Saturday, 16th November 2024

CM Siddaramaiah: ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ; ಸಿದ್ದರಾಮಯ್ಯ ಗೇಲಿ

CM Siddaramaiah

ಪ್ರಧಾನಿ ಬರ್ತಾರೆ ಹಸಿ ಹಸಿ ಸುಳ್ಳು ಹೇಳಿ ಹೋಗ್ತಾರೆ. ಅವರ ಆರೋಪ ಸಾಬೀತು ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಘೋಷಿಸ್ತೀನಿ ಅಂತ ಸವಾಲೆಸೆದರು ಏಕೆ ನನ್ನ‌ ಸವಾಲು ಸ್ವೀಕರಿಸುತ್ತಿಲ್ಲ. ಏನು ಭಯ ಅವರಿಗೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಮಹಾರಾಷ್ಟ್ರದ ನಾನಾ ಕಡೆ ಚುನಾವಣಾ ಪ್ರಚಾರ ಕೈಗೊಂಡು, ಸೋಲಾಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ಯಶಸ್ವಿಯಾಗಿ ರಾಜ್ಯದ ಜನರ ಮನೆ ಮನೆ ತಲುಪಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ಬರಿಗಾಲಿನ ಕಾರ್ಯಕರ್ತ ಖ್ಯಾತಿಯ ಅಜಯ್ ಒಲಿಗೆ ಸಾಕ್ರ ಆಸ್ಪತ್ರೆಯಿಂದ ಸನ್ಮಾನ

ಶಕ್ತಿ ಯೋಜನೆ: ಇಲ್ಲಿಯವರೆಗೂ ಈ ಗ್ಯಾರಂಟಿಯಿಂದ 325 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

ಗೃಹಜ್ಯೋತಿ: ಒಂದು ಕೋಟಿ 62 ಲಕ್ಷ ಕುಟುಂಬಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ.

ಅನ್ನಭಾಗ್ಯ: ಒಂದು ಕೋಟಿ 20 ಲಕ್ಷ ಕುಟುಂಬಗಳು ಐದು ಕೆಜಿ ಉಚಿತ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಬಾಬ್ತು 170 ರೂಪಾಯಿಗಳನ್ನು ತಲಾ ಪಡೆಯುತ್ತಿದ್ದಾರೆ.

ಗೃಹಲಕ್ಷ್ಮಿ: ಒಂದು ಕೋಟಿ 22 ಲಕ್ಷ ಕುಟುಂಬಗಳ ಯಜಮಾನಿಯರು ಪ್ರತಿ ತಿಂಗಳು 2,000 ರೂಪಾಯಿ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಹೆಚ್ಚೂ ಕಡಿಮೆ ಈ ಗ್ಯಾರಂಟಿಯಿಂದ ಪ್ರತೀ ವರ್ಷ 30 ಸಾವಿರ ಕೋಟಿ ರೂಪಾಯಿ ಹಣ ಮನೆ ಯಜಮಾನಿಯರ ಖಾತೆಗೆ ನೇರವಾಗಿ ಜಮೆ ಆಗುತ್ತಿದೆ.

ಯುವನಿಧಿ: ಸರ್ಕಾರ ಬಂದ 8 ತಿಂಗಳೊಳಗೆ ಇದೂ ಸೇರಿ ಎಲ್ಲಾ ಐದು ಗ್ಯಾರಂಟಿಗಳು ಆರಂಭವಾಗಿದ್ದು, ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮೋ ಹೊಂದಿರುವವರು ಯುವನಿಧಿ ಅಡಿಯಲ್ಲಿ ಭತ್ಯೆ ಪಡೆಯುತ್ತಿದ್ದಾರೆ ಎಂದು ಸಿಎಂ ತಿಳಿಸಿದರು.

ಮಹಾರಾಷ್ಟ್ರ ಬಿಜೆಪಿ ಮುಖಂಡರು ಮತ್ತು ಬಿಜೆಪಿಯ ಮಂತ್ರಿಗಳು ಕರ್ನಾಟಕಕ್ಕೆ ಬಂದು ಪರೀಕ್ಷಿಸಲಿ. ಸುಳ್ಳಾದ್ರೆ ನಾನು ರಾಜಕೀಯ ನಿವೃತ್ತಿ ತಗೊತೀನಿ. ನಿಜ ಆಗಿದ್ರೆ ನೀವು ಮಹಾರಾಷ್ಟ್ರ ಜನತೆಯ ಕ್ಷಮೆ ಕೋರಿ ರಾಜಕೀಯ ನಿವೃತ್ತಿ ಘೋಷಿಸ್ತೀರಾ? ಎಂದು ಸಿಎಂ ಪ್ರಶ್ನಿಸಿದರು.

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧಾರ

ನಮ್ಮ ಸರ್ಕಾರದ ವಿರುದ್ಧ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿರುವ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಪ್ರತೀ ವರ್ಷ 4 ಲಕ್ಷ 50 ಸಾವಿರ ಕೋಟಿಯಷ್ಟು ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸಿದರೆ, ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು 60 ಸಾವಿರ ಕೋಟಿ ರೂಪಾಯಿ ಮಾತ್ರ. ಮಹಾರಾಷ್ಟ್ರ ರಾಜ್ಯ ಪ್ರತೀ ವರ್ಷ 8 ಲಕ್ಷ 78 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಿದರೆ ವಾಪಾಸ್ ಬರುತ್ತಿರುವುದು 1 ಲಕ್ಷ 30 ಸಾವಿರ ಕೋಟಿ ಮಾತ್ರ. ಹೀಗಾಗಿ ಮಹಾರಾಷ್ಟ್ರ ಕಟ್ಟುವ ಪ್ರತೀ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟನ್ನು, ಕರ್ನಾಟಕ 13 ಪೈಸೆಯಷ್ಟನ್ನು ಮಾತ್ರ ವಾಪಾಸ್ ಪಡೆಯುತ್ತಿದೆ. ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಗ್ಯಾರಂಟಿಗಳ ಜಾರಿಯಿಂದ ಆರ್ಥಿಕತೆ ನಾಶವಾಗುತ್ತದೆ ಎಂದು ಮೋದಿ ಭಾಷಣ ಮಾಡಿದ್ದಾರೆ. ಆದರೆ, ಇದೇ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಮಧ್ಯಪ್ರದೇಶ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿತ್ತು. ಮೋದಿ ಯಾಕೆ ಈ ಮಟ್ಟದ ಸುಳ್ಳು ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರೂ ನಮ್ಮ ಗ್ಯಾರಂಟಿಗಳ ಅನುಕೂಲ ಪಡೆಯುತ್ತಿದ್ದಾರೆ ಎಂದು ತಿಳಿಸಿದ ಸಿಎಂ ಅವರು, ಮಹಾರಾಷ್ಟ್ರ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ದೊಡ್ಡ ರಾಜ್ಯ. ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ಅನುಮಾನ ಬೇಡ ಎಂದರು.

ಬಿಜೆಪಿ ಮತ್ತು ಮೋದಿ ಕೇವಲ ಅತ್ಯಂತ ಶ್ರೀಮಂತರ ಪರವಾಗಿದೆ ಎನ್ನುವುದು ಸಾಬೀತಾಗಿದೆ

ಮೋದಿ ಸರ್ಕಾರ ರೈತರ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಲಿಲ್ಲ. ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮಾತ್ರ ಮನ್ನಾ ಮಾಡಿದೆ. ಆದ್ದರಿಂದ ಬಿಜೆಪಿ ಮತ್ತು ಮೋದಿ ಕೇವಲ ಅತ್ಯಂತ ಶ್ರೀಮಂತರ ಪರವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | Bengaluru News: ಅಪಾಯದ ಅಂಚಿನಲ್ಲಿ ಹವಾಮಾನ; ವಿವಿಧ ಲಿಂಗ, ಜಾತಿ, ವರ್ಗಗಳ ಅಸಹಾಯಕತೆ ಕುರಿತ ವಸ್ತು ಪ್ರದರ್ಶನ

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರ ₹8,165 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆದಾಗ ಭಾರತದ ರೈತರ 76 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು. ಆದ್ದರಿಂದ ಮಹಾರಾಷ್ಟ್ರ ಜನತೆ ಮಹಾ ವಿಕಾಸ್ ಅಘಾಡಿಯನ್ನು ಗೆಲ್ಲಿಸುವ ಮೂಲಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮಹಾರಾಷ್ಟ್ರದ ಜನತೆಯ ಆರ್ಥಿಕ ಪ್ರಗತಿಗೆ ಕಾರಣರಾಗಬೇಕು ಎಂದು ವಿನಂತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.