ಮಡಿಕೇರಿ: ರಿಯಲ್ ಎಸ್ಟೇಟ್ ಮಾಫಿಯಾದಿಂದ (Real Estate Mafia) ಕಿರುಕುಳಕ್ಕೆ ಈಡಾಗಿ ಮನನೊಂದು ಉದ್ಯಮಿಯೊಬ್ಬರು ಪತ್ನಿಯೊಂದಿಗೆ ಆತ್ಮಹತ್ಯೆ (Couple Self harming) ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣ (Coorg crime news) ತಾಲೂಕಿನ ಬೈಲಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರ್ ಕಾವಲ್ ನಲ್ಲಿ ಬುಧವಾರ ಸಂಜೆ ನಡೆದಿದೆ. ಪ್ರಕರಣ ಸಂಬಂಧ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೊಡಗಿನ ಕುಶಾಲನಗರದಲ್ಲಿ (Kushalnagar) ಉದ್ಯಮ ನಡೆಸುತ್ತಿದ್ದ ಮೂಲತಃ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾದವರು. ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ ತನ್ನ ಪತ್ನಿಯನ್ನು ದೇವಸ್ಥಾನಕ್ಕೆಂದು ಹೇಳಿ ದೊಡ್ಡಹೊನ್ನೂರು ಕಾವಲ್‌ನ ಜಮೀನಿನ ಹಳೆಯ ಖಾಲಿ ಮನೆಗೆ ಕರೆತಂದಿದ್ದು ಅಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ.
ರಿಯಲ್ ಎಸ್ಟೇಟ್ ಮಾಫಿಯಾ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಮೃತ ಸುರೇಶ್ ಆತ್ಮಹತ್ಯೆಗೆ ಕಾರಣರಾದವರ ಹೆಸರನ್ನ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ. ಈ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ಧ ಕರಣ ದಾಖಲಾಗಿದೆ. ಮೃತ ದಂಪತಿ ಮರಣೋತ್ತರ ಪರೀಕ್ಷೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಈ ನಡುವೆ ಗುರುವಾರ ಮಧ್ಯಾಹ್ನ ಮೃತದೇಹಗಳನ್ನು ಮುಂದಿಟ್ಟು ಮೃತನ ಸಂಬಂಧಿಕರು, ಸ್ನೇಹಿತರು ಹಾಗೂ ಕುಶಾಲನಗರ, ಕೊಪ್ಪ ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಶವಾಗಾರದ ಮುಂಭಾಗ ದಂಪತಿಗಳ ಸಾವಿಗೆ ಕಾರಣರಾದ ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಆಗ್ರಹಿಸಿದರು. ಆರೋಪಿಗಳು ಪ್ರಭಾವಶಾಲಿಗಳಾಗಿದ್ದು ಹಲವರಿಗೆ ವಂಚನೆ ಎಸಗಿದ್ದಾರೆ. ಇದರಿಂದ ಅಮಾಯಕ ದಂಪತಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಪೊಲೀಸರನ್ನು ಒತ್ತಾಯಿಸಿದರು.
ಇದನ್ನೂ ಓದಿ: ಬಾವಿಯಲ್ಲಿ ಸಿಲುಕಿದ್ದ ಬಾಲಕಿ ರಕ್ಷಣೆ: ಚಿಕಿತ್ಸೆ ಫಲಿಸದೆ ಸಾವು