ಬೆಂಗಳೂರು: ನ್ಯಾಯಾಂಗ ನಿಂದನೆ (Contempt of court) ಆರೋಪದ ಮೇಲೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ (Governer Thawar Chand Gehlot) ಕಚೇರಿಗೆ ಔಪಚಾರಿಕ ದೂರು ಸಲ್ಲಿಸಲಾಗಿದೆ.
ಕಾರ್ಯಕರ್ತ ಅಬ್ರಹಾಂ ಟಿಜೆ ದೂರು ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಾಂಗ ನಿಂದನೆ ಕಾಯಿದೆ, 1971 ರ ಸೆಕ್ಷನ್ 15 ರ ಅಡಿಯಲ್ಲಿ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲು ಒಪ್ಪಿಗೆಯನ್ನು ಅವರು ಕೋರಿದ್ದಾರೆ. ಈ ಕುರಿತ ಕಾನೂನು ಅರ್ಜಿಯನ್ನು ತ್ವರಿತವಾಗಿ ಅಂಗೀಕರಿಸಲು ರಾಜ್ಯದ ಅಡ್ವೊಕೇಟ್-ಜನರಲ್ಗೆ ಸೂಚನೆ ನೀಡುವಂತೆ ರಾಜ್ಯಪಾಲರನ್ನು ಅರ್ಜಿಯಲ್ಲಿ ಕೋರಲಾಗಿದೆ.
ಸೆಪ್ಟೆಂಬರ್ 26, 2024ರಂದು ಮಾಧ್ಯಮಗಳ ಮುಂದೆ ಜಮೀರ್ ಅಹ್ಮದ್ ಖಾನ್ ಮಾಡಿದ ಕಾಮೆಂಟ್ಗಳಿಂದ ಈ ವಿವಾದ ಉದ್ಭವಿಸಿದೆ. ಸೆಪ್ಟೆಂಬರ್ 24, 2024 ರಂದು ರಿಟ್ ಅರ್ಜಿ ಸಂಖ್ಯೆ 22356/2024ಕ್ಕೆ ಸಂಬಂಧಿಸಿ ಬಂದ ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ನ್ಯಾಯಾಲಯದ ನಿರ್ಧಾರವನ್ನು “ರಾಜಕೀಯ ತೀರ್ಪು” ಎಂದು ಹೇಳಿದ್ದರು. ಈ ಹೇಳಿಕೆಯು ಅವಹೇಳನಕಾರಿ ಮಾತ್ರವಲ್ಲ, ನ್ಯಾಯಾಲಯದ ಅಧಿಕಾರ ಮತ್ತು ಘನತೆಗೆ ಧಕ್ಕೆ ತರಲು ಯತ್ನಿಸಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಅಡ್ವೊಕೇಟ್ ಜನರಲ್ ಕಚೇರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ದೂರುದಾರ ಅಬ್ರಹಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಜಿಯ ಪ್ರಕಾರ, ನ್ಯಾಯಾಲಯದ ತೀರ್ಪನ್ನು “ರಾಜಕೀಯ” ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿರುವುದು ಹೈಕೋರ್ಟ್ ಮತ್ತು ನ್ಯಾಯಾಧೀಶರಿಗೆ ಅವಮಾನಕರ. ಇಂತಹ ಹೇಳಿಕೆಗಳನ್ನು, ವಿಶೇಷವಾಗಿ ಹಾಲಿ ಸಚಿವರ ಹೇಳಿಕೆಗಳನ್ನು, ನಿಯಂತ್ರಿಸದೆ ಬಿಟ್ಟರೆ ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಅಡ್ವೊಕೇಟ್ ಜನರಲ್ ಅವರು ವಿಳಂಬವಿಲ್ಲದೆ ಸಚಿವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ದೂರಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಈ ದೂರಿನಲ್ಲಿ ಆಶ್ಚರ್ಯಪಡುವಂಥದ್ದೇನೂ ಇಲ್ಲ ಎಂದಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿಯ ಮಟ್ಟಕ್ಕೆ ಇಳಿಸಲಾಗಿದೆ. ಎಲ್ಲೆಲ್ಲಿ ಬಿಜೆಪಿ ದುರ್ಬಲವಾಗಿದೆಯೋ ಅಲ್ಲಿ ಬಿಜೆಪಿಯನ್ನು ಬಲಪಡಿಸಲು ರಾಜ್ಯಪಾಲರ ಕಚೇರಿಯನ್ನು ಬಳಸಲಾಗುರತ್ತಿದೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಟಿಜೆ ಅಬ್ರಾಹಂ ಅವರು ರಾಜ್ಯಪಾಲರ ಮೊರೆ ಹೋಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮುಡಾ ಕೇಸ್ನಲ್ಲಿ ತನಿಖೆಗೆ ಅನುತಿ ಕೋರಿ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಅರ್ಜಿಯಿಂದಲೇ ರಾಜಕೀಯ ಕೋಲಾಹಲ ಭುಗಿಲೆದ್ದಿತ್ತು.
ಇದನ್ನೂಓದಿ: Viral Video: ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡ ಯುವಕ; ವಿಡಿಯೊ ವೈರಲ್