Friday, 13th December 2024

ಗುತ್ತಿಗೆ ನೌಕರಿಯೂ ಬಿಕರಿ !

ಆರೋಗ್ಯ ಇಲಾಖೆಯಲ್ಲಿ 1ರಿಂದ 2 ಲಕ್ಷ ರು.ವರೆಗೂ ಹುದ್ದೆ ಹರಾಜು

ನಕಲಿ ದಾಖಲೆ ಇದ್ದರೂ ದುಡ್ಡು ಕೊಟ್ಟರೆ ಓಕೆ

ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲೂ ಹಗರಣ ನಡೆದಿರುವ ಶಂಕೆ

ದಂಧೆಗೆ ತಂಡಗಳೇ ಸೃಷ್ಟಿಯಾದರೂ ಇಲಾಖೆಗೆ ಜಾಣ ಕುರುಡು

ಬೆಂಗಳೂರು: ಜಿಲ್ಲಾಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಗುತ್ತಿಗೆ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಸುತ್ತಿರುವ ಜಾಲ ಬೆಳಕಿಗೆ ಬಂದಿದೆ.
ನಿರುದ್ಯೋಗ ಸಮಸ್ಯೆಯನ್ನು ಬಂಡವಾಳನ್ನಾಗಿಸಿಕೊಂಡು ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ 1 ರಿಂದ 2 ಲಕ್ಷ ರು.
ವರೆಗೂ ಹರಾಜು ಹಾಕುತ್ತಿರುವ ಆರೋಪಗಳು ಕೇಳಿ ಬಂದಿವೆ.

ವೈದ್ಯಕೀಯ ಕೋರ್ಸ್ ಮತ್ತು ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಪೂರೈಸಿರುವ ಅಭ್ಯರ್ಥಿಗಳು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಗುತ್ತಿಗೆ ಮೇಲೆ ನೇಮಕವಾಗಿರುವ ಅಭ್ಯರ್ಥಿಗಳ ಬಳಿ ಹಣದ ಬೇಡಿಕೆ ಇಟ್ಟಿರುವುದಾಗಿ
ತಿಳಿದು ಬಂದಿದೆ. ಹುದ್ದೆಗಳಿಗೆ ವೃತ್ತಿ ನಿಪುಣತೆ ಇಲ್ಲದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಉದ್ಯೋಗ ನೀಡುವ ಕೆಲಸ ನಡೆಯುತ್ತಿದೆ. ಜಿಲ್ಲಾಸ್ಪತ್ರೆ ಗಳಲ್ಲಿ ಇಂತಹ ದಂಧೆ ನಡೆಸುವ ತಂಡಗಳು ಸೃಷ್ಟಿಯಾಗಿರುವ ಕುರಿತು ದೂರುಗಳು ಕೇಳಿ ಬಂದಿವೆ.

ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ!: ಕೋಲಾರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಇಂತಹ ಪ್ರಕರಣಗಳು ನಡೆಯುತ್ತಿರುವ ಗುಮಾನಿ ಇದೆ. ಅನೇಕ ಬಾರಿ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದಲ್ಲದೆ, ಗುತ್ತಿಗೆ ಅವಧಿ ಮುಗಿದಿದ್ದರೂ ಅವರನ್ನೇ ಮುಂದುವರಿಸುವ ಮತ್ತೊಂದು ಮುಖ
ಅನಾವರಣಗೊಂಡಿದೆ.

ಇದರಿಂದ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಪರದಾಡುತ್ತಿದ್ದ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನೆಪದಲ್ಲಿ ಇಂತಹ ದಂಧೆ ನಡೆಯು ತ್ತಿದೆ. ಇದಲ್ಲದೆ ಆರೋಗ್ಯ ಇಲಾಖೆ ಕೇಂದ್ರ ಕಚೇರಿಯಲ್ಲೂ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಚಿವರು ಅಥವಾ ಉನ್ನತಾಧಿಕಾರಿಗಳು ಈ ಕುರಿತು ಕ್ಯಾರೆ ಎನ್ನುತ್ತಿಲ್ಲ. ಇತ್ತೀಚಿಗೆ ನಡೆದ ವೈದ್ಯರ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಶಂಕೆ ಇದೆ. ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೆ ಗುತ್ತಿಗೆ ನೇಮಕಾತಿ ಹುದ್ದೆಗಳಿಂದ ಹಣ ಪೀಕುತ್ತಿರುವ ಪ್ರಕರಣ ಜಾಲವೊಂದು
ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚು ಪ್ರಕರಣ: ಕೋಲಾರ ಜಿಲ್ಲಾ ಆಸ್ಪತ್ರೆ ಸೇರಿದಂತೆ ಇದರ ವ್ಯಾಪ್ತಿಗೆ ಬರುವ ಎಲ್ಲಾ ಆಸ್ಪತ್ರೆಗಳಲ್ಲೂ ನರ್ಸ್ ಹಾಗೂ ಸಮಾಜ ಕಾರ್ಯ ಕೋರ್ಸು ಮುಗಿಸಿರುವ ಅಭ್ಯರ್ಥಿಗಳ ನೇಮಕಾತಿ ನಡೆದಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಕಳೆದ ಐದು ವರ್ಷಗಳಿಂದ ನೇಮಕವಾದ ಅಭ್ಯರ್ಥಿಗಳ ಬಳಿ ಹಣ ಪಡೆದು ಹುದ್ದೆ ನೀಡಿದ್ದಾರೆಂದು ದೂರುಗಳು ಕೇಳಿ ಬಂದಿವೆ. ಅವಶ್ಯಕತೆ ಇಲ್ಲದಿದ್ದರೂ ಅನಗತ್ಯವಾಗಿ ಹುದ್ದೆೆಗಳನ್ನು ಸೃಜಿಸಿ ಇಂತಹ ದಂಧೆಯಲ್ಲಿ ತೊಡಗಿರುವುದು ತಿಳಿದು ಬಂದಿದೆ.

ಹೇಗೆ ನಡೆಯುತ್ತದೆ ನೇಮಕಾತಿ ದಂಧೆ? ಜಿಲ್ಲಾಸ್ಪತ್ರೆಗಳಲ್ಲಿ ಖಾಲಿ ಇರುವ ಗುತ್ತಿಗೆ ಆಧಾರಿತ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನಂತರ ಸಂದರ್ಶನಕ್ಕೆ ಅಭ್ಯರ್ಥಿಗಳಿಗೆ ಕರೆ ಮಾಡುತ್ತಾರೆ ಸ್ಥಳೀಯ ನಿವಾಸಿ ವೈದ್ಯರು. ಕಾಟಾಚಾರಕ್ಕೆ ಸಂದರ್ಶನ ನಡೆಸಿ, ಮೂರು ದಿನಗಳ ಬಳಿಕ ಆಯ್ಕೆಯಾದವರಿಗೆ ಮಾಹಿತಿ ತಿಳಿಸುತ್ತೇವೆ ಎಂದು ಹೇಳುತ್ತಾರೆ. ದಂಧೆ ನಡೆಸುವ ತಂಡವೊಂದು ಅಭ್ಯರ್ಥಿಗಳಿಗೆ ಕರೆ ಮಾಡಿ ನಿಮಗೆ ಖಚಿತವಾಗಿ ಹುದ್ದೆ ಕೊಡಿಸಲಾಗುತ್ತದೆ, ಹಣ ನೀಡಬೇಕಾಗುತ್ತದೆ ಎಂದು ಎಲ್ಲಾ ಅಭ್ಯರ್ಥಿಗಳಿಗೂ ಹೇಳುತ್ತಾರೆ. ಬಳಿಕ ಯಾವ ಅಭ್ಯರ್ಥಿ ಹೆಚ್ಚು ಹಣ ನೀಡುತ್ತಾರೋ ಅವರಿಗೆ ಆ ಹುದ್ದೆ ನೀಡಲಾಗುತ್ತದೆ. ಇಂತಹ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ.

ಕೋಟ್‌

ಇತ್ತೀಚಿಗೆ ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿ ನೇಮಕಾತಿ ಆದೇಶ ಹೊರಡಿಸಿದ್ದರು. ಅರ್ಜಿ ಹಾಕಿ, ಸಂದರ್ಶನಕ್ಕೆ ಹಾಜರಾಗಿ ಎರಡು ದಿನದ ಬಳಿಕ ಅಧಿಕಾರಿಯೊಬ್ಬರು ಕರೆ ಮಾಡಿ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಹುದ್ದೆ ಕೊಡುವುದಾಗಿ ಹೇಳಿದರು.
ಇದನ್ನು ನಾನು ನಿರಾಕರಿಸಿದೆ.

– ಎಂಎಸ್‌ಡಬ್ಲ್ಯೂ ಪದವೀಧರ