ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 52
ಕ್ಲಬ್ ಹೌಸ್ ನಲ್ಲಿ ಕಿಕ್ಕೇರಿಸಿದ ಅಂಕಣಕಾರರು ಅಂಕಣ ಬರೆಯುವ ಆ ಕ್ಷಣಗಳ ಅನಾವರಣ
ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ ಕಾರ್ಯಕ್ರಮ ಅರ್ಧಶತಕ ದಾಟಿದ್ದು, ಪತ್ರಿಕೆಯ ಎಲ್ಲ ಅಂಕಣಕಾರರು ತಮ್ಮ ಅಕ್ಷರ ಸಂಪದದ ಸಾರೋಟಿನ ಮೆರವಣಿಗೆಯನ್ನು ಮಾತಿನ ಮೂಲಕ ಕೇಳುಗರ ಮುಂದೆ ಅಭಿವ್ಯಕ್ತಗೊಳಿಸಿದರು.
ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ ಸುಮಾರು 20ಕ್ಕೂ ಅಧಿಕ ಅಂಕಣಕಾರರು ಕಾರ್ಯಕ್ರಮದಲ್ಲಿ ತಮ್ಮ ಬರಹ ಪ್ರಸವದ ಸಿಹಿ ವೇದನೆಯನ್ನು ಬಿಚ್ಚಿಟ್ಟರು. ಜತೆಗೆ ತಮ್ಮ ಬರಹದ ಹಿಂದಿನ ಧೀಶಕ್ತಿಯನ್ನು ಹೊಗಳುತ್ತಾ, ತಮ್ಮ ಅಂಕಣಗಳ ಆರಂಭದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಕೀಯ ವಿಶ್ಲೇಷಕ, ಅಂಕಣಕಾರ ಆರ್.ಟಿ ವಿಠ್ಠಲ ಮೂರ್ತಿ, ರಾಜಕೀಯ ವರದಿಗಾರಿಕೆ ಯನ್ನು ಹತ್ತಿರದಿಂದ ಬಲ್ಲವರು ಮಾತ್ರವೇ ಉತ್ತಮ ರಾಜಕೀಯ ಅಂಕಣ ಬರೆಯಲು ಸಾಧ್ಯ. ಕೆಲವೊಮ್ಮ ರಾಜಕೀಯ ಅಂಕಣಕಾರ ನಿಷ್ಠುರವಾಗಿರಬೇಕಾಗುತ್ತದೆ. ಅದನ್ನು ಪ್ರಕಟಿಸುವಲ್ಲಿಯೂ ಸಮಚಿತ್ತದ ಸಂಪಾದಕರ ಅಗತ್ಯವಿದೆ ಎಂದು ತಿಳಿಸಿದರು.
ರಾಜಕೀಯ ವರದಿಗಾರರು ರಾಜಕಾರಣಿಗಳನ್ನು ಹತ್ತಿರದಿಂದ ನೋಡಿರುತ್ತೇವೆ. ಅವರನ್ನು ಸೆಲೆಬ್ರಿಟಿಗಳು ಎಂದು ನೋಡುವ ಭಾವನೆ ಇರುವುದಿಲ್ಲ. ಅವರ ಒಳ್ಳೆಯ ಮತ್ತು ಕೆಟ್ಟ ನಡೆಗಳು ಕೂಡ ನಮಗೆ ಅರಿವಾಗಿ ರುತ್ತದೆ. ಹೀಗಾಗಿ, ರಾಜಕೀಯ ವರದಿಗಾರರು ಉತ್ತಮವಾದ ರಾಜಕೀಯ ಅಂಕಣ ಬರೆಯಬಹುದು ಎಂದರು. ರಾಜಕೀಯ ಅಂಕಣ ಕಾರನಾದವನಿಗೆ ಇತಿಹಾಸದ ಅರಿವಿರಬೇಕು. ಸುದ್ದಿಯನ್ನು ಖಾತರಿಪಡಿಸಿಕೊಳ್ಳುವ ಗುಣವಿರಬೇಕು. ಆಗ ಮಾತ್ರ ಉತ್ತಮ ವಿಷಯಗಳನ್ನು ಸಂಗ್ರಹ ಮಾಡಿ, ಅವುಗಳನ್ನು ನಿಖರವಾಗಿ ಬರೆಯಲು ಸಾಧ್ಯವಾಗುತ್ತದೆ.
ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ, ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದನ್ನು ಖಚಿತ ಪಡಿಸಿಕೊಳ್ಳಲು, ನಾನು ಅನೇಕರನ್ನು
ವಿಚಾರಿಸಿದೆ. ಆದರೆ, ಸುದ್ದಿ ನಿಖರ ಎಂಬುದು ಗೊತ್ತಾಗಲಿಲ್ಲ. ಹೀಗಾಗಿ, ಸಿಎಂ ಮನೆಗೆ ನಾನು ಕರೆ ಮಾಡಿದ್ದೆ. ಆಗ ಆ ಕಡೆಯಿಂದ ಮಾತನಾಡಿದವರು, ಇದು
ಸುಳ್ಳು ಸುದ್ದಿ ಎಂದು ತಿಳಿಸಿದರು. ಇಷ್ಟಕ್ಕೆ ಸುಮ್ಮನಾಗದ ನಾನು. ಇದರ ಖಚಿತತೆ ಹೇಗೆ ಸಾರ್, ಇಲ್ಲಿ ಎಲ್ಲರೂ ಅವರು ನಿಧನರಾಗಿದ್ದಾರೆ ಎನ್ನುತ್ತಿದ್ದಾರೆ ಎಂದು ಕೇಳಿದೆ. ಅದಕ್ಕೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ‘ಇಲ್ಲ ಅವರು ಸತ್ತಿಲ್ಲ, ಇದಕ್ಕೆ ನಾನು ಗ್ಯಾರಂಟಿ, ಏಕೆಂದರೆ ಮಾತನ್ನಾಡುತ್ತಿರುವುದು ವೀರೇಂದ್ರ ಪಾಟೀಲ್, ಈ ರಾಜ್ಯದ ಮುಖ್ಯಮಂತ್ರಿ ಎಂದು ತಿಳಿಸಿದ್ದರು ಎಂಬುದನ್ನು ನೆನಪಿಸಿಕೊಂಡರು.
ರಾಜಕೀಯ ವರದಿಗಾರಿಕೆಯಲ್ಲಿ ಕೆಲವೊಮ್ಮೆ ರಾಜಕಾರಣಿಗಳನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಅವರ ವಿರುದ್ಧ ಬರೆದರೂ, ಅವರ ಜತೆ ಒಂದು ಬಾಂಧವ್ಯ
ಉಳಿಸಿಕೊಳ್ಳುವ ಅನಿವಾರ್ಯತೆ ರಾಜಕೀಯ ಅಂಕಣಕಾರನಿಗೆ ಇರುತ್ತದೆ. ರಾಜಕಾರಣಗಳ ಬರೀ ಕೆಟ್ಟ ಗುಣಗಳು ಮಾತ್ರವಲ್ಲ, ಅವರ ಒಳ್ಳೆಯ ಗುಣಗಳ ಬಗ್ಗೆಯೂ ಬರೆಯುವ ಮೂಲಕ ರಾಜಕೀಯ ಪತ್ರಕರ್ತ ಉತ್ತಮ ಬರಹಗಾರನಾಗಬಹುದು ಎಂದರು.
ಅಂಕಣಕಾರ ಪಥ ಬದಲಿಸಬಾರದು
ಸಂವಾದದಲ್ಲಿ ಮಾತನಾಡಿದ ಸಂತೋಷ್ ಕುಮಾರ್ ಮೆಹಂದಳೆ, ಒಬ್ಬ ಅಂಕಣಕಾರ ತಾನು ಬರೆಯುವ ವಿಷಯಗಳನ್ನು ಬಿಟ್ಟು, ಬೇರೆ ವಿಷಯಗಳ ಬಗ್ಗೆ ಬರೆಯಲು ತೊಡಗಬಾರದು. ಇಂತಹ ಪಥ ಬದಲಾವಣೆಯಿಂದ ಕೆಲವೊಮ್ಮೆ ಸಮಸ್ಯೆಗಳಾಗುತ್ತವೆ. ನಾನು ಬರೆಯುವ ಅಲೆಮಾರಿ ಡೈರಿಯಲ್ಲಿ ಪ್ರವಾಸದ ಬಗ್ಗೆ ಬರೆಯುತ್ತ, ಅದನ್ನು ಮುಂದಿನ ವಾರ ಇದ್ದಕ್ಕಿದ್ದಂತೆ ರಾಜಕೀಯ ವಿಷಯದಲ್ಲಿ ಬರೆದರೆ, ನನ್ನ ಬಳಿ ಪ್ರವಾಸದ ವಿವರ ಖಾಲಿಯತಾಗಿದೆ ಎಂಬ ಅರ್ಥ ಬರುತ್ತದೆ. ಹೀಗಾಗಿ, ನಮ್ಮ ಅಂಕಣಗಳಲ್ಲಿ ವಿಷಯದ ನಿಖರತೆ ಇರಬೇಕು. ನಾನು ಈವರೆಗೆ ಇಂತಹ ನಿಖರತೆಯನ್ನು ಕಾಪಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.
ಅಂಕಣಕಾರರ ಕೂಟ ಸಂವಾದದಲ್ಲಿ ಶ್ರೀವತ್ಸ ಜೋಶಿ, ಗಂಗಾವತಿ ಪ್ರಾಣೇಶ್, ಆರ್.ಟಿ ವಿಠ್ಠಲಮೂರ್ತಿ, ವಸಂತ ನಾಡಿಗೇರ, ಕಿರಣ್ ಉಪಾಧ್ಯಾಯ, ಶಶಿಧರ ಹಾಲಾಡಿ, ಮೋಹನ್ ವಿಶ್ವ, ರೂಪಾ ಗುರುರಾಜ್, ಕಿರಣ್, ಸಂತೋಷ್ ಕುಮಾರ್ ಮೆಹಂದಳೆ, ವಿಜಯೇಂದ್ರ ರಾವ್, ರಂಜಿತ್ ಅಶ್ವತ್ಥ, ಕೆ. ವಿರಾಜ್ ಅಣಜಿ, ಚಂದ್ರಶೇಖರ್ ಬೇರಿಕೆ ಇದ್ದರು.
ಸಾಹಿತಿಗಳಿಂದ ಅಂಕಣ ಬರೆಸುವುದು ಬಲುಕಷ್ಟ
ಕನ್ನಡದ ಅದೆಷ್ಟೋ ಸಾಹಿತಿಗಳ ಬಳಿ ಅಂಕಣ ಬರೆಸಬೇಕು ಎಂಬ ಕಾರಣಕ್ಕೆ ನಾನು ಅವರ ಹಿಂದೆ ಬಿದ್ದಿದ್ದೇನೆ. ಆದರೆ, ಏನಾದರೂ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ, ಹೊಸ ಹೊಸ ಅಂಕಣಕಾರರನ್ನು ಸೃಷ್ಟಿಸುವುದೇ ಸುಲಭ ದಾರಿ ಎನಿಸಿತು. ನಾನು ಈ ದೃಷ್ಟಿಯಲ್ಲಿ ಅಪಾರ ಜ್ಞಾನವನ್ನುಳ್ಳ ವ್ಯಕ್ತಿಗಳಿಗೆ ಬರೆಯುವ ಪ್ರೇರಣೆ ನೀಡುತ್ತೇನೆ. ಅವರು ತಮ್ಮೊಳಗಿನ ಅನುಭವವನ್ನು ದಾಖಲು ಮಾಡುತ್ತಿದ್ದಾರೆ. ಹೀಗಾಗಿ, ಅನೇಕರು ನಮ್ಮ ಪತ್ರಿಕೆಯಲ್ಲಿ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಒಂದು ದಿನವೂ ತಪ್ಪದೇ ಅಂಕಣಗಳನ್ನು ನೀಡುತ್ತಾ ಬಂದಿದ್ದಾರೆ. ವಿಶ್ವವಾಣಿ ಪತ್ರಿಕೆ ಅಂಕಣಗಳಿಂದಲೇ ಇಂದು ಮನೆಮಾತಾಗಿದೆ. ಜತೆಗೆ, ಓದುಗರು ನೀಡಿದ ಸಲಹೆಯ ಅನ್ವಯ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲು ವಿಶ್ವವಾಣಿ ಸಿದ್ಧವಿದೆ ಎಂದು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು.
ಭಟ್-ಬೆಳಗೆರೆ ಜೋಡಿ ಬೇರ್ಪಟ್ಟದ್ದು ತುಂಬಲಾರದ ನಷ್ಟ
ಹಂಸಲೇಖ ಮತ್ತು ರವಿಚಂದ್ರನ್ ಜೋಡಿ ಬೇರ್ಪಟ್ಟಾಗ ಕನ್ನಡ ಚಿತ್ರರಂಗಕ್ಕೆ ಎಷ್ಟು ನಷ್ಟವಾಯಿತೋ ಅಷ್ಟೇ ನಷ್ಟ ಕನ್ನಡ ಪತ್ರಿಕೋದ್ಯಮಕ್ಕೆ ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ ಅವರು ಬೇರೆಯಾದಾಗ ಆಗಿದೆ. ಅವರಿಬ್ಬರೂ ಜತೆಗಿಯಾಗಿದ್ದರೆ, ಪತ್ರಿಕೋದ್ಯಮಕ್ಕೆ ಇಂದಿನ ಸಂದಿಗ್ಧ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಭಾವನೆ ನನ್ನದು. ವಿಶ್ವೇಶ್ವರ ಭಟ್ ಅವರು ಸಿದ್ಧಾಂತಕ್ಕೆ ಅಂಟಿಕೊಂಡ ಪತ್ರಕರ್ತರಲ್ಲ, ಅವರು ಹುಟ್ಟುತ್ತಲೇ ಪತ್ರಕರ್ತರಷ್ಟೇ, ಅವರಂತೆ ಅಂಕಣಕಾರರ ನಿಲುವಿಗೆ ಬದ್ಧವಾಗಿ ಅಂಕಣಗಳನ್ನು ಪ್ರಕಟ ಮಾಡುವ ಪತ್ರಕರ್ತರು, ಸಂಪಾದಕರು ಕನ್ನಡ ಪತ್ರಿಕೋದ್ಯಮದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರು ಎಂದಿಗೂ ನಮ್ಮ ಅಂಕಣಗಳಿಗೆ ಕತ್ತರಿ ಹಾಕುವ ಕೆಲಸ ಮಾಡುವವರಲ್ಲ ಎಂದು ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಶ್ಲಾಘನೆ ವ್ಯಕ್ತಪಡಿಸಿದರು.
***
ವಿಶ್ವವಾಣಿ ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಓದಬಹುದಾದ ಒಂದು ಸಮಗ್ರ ಪತ್ರಿಕೆ. ಅಷ್ಟು ಸೊಗಸಾಗಿ ಬರುವ ಪತ್ರಿಕೆಗಳಲ್ಲಿ ವಿಶ್ವವಾಣಿಗೆ ಮೊದಲ ಸ್ಥಾನ. ಇಲ್ಲಿ ನನ್ನ ಅಂಕಣಗಳನ್ನು ಬರೆಯುವುದಕ್ಕೆ ಪ್ರೋತ್ಸಾಹಿಸಿದ ವಿಶ್ವೇಶ್ವರ ಭಟ್ ಅವರಿಗೆ ನಾನು ಎಂದಿಗೂ ಅಭಾರಿಯಾಗಿದ್ದೇನೆ.
– ಎಸ್.ಷಡಕ್ಷರಿ ಅಂಕಣಕಾರ
ವಿಷಯದ ಆಯ್ಕೆಯೇ ಸವಾಲು, ಬರೆಯುವ ವಿಷಯ ಬಹಳ ಇರುತ್ತದೆ. ಎರಡು ಮೂರು ದಿನ ಮುಂಚೆಯೇ ನಿರ್ಧಾರ ಮಾಡಿದರೆ, ಬೇರೆ ಬೆಳವಣಿಗೆ ಆಗುತ್ತದೆ. ವಿಷಯಗಳನ್ನು ಇಷ್ಟೇ ಜಾಗದಲ್ಲಿ ಬರೆಯಬೇಕೆಂಬ ಮಿತಿ ಇರುವ ಕಾರಣಕ್ಕೆ ಅಷ್ಟರೊಳಗೆ ಹೇಳಬೇಕಾದ ವಿಷಯವನ್ನೆಲ್ಲ ಹೂರಣಗೊಳಿಸಬೇಕು. ಪತ್ರಕರ್ತರಿ ಗಿಂತ ಚೆನ್ನಾಗಿ ಬರೆಯುವ ಬೇರೆ ಅಂಕಣಕಾರರಿದ್ದಾರೆ. ವಿನೋದ ಮೇಹ್ತಾ ಅವರು ಸಂಡೇ ಅಬ್ಸರ್ವರ್ ಮೂಲಕ ಅಂತಹ ಪ್ರಯೋಗ ಮಾಡಿದ್ದರು. ಅಂತಹ ಪ್ರಯೋಗವನ್ನು ಕನ್ನಡದಲ್ಲಿ ವಿಶ್ವವಾಣಿ ಮಾಡುತ್ತಿದೆ. ಇದಕ್ಕೆ ಅಭಿನಂದನೆಗಳು.
– ವಿಜಯೇಂದ್ರ ರಾವ್ ಅಂಕಣಕಾರರು