Friday, 22nd November 2024

Covid Scams : ಬಿಜೆಪಿ ಮುಖಂಡರಿಗೆ ಕಾದಿದೆ ಸಂಕಷ್ಟ; ಕೋವಿಡ್ ಕಾಲದ ಅಕ್ರಮಗಳ ತನಿಖೆಗೆ ಡಿಕೆಶಿ ನೇತೃತ್ವದ ಸಂಪುಟ ಉಪಸಮಿತಿ ಪ್ರಕಟ

Dk Shivakumar

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ (Covid Scams) ನಿವಾರಣೆ ಹಾಗೂ ತಡೆಗಟ್ಟುವಿಕೆ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕೊರೊನಾ ಕಾಲದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಕ್ರಮಗಳು ನಡೆದಿದೆ ಎನ್ನಲಾಗಿದೆ. ಗುರವಾರ ವಿಧಾನಸೌಧದಲ್ಲಿ ನಡೆದ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಹಗರಣಗಳ ತನಿಖೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ನಾ ಅವರ ನೇತೃತ್ವದ ಆಯೋಗವು ತನ್ನ ಮೊದಲ ವರದಿ ನೀಡಿದೆ. ವರದಿಯಲ್ಲಿ ಬೃಹತ್ ಪ್ರಮಾಣದ ಹಗರಣ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ. ಅದರ ಕುರಿತು ಕ್ರಮ ಕೈಗೊಳ್ಳಬಹುದೆಂದು ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಉಪ ಮುಖ್ಯಮಂತ್ರಿ ನೇತೃತ್ವದ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ, ಕಾನೂನು ಸಚಿವ ಎಚ್‌.ಕೆ ಪಾಟೀಲ್‌, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಸಮಿತಿಯಲ್ಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವರು ಹೇಳಿದ್ದೇನು?

ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌​ಕೆ ಪಾಟೀಲ್​, ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಕುನ್ಹಾ ಆಯೋಗ ಭಾಗಶಃ ವರದಿ ನೀಡಿದೆ. ಅದರ ಮೇಲೆ ಕೆಲವು ನಿರ್ಣಯ ತೆಗೆದುಕೊಂಡಿದ್ದೇವೆ. ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಿದ್ದೇವೆ ಹಾಗೂ ಕ್ಯಾಬಿನೆಟ್ ಸಬ್ ಕಮಿಟಿ ಕೂಡ ರಚನೆ ಮಾಡಲು ತೀರ್ಮಾ‌ನ ಮಾಡಿದ್ದೇವೆ. ರಿಕವರಿ ಪ್ರೊಸೀಡಿಂಗ್ಸ್​ ತಕ್ಷಣ ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.

11 ಸಂಪುಟಗಳಲ್ಲಿ ವರದಿ ನೀಡಿದೆ. 7,22,364 ಕೋಟಿ ರೂ. ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. 500 ಕೋಟಿ ರೂ. ಮೊತ್ತದ ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯಗಳ ಹಾಗೂ 31 ಜಿಲ್ಲೆಗಳ ವರದಿ ಸಂಗ್ರಹ ಬಾಕಿ ಇದೆ. 55 ಸಾವಿರ ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವರದಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Tumkur Dasara: ಇಂದಿನಿಂದ 2 ದಿನಗಳ ಕಾಲ ದಸರಾ ಸಾಂಸ್ಕೃತಿಕ ಮೆರುಗು; ಏನೇನು ಕಾರ್ಯಕ್ರಮ?

ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್​ಗೆ ಸೇರಿಸಲು ನಿರ್ಧಾರ ಮಾಡಲಾಗಿದೆ. ಎಲ್ಲೆಲ್ಲಿ ಕ್ರಿಮಿನಲ್ ಎಲಿಮೆಂಟ್ ಇದೆ ಎಸ್ಐಟಿ ಅದರ ಬಗ್ಗೆ ಗಮನ ಹರಿಸುತ್ತದೆ. ಯಾರ ಪಾತ್ರ ಏನು ಎಂಬುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಪೂರ್ಣ ವರದಿ ಬಂದ ಮೇಲೆ ಏನು ಅವ್ಯವಹಾರ, ಯಾರು ಪಾಲುದಾರರು ಗೊತ್ತಾಗುತ್ತದೆ ಎಂದಿದ್ದಾರೆ.

ಈ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕೋವಿಡ್ ಹಗರಣದ ಕುರಿತು ಸಬ್​ ಕಮಿಟ್ ಮಾಡಬೇಕು ಅಂತ ಚರ್ಚೆಯಾಗಿದೆ. 7200 ಕೋಟಿ ರೂ. ಹಗರಣ ನಡೆದಿದೆ. ಅದರಲ್ಲಿ ಯಾರದ್ದು ಎಷ್ಟು ಪಾಲಿದೆ ಎಂದು ಚೆಲುವಾದಿ ನಾರಾಯಣಸ್ವಾಮಿ, ಅಶೋಕ್ ಹಾಗೂ ವಿಜಯೇಂದ್ರ ಹೇಳಲಿ ಎಂದು ಕಿಡಿಕಾರಿದ್ದಾರೆ.