ಬೆಂಗಳೂರು: ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯನ್ನು (Congress Guarantee) ಹೇರಲು ಆಲೋಚನೆ ಮಾಡಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿ ಆಗಿವೆ. ಹೀಗಾಗಿ ಆರ್ಥಿಕ ತುರ್ತು ಪರಿಸ್ಥಿತಿ ಹೇರಲು ಮುಖ್ಯಮಂತ್ರಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚುನಾವಣೆ ಬಂದ ಕಾರಣ ಅದನ್ನು ಮಾಡಿಲ್ಲ, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡಲು ಕಷ್ಟವೆಂದು ಮತ್ತೆ ಮುಂದೂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಗ್ಯಾರಂಟಿ ವಿಚಾರದಲ್ಲಿ ದೇಶಕ್ಕೇ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲಿ 5 ಗ್ಯಾರಂಟಿ ಕೊಡುತ್ತಿರುವುದಾಗಿ ಹೇಳಿದೆ. ಆದರೆ, ಮಹಾರಾಷ್ಟ್ರದಲ್ಲಿ, ರಾಂಚಿಯಲ್ಲಿ ಜಾಹೀರಾತು ಕೊಡುತ್ತಿದ್ದು, 10 ಗ್ಯಾರಂಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇಲ್ಲಿ 5 ಕೊಡುವುದಾಗಿ ಹೇಳುತ್ತಿದ್ದು, ಜಾಹೀರಾತಿನಲ್ಲಿ 10 ಗ್ಯಾರಂಟಿಗಳು ಎಂದು ತೋರಿಸಿದ್ದಾರೆ ಎಂದು ಟೀಕಿಸಿದರು.
ಐದನ್ನೇ ಸರಿಯಾಗಿ ಕೊಡಲಾಗಿಲ್ಲ, ಇದರಿಂದ ಜನರು ತಿರುಗಿಬಿದ್ದಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ಇಂಗ್ಲಿಷ್ನಲ್ಲಿ (ವಾಟ್ ವಿ ಪ್ರಾಮಿಸ್ಡ್ ವಿ ಡೆಲಿವರ್ಡ್) ಹಾಕಿಕೊಂಡಿದ್ದಾರೆ. ನಾನು ಮಹಾರಾಷ್ಟ್ರ, ಜಾರ್ಖಂಡ್ಗೆ ಚುನಾವಣೆ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಎಲ್ಲಿ ನೋಡಿದರೂ ಕರ್ನಾಟಕದ ಬಗ್ಗೆ ಭಾಷಣ ಮಾಡುತ್ತಾರೆ. ಇಲ್ಲಿ ನೋಡಿದರೆ ಸರ್ವರ್ ಡೌನ್ ಅನ್ನುತ್ತಾರೆ. ಅಲ್ಲಿ ನೋಡಿದರೆ ಡೆಲಿವರ್ಡ್ ಅನ್ನುತ್ತಾರೆ ಎಂದು ಆಕ್ಷೇಪಿಸಿದರು. ಹಿಂದೆ ಕಾಂಗ್ರೆಸ್ಸಿಗರು ಕೇವಲ ರಾಜ್ಯಕ್ಕೆ ಸುಳ್ಳು ಹೇಳುತ್ತಿದ್ದರು. ಈಗ ದೇಶಕ್ಕೇ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಕಾಂಗ್ರೆಸ್ ಪಕ್ಷದವರಿಂದಲೇ ಖೆಡ್ಡಾ…
ಮಾನ್ಯ ಸಿದ್ದರಾಮಯ್ಯನವರೇ, ನಿಮ್ಮ ವಿರೋಧಿಗಳು ನಿಮ್ಮ ಸುತ್ತಲೇ ಇದ್ದಾರೆ. ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ಖೆಡ್ಡಾ ತೋಡಿದವರು ನಿಮ್ಮ ಪಕ್ಷದವರೇ ಇದ್ದಾರೆ. ನಿಮ್ಮನ್ನು ಕೆಳಗಿಳಿಸಲು ಕೋಟ್ಯಂತರ ರೂ. ಖರ್ಚು ಮಾಡುವವರು ನಿಮ್ಮ ಪಕ್ಕದಲ್ಲೇ ಇದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅದಾಗಿಯೇ ಬಿದ್ದ ಬಳಿಕ ನಾವು ಚುನಾವಣೆ ಎದುರಿಸಿ ಬಂದು ಸರಕಾರ ಮಾಡುತ್ತೇವೆಯೇ ವಿನಾ ಕಾಂಗ್ರೆಸ್ ಶಾಸಕರು, ನಿಮ್ಮನ್ನು ನಂಬಿ ಸರಕಾರ ಮಾಡುವುದಿಲ್ಲ ಎಂದು ತಿಳಿಸಿದರು.
ತಮ್ಮ ಸರಕಾರ ಬೀಳಿಸಲು ಪ್ರತಿ ಶಾಸಕರಿಗೆ 50 ಕೋಟಿಯ ಆಮಿಷ ಒಡ್ಡಿದ ಕುರಿತು ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಇದಕ್ಕೆ ಪುರಾವೆ ಕೊಡಿ; ಇಲ್ಲವೇ ರಾಜೀನಾಮೆ ಕೊಡಿ ಎಂದು ಅವರು ಆಗ್ರಹಿಸಿದರು. ಮುಖ್ಯಮಂತ್ರಿಗಳು ದಾರಿಹೋಕರಂತೆ ಮಾತನಾಡುವುದು ರಾಜ್ಯಕ್ಕೆ ಮಾಡುವ ಅವಮಾನ ಎಂದು ನುಡಿದರು.
ಯಾವ ಶಾಸಕರಿಗೆ ಆಮಿಷ ಒಡ್ಡಲಾಗಿತ್ತು? ಅವರಿಗೆ ಆಮಿಷ ಒಡ್ಡಿದವರು ಯಾರು ಎಂದು ಪ್ರಶ್ನಿಸಿದ ಅವರು, ನಿಮ್ಮ ಶಾಸಕರು ದನಕರುಗಳೇ? ಅವರನ್ನು ಖರೀದಿಗೆ ಮಾರುಕಟ್ಟೆಯಲ್ಲಿ ಇಟ್ಟಿದ್ದೀರಾ? ಅವರ ಖರೀದಿಗೆ ಬಂದವರು ಯಾರೆಂದು ಹೇಳಿ ಎಂದು ಆಗ್ರಹಿಸಿದರು.
ಒಂದು ಕೋಟಿಗೆ ಬರುತ್ತೇವೆ ಎಂದರೂ ನಿಮ್ಮ ಶಾಸಕರು ನಮಗೆ ಬೇಕಾಗಿಲ್ಲ; ನಾವು ಅಂಥ ಕಾರ್ಯಕ್ಕೆ ಕೈಹಾಕುವುದಿಲ್ಲ; ನಿಮ್ಮ ಪಾಪದ ಕೊಡ ತುಂಬಿದ ಕಾರಣ ನಿಮ್ಮ ಸರಕಾರ ಯಾವತ್ತು ಬೇಕಾದರೂ ಬೀಳಬಹುದು ಎಂದು ತಿಳಿಸಿದರು.
ವಕ್ಫ್ ವಿಷಯದಲ್ಲಿ ದೊಡ್ಡ ಹೋರಾಟ
ವಕ್ಫ್ ಆಸ್ತಿ ವಿಚಾರದಲ್ಲಿ ನೆನ್ನೆ ಚಿಂತಾಮಣಿಯಲ್ಲಿ ಲಾಠಿ ಚಾರ್ಜ್ ಆಗಿದೆ. ವಕ್ಫ್ ಕಾರ್ಯಾಚರಣೆ ನಿಲ್ಲಿಸಬೇಕೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರೈತರನ್ನು ತೆರವುಗೊಳಿಸದಿರಲು ಮುಖ್ಯಮಂತ್ರಿಗಳೇ ಹೇಳಿದ್ದರೂ ಅಲ್ಲಿ ಯಾಕೆ ಲಾಠಿ ಚಾರ್ಜ್ ಆಗಿದೆ ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ ಅವರು ಸಿಎಂ ಆದೇಶಗಳಿಗೆ, ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು, ಗೌರವ ಕೊಡುತ್ತಿಲ್ಲ ಎಂದು ಗಮನ ಸೆಳೆದರು.
ಈ ಸುದ್ದಿಯನ್ನೂ ಓದಿ | Transport Department: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಸಾರಿಗೆ ನಿಗಮಗಳಲ್ಲಿ ಶೀಘ್ರವೇ 9 ಸಾವಿರ ಹುದ್ದೆ ಭರ್ತಿ
ರಾಜ್ಯಾದ್ಯಂತ ದೊಡ್ಡ ಹೋರಾಟ ಪ್ರಾರಂಭವಾಗುತ್ತಿದೆ. ನಾವ್ಯಾರೂ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಒಂದು ಗುಂಟೆ ಜಮೀನನ್ನೂ ವಕ್ಫ್ ಎಂದು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಡೀ ರಾಜ್ಯ ರೋಷಾಗ್ನಿಯಿಂದ ನಿಮ್ಮ ಮೇಲೆರಗುವ ಸಂದರ್ಭ ಬಂದಿದೆ, ನೀವು ಆ ಜ್ವಾಲೆಯಲ್ಲಿ ಸಿಲುಕಿ ನಲುಗುವ ಪರಿಸ್ಥಿತಿ ಬಂದಿದೆ ಎಂದರು.