ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣಕ್ಕೆ (MUDA case) ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಲೋಕಾಯುಕ್ತ (Lokayukta) ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲಿದ್ದಾರೆ.
ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ನವೆಂಬರ್ 6ರಂದು ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ನ.6ರಂದು ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈ ಮೂಲಕ 40 ವರ್ಷಗಳ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ವಿಚಾರಣೆಗೆ ನೋಟಿಸ್ ನೀಡಲಾಗಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈಗಾಗಲೇ ಮುಡಾ ಕೇಸ್ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಇಂದು ಸಿಎಂ ವಿಚಾರಣೆ ಹಿನ್ನೆಲೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಮೈಸೂರು ಸಿಟಿ ಕಮಿಷನರ್ ಸೀಮಾ ಲಾಟ್ಕರ್ ಮಂಗಳವಾರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ನೂರಾರು ಬ್ಯಾರಿಕೇಡ್‌ಗಳನ್ನು ತರಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದು ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳು ಇದನ್ನು ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದವು. ಇದಾದ ಬಳಿಕ, ತಾವು ಪಡೆದ ಮುಡಾ ನಿವೇಶನಗಳನ್ನು ಸಿಎಂ ಪತ್ನಿ ಪಾರ್ವತಿ ಅವರು ವಾಪಸು ಮಾಡಿದ್ದರು.
ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ಮಂಗಳವಾರ ವಿಚಾರಣೆ ನಡೆಯುತು. ಮುಂದಿನ ವಿಚಾರಣೆ ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಇದರ ಜೊತೆಗೆ ನವೆಂಬರ್ 25ವರೆಗೆ ನಡೆದಿರುವ ತನಿಖೆಯ ವಿವರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಇದನ್ನೂ ಓದಿ: Muda Case: ಮುಡಾ ಹಗರಣದ ಸಿಬಿಐ ತನಿಖೆ ಕೋರಿ ಅರ್ಜಿ; ಸಿಎಂಗೆ ಹೈಕೋರ್ಟ್ ನೋಟಿಸ್, ವಿಚಾರಣೆ ನ.26ಕ್ಕೆ ಮುಂದೂಡಿಕೆ