Thursday, 21st November 2024

CP Yogeshwara: ಯೋಗೇಶ್ವರ್ ವಿರುದ್ಧ ಮಗಳು ನಿಶಾ ಮಾತಾಡುವಂತಿಲ್ಲ; ಕೋರ್ಟ್​​ನಿಂದ ತಡೆಯಾಜ್ಞೆ ತಂದ ಮಲತಾಯಿ!

nisha yogeshwara

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwara) ವಿರುದ್ಧ ಪುತ್ರಿ ನಿಶಾ ಸಾಮಾಜಿಕ ಜಾಲತಾಣಗಳಲ್ಲಿ (Social media) ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್‌ (Karnataka high court) ನಿರ್ಬಂಧಿಸಿ ಆದೇಶಿಸಿದೆ. ನಿಶಾ ಮಾತನಾಡದಂತೆ ಮಲತಾಯಿ (ಯೋಗೇಶ್ವರ್ ಅವರ 2ನೇ ಹೆಂಡತಿ) ಕೋರ್ಟ್‌ನಿಂದ ಈ ತಡೆಯಾಜ್ಞೆಯನ್ನು ತಂದಿದ್ದಾರೆ.

ಸಿ.ಪಿ. ಯೋಗೇಶ್ವರ್ ಅವರ ವಿರುದ್ಧ ಅವರ ಹಿರಿಯ ಮಗಳು ನಿಶಾ ಯೋಗೇಶ್ವರ್ ಸಿಡಿದೆದ್ದಿದ್ದರು. ಚುನಾವಣೆ ನಡುವೆ ಅವರಿಗೆ ಪುತ್ರಿಯ ಭಯ ಶುರುವಾಗಿತ್ತು. ಯೋಗೇಶ್ವರ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ನಿಶಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಉಪ ಚುನಾವಣೆ ಸಂದರ್ಭದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿತ್ತು.

ಚುನಾವಣೆ ಸಂದರ್ಭದಲ್ಲಿ ನಿಶಾ ಯೋಗೇಶ್ವರ್ ಅವರ ಆರೋಪಗಳ ದುಷ್ಪರಿಣಾಮ ಯೋಗೇಶ್ವರ್ ಇಮೇಜ್‌ ಮೇಲೆ ಆಗಬಹುದು ಎಂಬ ಆತಂಕದಿಂದ ಅವರ 2ನೇ ಹೆಂಡತಿ ಪಿ.ವಿ. ಶೀಲಾ ಹೈಕೋರ್ಟ್​ ಮೆಟ್ಟಿಲೇರಿದ್ದು, ಗಂಡ ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಮಗಳು ಯಾವುದೇ ಹೇಳಿಕೆ ನೀಡದಂತೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಯೋಗೇಶ್ವರ್​ ವಿರುದ್ಧ ನಿಶಾ ಯಾವುದೇ ಹೇಳಿಕೆ ನೀಡದಂತೆ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ, ನನ್ನ ಪತಿ ಸಿ.ಪಿ.ಯೋಗೇಶ್ವರ್ ಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ನಮ್ಮ ಮಲಮಗಳಾದ ನಿಶಾ ಯೋಗೇಶ್ವರ್‌ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಮಾನಹಾನಿಕಾರಕ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.

ಅರ್ಜಿಯ ಮಧ್ಯಂತರ ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್, ಪ್ರತಿವಾದಿಗಳಾದ ಇನ್‌ಸ್ಟಾಗ್ರಾಂ, ಎಕ್ಸ್‌ ಕಾರ್ಪ್‌ (ಟ್ವಿಟರ್‌), ಗೂಗಲ್‌ ಮತ್ತು ಯೂಟ್ಯೂಬ್‌ ಜಾಲತಾಣಗಳಲ್ಲಿ ನಿಶಾ ಯೋಗೇಶ್ ಅವರ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್‌ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆಹಿಡಿಯಬೇಕು ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: CP Yogeshwar: ಸಿ.ಪಿ.ಯೋಗೇಶ್ವರ್‌ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿ ಪ್ರಸಾರಕ್ಕೆ ಕೋರ್ಟ್‌ ನಿರ್ಬಂಧ