Friday, 25th October 2024

ಮೈಸೂರು ನ್ಯಾಯಾಲಯದಲ್ಲಿ ಕರೋನಾ ರಣಕೇಕೆ

ವರ್ಷದ ಅಂತರದಲ್ಲಿ 23 ವಕೀಲರು ವಿಧಿವಶ

ಕಳೆದ ಮೂರು ದಿನಗಳಿಂದೀಚೆಗೆ ಮೂವರು ಸಾವು

ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು

ಮೈಸೂರು:ಕರೋನಾ ಎಂಬ ಮಹಾಮಾರಿಯ ಆರ್ಭಟ ಉದ್ಯಮ ಹಾಗೂ ಉದ್ಯೋಗಗಳ ಬದುಕು ಕಸಿದುಕೊಂಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮೈಸೂರಿನ ನ್ಯಾಯದೇವತೆಯ ತಾಣದಲ್ಲೂ ರಣಕೇಕೆ ಹಾಕಿದೆ.

ಪರಿಣಾಮ ಮೈಸೂರಿನ ನ್ಯಾಯಾಲಯದಲ್ಲಿ 2020ರ ಏಪ್ರಿಲ್‌ನಿಂದ 2021ರ ಈ ದಿನದವರೆಗೆ ಅಂದರೆ ಒಂದು ವರ್ಷದ ಅಂತರದಲ್ಲಿ 23 ಮಂದಿ ವಕೀಲರು ಕರೋನಾ ಸೋಂಕಿಗೆ ಪ್ರಾಣ ತೆತ್ತಿದ್ದಾರೆ. 2020ರ ಮಾರ್ಚ್ 9ರಂದು ಕರೋನಾ ಸೋಂಕು ಕಾಣಿಸಿಕೊಂಡಿದ್ದು, ತದನಂತರದ ದಿನಗಳಲ್ಲಿ ವೇಗವಾಗಿ ಸೋಂಕು ಹರಡುವುದನ್ನು ಕಂಡು ದೇಶವ್ಯಾಪಿ ಲಾಕ್‌ಡೌನ್
ಘೋಷಣೆ ಮಾಡಲಾಗಿತ್ತು.

ಅಂತೆಯೇ 2020ರ ಮೇ ತಿಂಗಳಿಂದ ರಾಜ್ಯ ಸರ್ಕಾರ ಬಹುತೇಕ ಇಲಾಖೆಗಳಿಗೆ ರಜೆ ಘೋಷಿಸಿತಲ್ಲದೆ, ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚನೆ ನೀಡಿತ್ತು. ಈ ಎಲ್ಲದರ ಪರಿಣಾಮ ನ್ಯಾಯಾಲಯಗಳೂ ಕೂಡ ಬಾಗಿಲು ಮುಚ್ಚುವಂತಾಯಿತು. ಕೆಲ ತಿಂಗಳ ಬಳಿಕ ನ್ಯಾಯಾಲಯಗಳು ಬಾಗಿಲು ತೆರೆದವಾದರೂ ಅನಿರೀಕ್ಷಿತ ಹಾಗೂ ತೀರಾ ಪ್ರಮುಖ ಪ್ರಕರಣಗ ಳನ್ನು ಹೊರತುಪಡಿಸಿ ಇನ್ನುಳಿದ ಪ್ರಕರಣಗಳ ಕಕ್ಷಿದಾರರಿಗೆ ನ್ಯಾಯಾಲಯದ ಒಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ವಕೀಲರು ಇರುವ ಮೈಸೂರಿನ ನ್ಯಾಯಾಲಯದಲ್ಲಿ ವಕೀಲರು ನಿಯಮಿತವಾಗಿ ಕೆಲಸಕ್ಕೆ ಹಾಜರಾದರೂ ಕೂಡ ಬಹಳಷ್ಟು ಮಂದಿ ಸೋಂಕಿಗೆ ಒಳಗಾಗಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಅಷ್ಟರವರೆಗೆ ವಿಧಿಸಿದ್ದ ನಿರ್ಬಂಧಗಳನ್ನು ಮತ್ತಷ್ಟು ಕಠಿಣವಾಗಿ ಜಾರಿ ಮಾಡಿದರು. ಆದರೂ, ಸೋಂಕಿನ ಪ್ರಭಾವ ಕಡಿಮೆ ಆಗಿರಲಿಲ್ಲ. ನಂತರದ ದಿನಗಳಲ್ಲಿ ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆದವಾದರೂ, ತಮ್ಮದೇ ನಿಯಮಾವಳಿ ರೂಪಿಸಿಕೊಂಡು ಕಕ್ಷಿದಾರರನ್ನು ಒಳಬಿಡಲಾಗುತ್ತಿತ್ತು. ಆದರೂ, ವಕೀಲರಿಗೆ ಸೋಂಕು ತಗುಲಿರು ವುದು ಪದೇ ಪದೇ ಕಂಡುಬಂದ ಹಿನ್ನೆಲೆಯಲ್ಲಿ ತಿಂಗಳ ಬಹುತೇಕ ದಿನಗಳಲ್ಲಿ ಇಡೀ ನ್ಯಾಯಾಲಯವನ್ನೇ ಸ್ಯಾನಿಟೈಸ್ ಮಾಡಲಾಗುತ್ತಿತ್ತು.

3 ದಿನದಲ್ಲಿ 3 ವಕೀಲರು ಸಾವು: ವರ್ಷ ದಿಂದೀಚೆಗೆ ಕರೋನಾ ಸೋಂಕಿನಿಂದ ಸಾವಿಗೀಡಾದ ವಕೀಲರ ಸಂಖ್ಯೆ ಈವರೆಗೆ 23ಕ್ಕೆೆಏರಿದ್ದು, ಕಳೆದ ಮೂರು ದಿನಗಳಿಂದೀಚೆಗೆ ಮೂವರು ವಕೀಲರು ಸೋಂಕಿಗೆ ಒಳಗಾಗಿ ಪ್ರಾಣ ತೆತ್ತಿದ್ದಾರೆ. ಮಂಡ್ಯ
ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದ ಮಾಸ್ತಿಗೌಡ, ನಗರದ ಗಾಂಧಿನಗರ ಬಡಾವಣೆ ನಿವಾಸಿ ಹನುಮಂತಪ್ಪ ಹಾಗೂ ತಿ.ನರಸೀಪುರ ತಾಲ್ಲೂಕು ಬನ್ನೂರು ಮೂಲದವರಾಗಿದ್ದು,
ಮೈಸೂರಿ ನಲ್ಲಿ ನೆಲೆಸಿದ್ದ ಬಸವೇಗೌಡ ಅವರುಗಳು ಕಳೆದ ಮೂರು ದಿನಗಳಿಂದೀಚೆಗೆ ಕರೋನಾ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ಆತಂಕದ ಕಾರ್ಮೋಡ: ಒಂದು ವರ್ಷದಿಂದೀಚೆಗೆ ಮೈಸೂರಿನ ನ್ಯಾಯಾಲಯದ 23 ಮಂದಿ ವಕೀಲರು ಕರೋನಾ ಸೋಂಕಿಗೆ ಒಳಗಾಗಿ ಪ್ರಾಣ ತೆತ್ತಿರುವುದು ಇಡೀ ವಕೀಲರ ಸಮುದಾಯದಲ್ಲಿ ಆತಂಕ ಹುಟ್ಟಿಸಿದೆ. ನ್ಯಾಯಾಲಯಕ್ಕೆ ಹೋಗ ಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ತದನಂತರ ಸೋಂಕು ಎಲ್ಲಿ ಅಂಟಿಕೊಳ್ಳುವುದೋ ಎಂಬ ಆತಂಕ, ಭಯ ಇಡೀ ವಕೀಲರ ಸಮೂಹವನ್ನು ಆವರಿಸಿದೆ. ಆದರೆ, ತನ್ನನ್ನು ನಂಬಿರುವ ಕಕ್ಷಿದಾರರಿ ಗೋಸ್ಕರ ನ್ಯಾಯಾಲಯ ಪ್ರವೇಶಿಸುವುದು ವಕೀಲರಿಗೆ ಅನಿವಾರ್ಯವಾಗಿದೆ.

ನ್ಯಾಯಾಲಯ ಸಂಪೂರ್ಣ ಸ್ಯಾನಿಟೈಸ್: ಕಳೆದ ಮೂರು ದಿನಗಳಿಂದ ಮೂವರು ವಕೀಲರು ಕರೋನಾ ಸೋಂಕಿಗೆ ಒಳಗಾಗಿ ಸಾವಿಗೀಡಾದ ಹಿನ್ನೆಲೆಯಲ್ಲಿ ಇಡೀ ನ್ಯಾಯಾಲಯವನ್ನು ಸಂಪೂರ್ಣ ವಾಗಿ ಸ್ಯಾಾನಿಟೈಸ್ ಮಾಡಲಾಗಿದೆ. ಮಾತ್ರವಲ್ಲ,
ಅಗತ್ಯ ಮುಂಜಾಗ್ರತಾ ಕ್ರಮ ವಹಿಸದ ಹೊರತು ನ್ಯಾಯಾಲಯಕ್ಕೆ ಬಾರದಿರುವಂತೆ ವಕೀಲರೇ ವಕೀಲರಲ್ಲಿ ಮನವಿ ಮಾಡತೊಡಗಿದ್ದಾರೆ.

ಆದ್ಯತೆ ಮೇರೆಗೆ ಅವಕಾಶ: ನ್ಯಾಯಾಲಯದಲ್ಲಿ ಕರೋನಾ ಸೋಂಕಿನ ಆತಂಕ ಮನೆಮಾಡಿರುವ ಹಿನ್ನೆಲೆಯಲ್ಲಿ ತೀರಾ ಪ್ರಮುಖವಲ್ಲದ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳಬಾರದು, ಆದ್ಯತೆಯಾನುಸಾರ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊ
ಳ್ಳಬೇಕು. ನ್ಯಾಯಾಧೀಶರು ಈ ಬಗ್ಗೆ ಕೂಡಲೇ ಮತ್ತಷ್ಟು ಬಿಗಿಕ್ರಮ ತೆಗೆದುಕೊಳ್ಳುವುದು ಅನಿವಾರ್ಯ ಎಂಬ ಮಾತುಗಳು ವಕೀಲರಲ್ಲೇ ಕೇಳಿಬರತೊಡಗಿದೆ.

ಐವರು ಗಂಭೀರ: ಕಳೆದ ಮೂರು ದಿನಗಳಿಂದ ಮೂವರು ಸಾವಿಗೀಡಾಗಿರುವುದು ಒಂದೆಡೆಯಾದರೆ, ಇನ್ನೂ ಐವರು ವಕೀಲರು
ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಪೈಕಿ ಇಬ್ಬರ ಪರಿಸ್ಥಿತಿ ತೀರಾ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ಹೆಸರು ಹೇಳಲಿಚ್ಛಿಸದ ವಕೀಲರೊಬ್ಬರು ತಿಳಿಸಿದ್ದಾರೆ.

***

ನ್ಯಾಯಾಲಯದ ಆವರಣದಲ್ಲಿ ಸೋಂಕು ಈ ಪರಿ ಹರಡುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ ಯಾಗಿದೆ. ನಮ್ಮ
ವಕೀಲರು ಈ ವಿಚಾರದಲ್ಲಿ ಅಗತ್ಯ ಮುಂಜಾಗ್ರತೆ ವಹಿಸಬೇಕಿದೆ. ಮಾಸ್ಕ್‌, ಸ್ಯಾನಿಟೈಸರ್ ಕ್ರಮವಾಗಿ ಬಳಸುವ ಮೂಲಕ ತಮ್ಮ ಆರೋಗ್ಯದ ಕಡೆ ಗಮನ ಕೊಡಬೇಕಿದೆ.
ಮಂಜುನಾಥ್ ವಕೀಲರು, ಮೈಸೂರು

ಮೈಸೂರಿನ ನ್ಯಾಯಾಲಯದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಾಗ್ಯೂ ಕೂಡ ವಕೀಲರು ಸೋಂಕಿಗೆ ಒಳಗಾಗಿ
ಸಾವಿಗೀಡಾಗುತ್ತಿರುವುದು ನಮಗೂ ಬೇಸರ ತರಿಸಿದೆ. ಈ ಘಟನೆಗಳು ಮತ್ತೆ ಮರುಕಳಿಸದಂತೆ ಮುನ್ನೆಚ್ಚರಿಕೆಯಾಗಿ ವಕೀಲರು ತಮ್ಮ ಆರೋಗ್ಯದ ಬಗ್ಗೆೆ ಗಮನ ಹರಿಸಬೇಕಿದೆ.

ಆನಂದಕುಮಾರ್, ಅಧ್ಯಕ್ಷ,
ಮೈಸೂರು ವಕೀಲರ ಸಂಘ

ವಕೀಲರಿಗೆ ಯಾವುದೇ ರೀತಿಯ ಸಂಬಳವಾಗಲಿ, ಪಿಂಚಿಣಿಯಾಗಲಿ ಇರುವುದಿಲ್ಲ. ಆದ್ದರಿಂದ ವಕೀಲಿ ವೃತ್ತಿ ನಮಗೆ ಅನಿವಾರ್ಯವಾಗಿದೆ. ಆದಕಾರಣ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ ಕೋವಿಡ್ ಸೆಂಟರ್ ತೆರೆಯಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಮುಂಜಾಕ್ರತಾ ಕ್ರಮ ತೆಗೆದುಕೊಳ್ಳಬೇಕು.
ಬಿ.ಆರ್.ದಿನೇಶ್, ವಕೀಲರು, ಮೈಸೂರು