Saturday, 14th December 2024

Covid Scam: ಕೋವಿಡ್‌ ನಿರ್ವಹಣೆಯಲ್ಲಿ ಕೋಟ್ಯಂತರ ರೂ. ಅಕ್ರಮ, ಅಧಿಕಾರಿ ದೂರು

Omicron

ಬೆಂಗಳೂರು: ಕೋವಿಡ್‌ ನಿರ್ವಹಣೆ ಸಂದರ್ಭದಲ್ಲಿ 167 ಕೋಟಿ ರೂ. ಪ್ರಮಾಣದ ಅಕ್ರಮ (Covid Scam) ಎಸಗಲಾಗಿದೆ ಎಂದು ಆರೋಪಿಸಿ ಹಲವು ಅಧಿಕಾರಿಗಳ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಅವರು ದೂರು ನೀಡಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಐಆರ್ ದಾಖಲಾಗಿದೆ. ವಿಷ್ಣುಪ್ರಸಾದ್‌ ಅವರ ದೂರು ಆಧರಿಸಿ ಬೆಂಗಳೂರಿನ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಐವರು ವೈದ್ಯರು, ಲ್ಯಾಗ್​ ಎಕ್ಸ್​ಪರ್ಟ್​​ ಕಂಪನಿ‌ ಹಾಗೂ ಜನಪ್ರತಿನಿಧಿಗಳ‌ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ SIT ರಚನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ.

ಪಿಪಿಇ ಕಿಟ್, N-95 ಮಾಸ್ಕ್​ ಖರೀದಿಯಲ್ಲಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ನಿಯಮ ಬಾಹಿರವಾಗಿ ಹೆಚ್ಚುವರಿ ಕಿಟ್ ಖರೀದಿಗೆ ಆದೇಶ, ಕೋಟ್ಯಂತರ ಹಣ ಸಂದಾಯದ ಬಳಿಕವೂ ಕಿಟ್​ ನೀಡಿಲ್ಲ. ಹಾಗೇ ಷಡ್ಯಂತ್ರ ರೂಪಿಸಿ ಜನರ ಹಣ ದುರ್ಬಳಕೆ ಆರೋಪದಡಿ FIR ದಾಖಲಾಗಿದೆ.

ಒಟ್ಟು 167 ಕೋಟಿಗೂ ಅಧಿಕ ಹಣ ಅಕ್ರಮ ಆರೋಪ ಕೇಳಿಬಂದಿದ್ದು, ಡಾ.ಗಿರೀಶ್, ಜಿ.ಪಿ.ರಘು, ​.ಮುನಿರಾಜ್, ಲಾಜ್ ಎಕ್ಸ್​ಪೋರ್ಟ್, ಪ್ರೂಡೆಂಟ್‌ ಮ್ಯಾನೆಜ್‌ಮೆಂಟ್‌ ಸಲೂಷನ್ಸ್ ಕಂಪನಿ ಸೇರಿದಂತೆ ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಅಂದಿನ ಸಚಿವರು, ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಎದೆಯಲ್ಲಿ ಢವಢವ ಶುರುವಾಗಿದೆ.