Friday, 22nd November 2024

Communal Tension: ಬಿಸಿ ರೋಡ್‌ನಲ್ಲಿ ವಾತಾವರಣ ಬಿಸಿ ಬಿಸಿ, ಕಾಟಿಪಳ್ಳ ಮಸೀದಿಗೆ ಕಲ್ಲು ಎಸೆದ 6 ಮಂದಿ ಬಂಧನ

communal tension bc road

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ (Dakshina Kannada, Bantwal News) ತಾಲೂಕಿನ ಬಿ.ಸಿ.ರೋಡ್‌ನಲ್ಲಿ (BC Road tense) ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಮುಖಂಡರ ಪ್ರಚೋದನಕಾರಿ ಹೇಳಿಕೆಗಳ ಪರಿಣಾಮ ಉದ್ವಿಗ್ನ ಪರಿಸ್ಥಿತಿ (Communal tension) ಉಂಟಾಗಿದ್ದು, ಪೊಲೀಸರು ಪಟ್ಟಣದಾದ್ಯಂತ ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

ಹಿಂದೂ ಸಂಘಟನೆಗಳ ಬಿ.ಸಿ.ರೋಡ್ ಚಲೋ (BC Road Chalo) ಪ್ರತಿಭಟನೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದ ಬಿಗಿ ಬಂದೋಬಸ್ತ್‌ ಹಾಕಿದ್ದ ಪೊಲೀಸರು ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಶಾಂತಗೊಳಿಸಿದ್ದರು. ಆದರೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸರು ಮುಸ್ಲಿಂ ಯುವಕರ ಬೈಕ್ ರ್ಯಾಲಿಗೆ ಅನುಮತಿ ಕೊಟ್ಟಿದ್ದಾರೆ. ಇದರಿಂದಾಗಿ ಮತ್ತೆ ಗೊಂದಲ-ಗಲಾಟೆ ವಾತಾವರಣ ನಿರ್ಮಣವಾಗಿದೆ.

ಮುಸ್ಲಿಂ ಬೈಕ್ ರ್ಯಾಲಿಗೆ ಅನುಮತಿ ನೀಡಿರುವ ಪೊಲೀಸ್ ಕ್ರಮವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಮಗೆ ಮೆರವಣಿಗೆಗೆ ಅನುಮತಿ ನೀಡಿಲ್ಲ. ಈಗ ಮುಸ್ಲಿಮರಿಗೆ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿದ್ದೀರಿ. ಈ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯವರೆಗೂ ರಸ್ತೆಯಲ್ಲಿಯೇ ಧರಣಿ ನಡೆಸುವುದಾಗಿ ಪ್ರತಿಭಟನೆ ಆರಂಭಿಸಿದ್ದಾರೆ.

ಈದ್ ಮಿಲಾದ್ ಮೆರವಣಿಗೆಯ ಕುರಿತು ಮುಸ್ಲಿಂ ನಾಯಕರ ಪ್ರಚೋದನಕಾರಿ ಹೇಳಿಕೆಯಿಂದ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಬಿಸಿ ರೋಡ್ ನಲ್ಲಿ ಸೋಮವಾರ ಬೆಳಿಗ್ಗೆ ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಇಬ್ಬರು ಮುಸ್ಲಿಂ ಮುಖಂಡರು, ತಾಕತ್ತಿದ್ದರೆ ಮೆರವಣಿಗೆ ತಡೆಯಿರಿ ಎಂದು ಹಿಂದುತ್ವವಾದಿ ಸಂಘಟನೆಗಳ ಶರಣ್‌ ಪಂಪ್‌ವೆಲ್ ಮತ್ತು ಪುನೀತ್ ಅತ್ತಾವರ ಅವರಿಗೆ ಸವಾಲು ಹಾಕಿದ್ದರು. ಆ ಹೇಳಿಕೆ ವೈರಲ್ ಆದ ಬಳಿಕ ಹಿಂದೂ ಮುಖಂಡರು ಪ್ರತಿ ಸವಾಲು ಹಾಕಿ, ನೀವು ಹೇಳಿದ ಜಾಗಕ್ಕೆ ಬರುತ್ತೇವೆ. ಹಿಂದುತ್ವ ಗೆಲ್ಲುವುದೋ, ಜಿಹಾದಿಗಳು ಗೆಲ್ಲುತ್ತಾರೋ ನೋಡೋಣ ಎಂದು ಹೇಳಿಕೆ ನೀಡಿದ್ದರು. ಜೊತೆಗೆ ಸೋಮವಾರ ಬಿಸಿ ರೋಡ್ ಚಲೋಗೆ ಕರೆ ನೀಡಿದ್ದರು.

ಬಿಸಿ ರೋಡ್ ಮೊದಲೇ ಸೂಕ್ಷ್ಮ ಪ್ರದೇಶವಾಗಿದ್ದು, ಈದ್ ಮೆರವಣಿಗೆಗೆ ಮೊದಲು ಮುಸ್ಲಿಂ ಮುಖಂಡರ ಪ್ರಚೋದನಕಾರೀ ಹೇಳಿಕೆ ಹಿಂದೂ ಕಾರ್ಯಕರ್ತರನ್ನು ಕೆರಳಿಸಿದೆ. ಈಗಾಗಲೇ ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್, ನಾವೂ ಈದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದರೆ ಹೇಗಿರುತ್ತದೆ ಎಂದಿದ್ದರು. ಆ ಹಿನ್ನೆಲೆಯಲ್ಲಿ ಸೋಮವಾರದ ಈದ್ ಮೆರವಣಿಗೆಗೆ ಭಾರೀ ಪೊಲೀಸ್‌ ಬಂದೋಬಸ್ತ್ ನೀಡಲಾಗಿತ್ತು. ಆದರೂ ಶರಣ್ ಪಂಪ್‌ವೆಲ್‌ ನೇತೃತ್ವದಲ್ಲಿ ಹಲವಾರು ಮಂದಿ ಬಿಸಿ ರೋಡ್‌ನಲ್ಲಿ ಈದ್ ಮೆರವಣಿಗೆ ಸಾಗುವ ದಾರಿಯಲ್ಲಿ ಅಡ್ಡ ಕುಳಿತು ಪ್ರತಿಭಟನೆ ನಡೆಸಿದ್ದರು.

‘ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆ ತಡೆಯಿರಿ’ ಎಂದು ಸವಾಲು ಹಾಕಿದ್ದ ಇಬ್ಬರನ್ನು ಸೋಮವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ವಿಎಚ್‌ಪಿ ಹಾಗೂ ಬಜರಂಗದಳ ಮುಖಂಡರಾದ ಶರಣ್‌ ಪಂಪ್‌ವೆಲ್‌ ಮತ್ತು ಪುನೀತ್ ಅತ್ತಾವರ ಅವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಕಾಟಿಪಳ್ಳದಲ್ಲಿ 6 ಮಂದಿ ಬಂಧನ

ಮಂಗಳೂರಿನ ಸುರತ್ಕಲ್ ಬಳಿಯ ಕಾಟಿಪಳ್ಳ ಮಸೀದಿ ಮೇಲೆ ಭಾನುವಾರ ರಾತ್ರಿ ಕಲ್ಲು ತೂರಾಟ ಮಾಡಿದ್ದ ಪ್ರಕರಣದಲ್ಲಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಭರತ್, ಚೆನ್ನಪ್ಪ, ನಿತಿನ್, ಸುಜಿತ್, ಮನು, ಪ್ರೀತಮ್ ಎಂದು ಗುರುತಿಸಲಾಗಿದೆ. ಮಂಗಳೂರು ಹೊರವಲಯದ ಕಾಟಿಪಳ್ಳ 3ನೇ ಬ್ಲಾಕಿನ ಬದ್ರಿಯಾ ಮಸೀದಿ ಮೇಲೆ ಭಾನುವಾರ ಕಲ್ಲು ತೂರಾಟ ನಡೆದಿತ್ತು. ಬೈಕ್‌ನಲ್ಲಿ ಬಂದ ತಂಡ ಕಲ್ಲು ತೂರಾಟ ನಡೆಸಿತ್ತು.

ಇದನ್ನೂ ಓದಿ: Mangalore News: ಮಸೀದಿ ಮೇಲೆ ಕಲ್ಲು ತೂರಾಟ, ಸುರತ್ಕಲ್‌ನಲ್ಲಿ ಆತಂಕ