Monday, 25th November 2024

CM Siddaramaiah: ನಾಡದೇವಿ ಚಾಮುಂಡೇಶ್ವರಿಗೆ 100 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸಲು ಸಿಎಂ ಆದೇಶ

chamundeshwari

ಬೆಂಗಳೂರು: ನಾಡದೇವಿ ಮೈಸೂರಿನ (Mysuru news) ಚಾಮುಂಡೇಶ್ವರಿಗೆ (Goddess Chamundeshwari) ಚಿನ್ನದ ರಥ (Golden Chariot) ನಿರ್ಮಿಸುವ ಸಂಬಂಧ ಪರಿಶೀಲಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕಂದಾಯ ಇಲಾಖೆ ಧಾರ್ಮಿಕ ದತ್ತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಿದ್ದಾರೆ. ಶಾಸಕ ದಿನೇಶ್ ಗೂಳಿಗೌಡ ಅವರ ಮನವಿ ಮೇಲೆ ಈ ಆದೇಶ ಮಾಡಲಾಗಿದೆ.

ನಾಡದೇವಿಗೆ ಚಿನ್ನದ ರಥ ನಿರ್ಮಿಸಬೇಕು ಎಂಬ ಭಕ್ತರ, ಬೇಡಿಕೆಯನ್ನು ಅರಿತು, ಸಂಕಲ್ಪ ಮಾಡಿಕೊಂಡು ಪ್ರಯತ್ನಿಸಲಾಗಿತ್ತು. ಸಿಎಂ ಆದೇಶದಿಂದ ಈಗ ಆ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತಾಗಿದೆ.

ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆಯಾಗಿದ್ದಾಳೆ. ಕನ್ನಡಿಗರ ಧಾರ್ಮಿಕ ಪ್ರತಿನಿಧಿಯಾಗಿದ್ದಾಳೆ, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ, ದೇವಸ್ಥಾನಕ್ಕೆ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡ ಹಬ್ಬ ಎಂದು ಕರೆಯಲಾಗುತ್ತದೆ. ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತ ಕೋಟಿಯ ಬೇಡಿಕೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿ, ಕೆಲವು ಸಲಹೆ ನೀಡಿದ್ದೆ. ಚಿನ್ನದ ರಥ ನಿರ್ಮಿಸುವ ವೆಚ್ಚವನ್ನು ಸರ್ಕಾರಪಾಲು .ಮತ್ತು ಚಿನ್ನದ ರಥ ನಿರ್ಮಾಣಕ್ಕೆ ಬೇಕಾದ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು. ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಡಬೇಕು. ಭಕ್ತರು ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ನೀಡಿದ್ದೆ. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಆದೇಶ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.

ಮನವಿಯಲ್ಲೇನಿದೆ?

ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ಯಲ್ಲಿ ವರ್ಣಿತವಾಗಿದೆ. ಶ್ರೀ ಚಾಮುಂಡೇಶ್ವರಿಯಿಂದಲೇ ಈ ಬೆಟ್ಟಕ್ಕೆ ಚಾಮುಂಡಿಬೆಟ್ಟವೆಂಬ ಹೆಸರು ಬಂದಿದೆ. ಎಂಟು ಭುಜಗಳನ್ನು ಹೊಂದಿರುವ ಚಾಮುಂಡೇಶ್ವರಿ ಇಲ್ಲಿ ಆಸೀನಳಾಗಿದ್ದಾಳೆ. ಈ ವಿಗ್ರಹವು ಬಹಳಷ್ಟು ಪುರಾತನವಾದದ್ದು. ಈ ಶಿಲಾಮೂರ್ತಿಯನ್ನು ಮಾರ್ಖಂಡೇಯ ಋಷಿಗಳು ಸ್ಥಾಪಿಸಿದರೆಂದು ಸ್ಥಳ ಪುರಾಣ ಹೇಳುತ್ತದೆ.

ಚಾಮುಂಡೇಶ್ವರಿ ದೇವಸ್ಥಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಚಾಮುಂಡಿ ಬೆಟ್ಟದಲ್ಲಿ ಹಿಂದೆ ದೇವಿಯ ಚಿಕ್ಕದೊಂದು ದೇವಸ್ಥಾನವಿದ್ದು, ಕ್ರಮೇಣ ಅಭಿವೃದ್ಧಿ ಹೊಂದಿ, ಹೆಚ್ಚಿನ ಪ್ರಾಮುಖ್ಯತೆ ಗಳಿಸಿ, ಶ್ರೀ ಚಾಮುಂಡೇಶ್ವರಿ ಕ್ಷೇತ್ರವೆಂಬ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಯಾಗಿದೆ. ಚಾಮುಂಡಿ ಬೆಟ್ಟ ಅಭಿವೃದ್ಧಿಯಲ್ಲಿ ಹೊಯ್ಸಳ, ವಿಜಯನಗರ ಅರಸರ ಕೊಡುಗೆಯಿದೆ.

ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದು, ಶ್ರದ್ಧಾ ಭಕ್ತಿಯಿಂದ ದೇವಸ್ಥಾನವನ್ನು, ಲೋಕ ಕಲ್ಯಾಣಾರ್ಥವಾಗಿ ಅಭಿವೃದ್ಧಿಪಡಿಸಿ ಅದನ್ನು ದೊಡ್ಡದಾದ ದೇವಾಲಯವನ್ನಾಗಿಸಿದ್ದಾರೆ. 1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ಸಾವಿರ ವರ್ಷಕ್ಕೂ ಹಿಂದಿನ ಹಿನ್ನಲೆಯಿರುವ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ಮಹಾದ್ವಾರದ ಮೇಲೆ ಈ ದೊಡ್ಡ ಗೋಪುರವನ್ನು ಕಟ್ಟಿಸಿದರು ಎಂಬ ಇತಿಹಾಸವಿದೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಬರುವುದಕ್ಕೂ ಮೊದಲು ಮೈಸೂರು ರಾಜ್ಯ ಎಂಬ ಹೆಸರಿತ್ತು. ಮೈಸೂರಿನ ಅಧಿದೇವತೆ ಚಾಮುಂಡಿ ನಾಡದೇವಿಯಾಗಿದ್ದಳು. ಮೈಸೂರಿನ ದಸರಾ ನಾಡ ಹಬ್ಬವಾಗಿತ್ತು. ಹಾಗಾಗಿ ಕನ್ನಡ ನಾಡಿಗೂ ಮೈಸೂರಿನ ಚಾಮುಂಡಿಗೂ ಅವಿನಾಭಾವ ಸಂಬಂಧವಿದೆ.

1827 ರಲ್ಲಿ ಮುಮ್ಮಡಿ ಕೃಷ್ಣರಾಜಒಡೆಯರು ‘ಸಿಂಹವಾಹನ’ ರಥವನ್ನು ಒಂದನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದರು. ‘ಸಿಂಹ ವಾಹನ’ ವನ್ನು ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದ್ದು, ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥವನ್ನು ಎಳೆಯಲಾಗುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರೇ ಮೂಲ ಮೂರ್ತಿಗೆ ಅನುಗುಣವಾಗಿ ಉತ್ಸವ ಮೂರ್ತಿಯನ್ನೂ ತಯಾರಿಸಿ ಶೈವಾಗಮದಲ್ಲಿ ನುರಿತ ದೀಕ್ಷಿತರನ್ನು ಕಂಚಿ ಕ್ಷೇತ್ರದಿಂದ ಕರೆ ತಂದು ಆಗಮೋಕ್ತವಾಗಿ ಪೂಜೆ ಸಲ್ಲಿಸುವಂತೆ ಮಾಡಿದರು ಎನ್ನುತ್ತದೆ ಇತಿಹಾಸ. 1928 ರಿಂದ ರಥೋತ್ಸವ ನಡೆಯುತ್ತ ಬಂತು ಎಂಬ ಇತಿಹಾಸವಿದೆ. ಆಶ್ವಯುಜ ಶುಕ್ಲ ಪೂರ್ಣಿಮೆಯ ಸಂದರ್ಭದಲ್ಲಿ ಪ್ರತಿ ವರ್ಷ ದೇವಿಯ ರಥಾರೋಹಣ ಮಾಡಿ, ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಂಟಪೋತ್ಸವ, ಸಿಂಹವಾಹನೋತ್ಸವ, ಹಂಸವಾಹನೋತ್ಸವ ಮುಂತಾದ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಹಾಗೂ ಬಹು ವಿಜೃಂಭಣೆಯಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ.

ಸುವರ್ಣ ರಥ ಸಂಕಲ್ಪ

1982 ಕೊಯಮುತ್ತೂರಿನ ಭಕ್ತಾದಿಗಳು ಈಗಿನ ಮರದ ರಥವನ್ನು ಮಾಡಿಸಿದರು ಎನ್ನಲಾಗುತ್ತದೆ. ಹಾಲಿ ರಥವೂ ಶಿಥಿಲವಾಗುತ್ತ ಬಂದಿವೆ. ಹಾಗಾಗಿ ಹೊಸ ಚಿನ್ನದ ರಥ ನಿರ್ಮಿಸಿ ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು ಎಂಬುದು ಭಕ್ತರ ಸಂಕಲ್ಪ. ದೇವಿಗೆ ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಅದಕ್ಕೆ ಸುಮಾರು 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಈಡೇರಿಲ್ಲ. ಚಿನ್ನದ ರಥ ಮಾಡಲು ಸರ್ಕಾರದ ಹಣದ ಅವಶ್ಯಕತೆ ಜೊತೆಗೆ ಭಕ್ತಾದಿಗಳು ದುಡ್ಡು ಮತ್ತು ಚಿನ್ನವನ್ನು ಹಾಕುತ್ತಾರೆ. ಅದಕ್ಕಾಗಿ ಹುಂಡಿಗಳನ್ನು ಪ್ರತಿಷ್ಠಾಪಿಸಬೇಕು. ಮುಂದಿನ ದಸರಾದ ಒಳಗಡೆ ರಥ ನಿರ್ಮಿಸಿ ದೇವಸ್ಥಾನದ ಒಳಗಡೆ ಆಕೆಯನ್ನು ಮೆರವಣಿಗೆ ಮಾಡಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.