ಬೆಂಗಳೂರು: ಮುಡಾ ನಿವೇಶನ ವಾಪಸ್ ನೀಡಲು ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಡಾಗೆ ಪತ್ರ ಬರೆದಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ನಾನು ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ, ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ನಿಯ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನಿನ ಮಾಲೀಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3 ಎಕರೆ 16 ಗುಂಟೆ ಜಮೀನು ನೀಡಿದ್ದರು. ಅದನ್ನು ಮುಡಾದವರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ರಚಿಸಿ ಮಾರಿಕೊಂಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4 ನೇ ಹಂತದಲ್ಲಿ ನಿವೇಶನ ಮಂಜೂರು ಮಾಡಿತ್ತು. ನನ್ನ ಪತ್ನಿಯವರು ವಿಜಯನಗರದಲ್ಲೇ ನೀಡುವಂತೆ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ.
ನನ್ನ ತೇಜೋವಧೆಯಾಗುತ್ತಿರುವುದು ಹಾಗೂ ರಾಜಕೀಯ ದ್ವೇಷ ಹಾಗೂ ಸೇಡನ್ನು ತೀರಿಸಿಕೊಳ್ಳತ್ತಿರುವ ಕೆಲಸವನ್ನು ವಿರೋಧಿಗಳು ಮತ್ತು ವಿರೋಧ ಪಕ್ಷಗಳು ಮಾಡುತ್ತಿರುವುದರಿಂದ ಮನನೊಂದು ನಿವೇಶನಗಳನ್ನು ಮರಳಿ ನೀಡಲು ಪತ್ನಿ ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ನೆನ್ನೆ ಇಡಿಯವರು ಇಸಿಐಆರ್ ಫೈಲ್ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿಯವರು ಕಾನೂನು ರೀತಿ ಯಾವೆಲ್ಲಾ ಕ್ರಮವಿದೆ ತೆಗೆದುಕೊಳ್ಳಲಿ ಎಂದರು.
ಜಮೀನಿನ ಬದಲಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ನನ್ನ ಪ್ರಕಾರ Money Laundering ಆಗುವುದಿಲ್ಲ ಈ ಪ್ರಕರಣದಲ್ಲಿ ನನ್ನ ಪಾತ್ರವೇನು? ವಿರೋಧ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ರಾಜಿನಾಮೆ ನೀಡುವುದರಿಂದ ಎಲ್ಲವೂ ಮುಗಿಯುತ್ತದೆಯೇ? ಅನಗತ್ಯವಾಗಿ ರಾಜಿನಾಮೆ ಕೇಳುತ್ತಿದ್ದಾರೆ ನನ್ನ ತಪ್ಪಿಲ್ಲ ಎಂದ ಮೇಲೆ ರಾಜಿನಾಮೆ ಯಾಕೆ ನೀಡಬೇಕು ಎಂದು ಮಾಧ್ಯಮದವರಿಗೆ ಉತ್ತರಿಸಿದರು.
ಇದನ್ನೂ ಓದಿ | CM Siddaramaiah: ಹಿರಿಯ ನಾಗರಿಕರಿಗೆ ಮಾಸಾಶನ ಹೆಚ್ಚಳದ ಬಗ್ಗೆ ಚರ್ಚೆ: ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಕರಣಕ್ಕೂ ಹಾಗೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಯಡಿಯೂರಪ್ಪ ಡಿನೊಟಿಫೈ ಮಾಡಿದ್ದರು ನಾನು ಡಿನೋಟಿಫೈ ಮಾಡಿಲ್ಲ, Money Laundering ಮಾಡಿಲ್ಲ. ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ, ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ತೇಜೋವಧೆ ಖಂಡಿಸಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬೃಹತ್ ಜಾಥಾ
ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ ಹುಬ್ಬಳಿಯಿಂದ ಬೆಂಗಳೂರಿಗೆ ಹೊರಟಿರುವ ಜಾಥಾ (CM Siddaramaiah) ಅಕ್ಟೋಬರ್ 4ರ ಗುರುವಾರ ತುಮಕೂರು ತಲುಪಲಿದ್ದು, ಅಕ್ಟೋಬರ್ 05ರ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ. ಅಲ್ಲಿಂದ ವಿಧಾನಸೌಧದವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಕುರುಬರ ಯುವ ವೇದಿಕೆ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಅಹಿಂದ ಸಂಘಟನೆಯ ಮುಖಂಡರಾದ ಮುತ್ತಳ್ಳಿ ಶಿವಣ್ಣ ಅವರ ನೇತೃತ್ವದಲ್ಲಿ ಸುಮಾರು ಲಕ್ಷಾಂತರ ಸಂಖ್ಯೆಯಲ್ಲಿ ಅಹಿಂದ ಕಾರ್ಯಕರ್ತರು, ಮುಖಂಡರು ಅಕ್ಟೋಬರ್ 04ರ ಗುರುವಾರ ಬೆಳಗ್ಗೆ ಜಾಥಾ ಹೊರಡಲಿದ್ದು, ಸಂಜೆ ತುಮಕೂರು ತಲುಪಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 05ರ ಶುಕ್ರವಾರ ತುಮಕೂರಿನಿಂದ ಹೊರಟು ಫ್ರೀಡಂ ಪಾರ್ಕಿಗೆ ತಲುಪಿ, ಅಲ್ಲಿಂದ ವಿಧಾನಸೌಧದವರೆಗೆ ಪಾದಯಾತ್ರೆ ನಡೆಯಲಿದೆ. ಇದು ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ತುಂಬುವ ನಿಟ್ಟಿನಲ್ಲಿ ಅಹಿಂದ ವರ್ಗಗಳು ಸೇರಿದಂತೆ ಎಲ್ಲಾ ಶೋಷಿತ ಸಮುದಾಯಗಳು ಒಗ್ಗೂಡಿ ನಡೆಸುತ್ತಿರುವ ಜಾಥಾ ಆಗಿದೆ ಎಂದರು.
ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವಿದ್ದೇವೆ ಎಂಬುದನ್ನು ಸಾರುವ ಉದ್ದೇಶದಿಂದ ಈ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಿದ್ದರಾಮಯ್ಯ ಹಿತೈಷಿಗಳು, ಅಭಿಮಾನಿಗಳು ಅಹಿಂದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿದ್ದರಾಮಯ್ಯ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಅಹಿಂದ ಮಹಿಳಾ ಘಟಕದ ಅಧ್ಯಕ್ಷೆ ಸುಕನ್ಯ ಮಾತನಾಡಿ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಎಂದಿಗೂ ಕಿಚನ್ ಕ್ಯಾಬಿನೆಟ್‌ಗೆ ಅವಕಾಶ ನೀಡಿದವರಲ್ಲ. ಇಂತಹ ವ್ಯಕ್ತಿಯ ವಿರುದ್ಧ ಅರಿಶಿನ ಕುಂಕುಮಕ್ಕೆಂದು ಪತ್ನಿಗೆ ನೀಡಿದ್ದ ಭೂಮಿಯನ್ನು ವಿವಾದ ಮಾಡಿ, ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಬಿಜೆಪಿ-ಜೆಡಿಎಸ್ ಮಾಡುತ್ತಿದೆ. ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರ ಬೆನ್ನಿಗೆ ಅಹಿಂದ ಇದೆ ಎಂದರು.
ಈ ಸುದ್ದಿಯನ್ನೂ ಓದಿ | World Senior Citizens Day: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜತೆ ಚರ್ಚೆ; ಲಕ್ಷ್ಮೀ ಹೆಬ್ಬಾಳಕರ್
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆದಿಲ್, ಅಹಿಂದ ರಾಷ್ಟ್ರೀಯ ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸುನಿತಾ ನಟರಾಜ್, ನಿರ್ದೇಶಕರಾದ ಪ್ರೇಮ, ಲಕ್ಷ್ಮೀನಾರಾಯಣ ಸೇರಿ ಹಲವರು ಉಪಸ್ಥಿತರಿದ್ದರು.