ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ (Council bypolls) ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು (Kishor Kumar Puttur)ಅವರು 1,697 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಕೊಡಿಯಾಲ್ ಬೈಲಿನ ಸೇಂಟ್ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ ಎಣಿಕೆ ನಡೆದು ಫಲಿತಾಂಶ ಹೊರಬಿದ್ದಿದೆ.
ಕಿಶೋರ್ ಕುಮಾರ್ ಅವರು 3,655 ಮತ ಪಡೆದರೆ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ 1,958 ಮತ ಗಳಿಸಿದ್ದಾರೆ. ಎಸ್‌ಡಿಪಿಐನ ಅನ್ವರ್ ಸಾದತ್ 195 ಮತ, ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಪಡೆದಿದ್ದಾರೆ. ಒಟ್ಟು 87 ಮತಗಳು ತಿರಸ್ಕೃತಗೊಂಡಿದ್ದು, ಚಲಾವಣೆಯಾದ ಒಟ್ಟು 5,907 ಮತಗಳ ಪೈಕಿ 5,819 ಸಿಂಧು ಮತಗಳಿವೆ.
ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದರಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಅ.21 ರಂದು ಉಪ ಚುನಾವಣೆ ನಡೆದಿತ್ತು.
2021ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ 3,672 ಮತ, ಪಡೆದು ಗೆಲುವು ಕಂಡಿದ್ದರು. ಸಮೀಪದ ಸ್ಪರ್ಧಿ ಮಂಜುನಾಥ ಭಂಡಾರಿ 2,079 ಮತ, ಎಸ್‌ಡಿಪಿಐ ಅಭ್ಯರ್ಥಿ 204 ಮತ ಪಡೆದಿದ್ದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ
ಚನ್ನಪಟ್ಟಣ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಗುರುವಾರ ನಾಮಪತ್ರ ಸಲ್ಲಿಕೆ (Channapatna by election) ಮಾಡಿದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದ ಅವರು, ತಹಸೀಲ್ದಾರ್ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜನರು ಸಿ.ಪಿ.ಯೋಗೇಶ್ವರ್‌ರನ್ನು ಆಶೀರ್ವದಿಸಿ ಬೆಂಬಲಿಸುವ ನಂಬಿಕೆಯಿದೆ. ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ. ಚನ್ನಪಟ್ಟಣದ ಉಪಚುನಾವಣೆಯಲ್ಲಿ ಜೆಡಿಎಸ್‌ನವರು ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ. ಸಿ.ಪಿ. ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದು, ಎರಡು ಬಾರಿ ಶಾಸಕರಾಗಿದ್ದರು. ಬಿಜೆಪಿ ಹಾಗೂ ಎನ್‌ಡಿಎನಿಂದ ಅವರಿಗೆ ಅನ್ಯಾಯವಾದ ಕಾರಣ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Channapatna By Election: ಚನ್ನಪಟ್ಟಣದಲ್ಲಿ ‘ಕೈ’ಗೊಂಬೆಯಾಟ; ಬಿಜೆಪಿ-ದಳಕ್ಕೆ ಪೀಕಲಾಟ!
ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನೊಪ್ಪಿ ಮರಳಿ ಬಂದಿರುವ ಯೋಗೇಶ್ವರ್‌ರನ್ನು ಇಡೀ ಕಾಂಗ್ರೆಸ್ ಪಕ್ಷ ಸ್ವಾಗತಿಸಿದೆ. ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ. ಜೆಡಿಎಸ್ ಬಿಜೆಪಿಯವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾರನ್ನೇ ನಿಲ್ಲಿಸಿದರೂ ಕಾಂಗ್ರೆಸ್‌ನ ಅಭ್ಯರ್ಥಿಯೇ ಗೆಲುವು ಸಾಧಿಸುವ ವಿಶ್ವಾಸವಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳು ನುಡಿದಂತೆ ನಡೆಯುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದರು.