Monday, 18th November 2024

CM Siddaramaiah: ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ, ಕ್ಷಣ ಹೊತ್ತು ಆಣಿಮುತ್ತು ಭಾಗ 14 ಪುಸ್ತಕ ಬಿಡುಗಡೆ

CM Siddaramaiah

ಬೆಂಗಳೂರು: ಬಸವಣ್ಣ (Basavanna) ಅವರ ವಿಚಾರ, ತತ್ವ, ಆದರ್ಶಗಳನ್ನು ನೂರಕ್ಕೆ ನೂರು ಪಾಲನೆ ಮಾಡಲಾಗದಿದ್ದರೂ, ಪಾಲಿಸುವ ಪ್ರಯತ್ನವನ್ನು ಮಾಡುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು, ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ಹೊಟೇಲ್ ರಮಣಶ್ರೀಯಲ್ಲಿ ಆಯೋಜಿಸಿದ್ದ 19ನೇ ವರ್ಷದ ʼರಮಣಶ್ರೀ ಶರಣ ಪ್ರಶಸ್ತಿ ಪ್ರದಾನʼ ಹಾಗೂ ಎಸ್. ಷಡಕ್ಷರಿ ಅವರ ʼಕ್ಷಣ ಹೊತ್ತು ಆಣಿಮುತ್ತುʼ ಭಾಗ-14 ರ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ. ಬಸವಾದಿ ಶರಣರ ವಿಚಾರಗಳು ಇಡೀ ಜಗತ್ತಿಗೆ ತಲುಪಬೇಕು. ಬಸವಾದಿ ಶರಣರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವವನ್ನು ಸಲ್ಲಿಸಿದಂತಾಗುತ್ತದೆ. ಸಮಾಜಕ್ಕೆ ಬಸವಣ್ಣ ಮತ್ತು ಅವರ ಅನುಯಾಯಿಗಳ ಕೊಡುಗೆ ಅಪಾರವಾದುದು ಎಂದರು.

ಮಾನವೀಯತೆಯಿಂದ ಕೂಡಿದ ಸಮಾಜ ಅಗತ್ಯ

ಸಮಾನತೆಯ ಸಮಾಜ ನಿರ್ಮಾಣವಾಗಲು ಜಾತಿ ವ್ಯವಸ್ಥೆ ಹೋಗಬೇಕು. ಇಂದಿಗೂ ಜಾತಿ ವ್ಯವಸ್ಥೆ ಇದ್ದು, ಇದನ್ನು ಹೋಗಲಾಡಿಸಲು ಮಾನವೀಯತೆಯಿಂದ ಕೂಡಿದ ಸಮಾಜ ಅಗತ್ಯ. ಎಲ್ಲರಿಗೂ ಸಮಾನ ಅವಕಾಶಗಳು, ವೈಚಾರಿಕತೆ ಇರಬೇಕು. ಕರ್ಮ ಸಿದ್ಧಾಂತ ಇರಬಾರದು. ಇದನ್ನು ಈಗಲೂ ಬಹಳ ಜನ ಪರಿಪಾಲಿಸುತ್ತಾರೆ. ವಿದ್ಯಾವಂತರೂ ಕೂಡ ಹಣೆಬರಹದಲ್ಲಿ ನಂಬಿಕೆ ಇಡುತ್ತಾರೆ. ವೈಚಾರಿಕತೆ, ವೈಜ್ಞಾನಿಕತೆಯಿಂದ ಕೂಡಿದ ಸಮಾಜದಿಂದ ಮಾತ್ರ ಇದಕ್ಕೆ ಪರಿಹಾರ. ನನಗಾಗಲಿ, ಬಸವರಾಜ ಬೊಮ್ಮಾಯಿ ಅವರಿಗಾಗಲಿ ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಬರೆದಿದ್ದರೆ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆ; 12ನೇ ತರಗತಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಿ

ಮೌಢ್ಯ, ಕಂದಾಚಾರಗಳನ್ನು ಬಿಡಬೇಕು

ಗೊತ್ತಿದ್ದೋ ಗೊತ್ತಿಲ್ಲದೆಯೋ ಮೌಢ್ಯ, ಕಂದಾಚಾರಗಳನ್ನು ಆಚರಿಸುತ್ತೇವೆ. ಇದನ್ನು ಬಿಟ್ಟಾಗ ಮಾತ್ರ ಬಸವಾದಿ ಶರಣರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದ ಸಿಎಂ ಅವರು, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನಗಳು ಆಗಲಿ. ನಾನು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನವನ್ನು ನಿಜವಾಗಿ ಮಾಡುತ್ತಿದ್ದೇನೆ. ಅಸಮಾನತೆ ಹೋಗಬೇಕಾದರೆ ಬದಲಾವಣೆ ಅಗತ್ಯ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಅಸಮಾನತೆ ಹೋಗಲು ಸಾಧ್ಯ. ಆ ಶಕ್ತಿಯನ್ನು ಜನರಲ್ಲಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಹಾಗೂ ಇತರರು ಉಪಸ್ಥಿತರಿದ್ದರು.