Monday, 25th November 2024

CM Siddaramaiah: ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಭದ್ರತಾ ವೈಫಲ್ಯ; ವೇದಿಕೆಗೆ ನುಗ್ಗಿದ ವ್ಯಕ್ತಿ

CM Siddaramaiah

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯ ಕಂಡು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಗವಹಿಸಿದ್ದ ಈ ಕಾರ್ಯಕ್ರಮದ ವೇದಿಕೆಯತ್ತ ವ್ಯಕ್ತಿಯೋರ್ವ ನುಗ್ಗಿ ಬಂದು ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟಿಸಿದ ಸಿದ್ದರಾಮಯ್ಯ ಅವರು ವೇದಿಕೆಗೆ ತೆರಳಿದ ವೇಳೆ ಈ ಘಟನೆ ನಡೆದಿದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ವೇದಿಕೆಗೆ ಹಾರಿದ್ದರಿಂದ ಮುಖ್ಯಮಂತ್ರಿ ಸೇರಿದಂತೆ ಅಲ್ಲಿದ್ದವರು ಗಾಬರಿಗೆ ಒಳಗಾದರು. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ, ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದರು. ಈ ವೇಳೆ ಆ ವ್ಯಕ್ತಿ ತನ್ನಲ್ಲಿದ್ದ ಶಾಲನ್ನು ಸಿದ್ದರಾಮಯ್ಯ ಅವರತ್ತ ಎಸೆದು ಕಿರಿಕ್‌ ಮುಂದುವರಿಸಿದ್ದ. ಸದ್ಯ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಹಿಂದೆಯೂ ನಡೆದಿತ್ತು

ಆಗಸ್ಟ್‌ 17ರಂದೂ ಇದೇ ರೀತಿಯ ಘಟನೆ ನಡೆದಿತ್ತು. ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ನಮ್ಮಭಿಮಾನದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ವೇಳೆಯೇ ಈ ಭದ್ರತಾ ವೈಫಲ್ಯ ಕಂಡುಬಂದಿತ್ತು. ಅದಾಗಿ ಒಂದು ತಿಂಗಳ ಅಂತರದಲ್ಲಿ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಅಂದು ಸಿಎಂ ಭಾಷಣ ಮುಗಿದ ಕೂಡಲೇ ಕಾಲಿಗೆ ಬೀಳಲು ವೇದಿಕೆ ಮೇಲೆ ಏಕಾಏಕಿ ಯುವಕನೋರ್ವ ಓಡೋಡಿ ಬಂದಿದ್ದ. ಕೂಡಲೇ ಆ ಯುವಕನನ್ನ ತಡೆದ ಪೊಲೀಸರು, ವಶಕ್ಕೆ ಪಡೆದು ವೇದಿಕೆಯಿಂದ ಕರೆದುಕೊಂಡು ಹೋಗಿದ್ದರು. ಆ ಯುವಕ ಪಾನಮತ್ತ ಹಾಗೂ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಬಳಿಕ ತಿಳಿಸಿದ್ದರು.

ಬಹುತ್ವವನ್ನು ಬದುಕಿನಲ್ಲಿ ಆಚರಿಸೋಣ

ಭಾನುವಾರ ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನುಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ʼʼನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಆ ಮೂಲಕ ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣʼʼ ಎಂದು ಕರೆ ನೀಡಿದರು. ʼʼನಮ್ಮ ಬುದ್ದ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತʼʼ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: HD Kumaraswamy: ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಭೂಕಬಳಿಕೆ ಆರೋಪ ಮಾಡಿದ ಎಚ್‌ಡಿಕೆ