್ಳೇಗಾಲ ಕೃಷ್ಣಮೂರ್ತಿ, ಹನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಸುದಾಮ್ ದಾಸ್, ಪ್ರಕಾಶ್ ರಾಥೋಡ್, ದಿನೇಶ್ ಗೂಳಿಗೌಡ, ಹಿರಿಯ ಐಪಿಎಸ್‌ ಅಧಿಕಾರಿಗಳಾದ ಅರುಣ್ ಚಕ್ರವರ್ತಿ, ನಂಜುಂಡಸ್ವಾಮಿ ಮತ್ತು ಮುಖಂಡರಾದ ಮಳವಳ್ಳಿ ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *