Sunday, 24th November 2024

CM Siddaramaiah: 700 ಕೋಟಿ ಲೂಟಿ ಸಾಬೀತಾದ್ರೆ ರಾಜಕೀಯ ಬಿಡುವೆ, ಇಲ್ಲದಿದ್ರೆ ನೀವು ರಾಜೀನಾಮೆ ಕೊಡ್ತೀರಾ? ಮೋದಿಗೆ ಸಿಎಂ ಸವಾಲು

CM Siddaramaiah

ಬೆಂಗಳೂರು: ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮೇಲೆ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಿಂದ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸ್ತೀರಾ ಮೋದಿಯವರೇ? ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸವಾಲು ಹಾಕಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಕರ್ನಾಟಕದ ಕಾಂಗ್ರೆಸ್​ ಸರ್ಕಾರ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಭಯಂಕರ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ನೀಡಿದ್ದೀರಲ್ಲಾ ಇದು ಕುಟುಂಬ ರಾಜಕಾರಣ ಅಲ್ವಾ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು, ಇವರ ಮಕ್ಕಳಾದ ಎಚ್‌.ಡಿ.ಕುಮಾರಸ್ವಾಮಿ, ರೇವಣ್ಣ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರೆಲ್ಲಾ ಆಯ್ತು. ಈಗ ಕುಮಾರಸ್ವಾಮಿ ದಂಪತಿ ಪುತ್ರ ನಿಖಿಲ್ ಕುಮಾರಸ್ವಾಮಿ, ರೇವಣ್ಣ ದಂಪತಿ ಪುತ್ರರಾದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಇವರೆಲ್ಲಾ ಏನು ಮೋದಿಯವರೇ? ಇವರೆಲ್ಲಾ ಕುಟುಂಬ ರಾಜಕಾರಣ ಮಾಡುತ್ತಿಲ್ವಾ? ನುಡಿದಂತೆ ನಡೆಯೋದು ನಿಮ್ಮಿಂದ ಆಗದ ಮಾತು ಎಂದು ಕಿಡಿಕಾರಿದ್ದಾರೆ.

ಹೆಣಗಳ ಲೆಕ್ಕದಲ್ಲೂ ಹಣ ಲೂಟಿ

ಕರೋನಾ ಸಂದರ್ಭದಲ್ಲಿ ಇಡೀ ರಾಜ್ಯದ ಜನರ ಪರಿಸ್ಥಿತಿ ಹೇಗಿತ್ತು ಅಂತ ನಮಗೂ ಗೊತ್ತು, ನಿಮಗೂ ಗೊತ್ತು. ಇಂಥ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿಎಸ್‌ವೈ, ಸಚಿವರಾದ ಶ್ರೀರಾಮುಲು, ಡಾ.ಸುಧಾಕರ್ ಚೀನಾ ಜತೆಗೆ ವ್ಯವಹಾರ ಮಾಡಿ ಪಿಪಿಇ ಕಿಟ್ ಖರೀದಿಸಿ ಕಮಿಷನ್ ತಿಂದಿದ್ದು, ದುಡ್ಡು ಲೂಟಿ ಮಾಡಿದ್ದು ವರದಿ ಆಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ 36 ಜನರ ಸಾವಿಗೆ ಕಾರಣರಾದ ಇವರಿಗೆಲ್ಲಾ ಕ್ಷಮೆ ಇದೆಯಾ? ಇವರನ್ನು ಕ್ಷಮಿಸಿ ಮತ ಹಾಕಿದ್ರೆ ನಿಮ್ಮ ಮತಗಳಿಗೆ ಗೌರವ ಬರುತ್ತದೆಯಾ? ಕರೋನಾ ಸಂದರ್ಭದಲ್ಲಿ ಮೃತದೇಹಗಳ, ಹೆಣಗಳ ಲೆಕ್ಕದಲ್ಲೂ ಹಣ ಲೂಟಿ ಮಾಡಿದ ಕೆಟ್ಟ ಸರ್ಕಾರ ಬಿಜೆಪಿಯದ್ದು. ಇಂಥಾ ಕೆಟ್ಟ ಸರ್ಕಾರ ಭಾರತದ ಚರಿತ್ರೆಯಲ್ಲೇ ಬಂದಿರಲಿಲ್ಲ ಎಂದು ಸಿಎಂ ಆಕ್ರೋಶ ಹೊರಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ | Parashurama Theme Park: ಪರಶುರಾಮ ಮೂರ್ತಿಯ ಶಿಲ್ಪಿ ಕೃಷ್ಣ ನಾಯ್ಕ ಕೇರಳದಲ್ಲಿ ಅರೆಸ್ಟ್