ಬೆಂಗಳೂರು: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಸಿ.ಪಿ ಯೋಗೇಶ್ವರ್ (CP Yogeshwara) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ನಿವಾಸದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಹಾಗೂ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದರು. ಇಂದು ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ (DK Shivakumar) ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ.
ಇಂದು ಮುಂಜಾನೆ ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾದ ಸಿಪಿ ಯೋಗೇಶ್ವರ, ಅವರೊಂದಿಗೆ ಸಿಎಂ ಮನೆಗೆ ಪ್ರಯಾಣಿಸಿ ತಮ್ಮ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತಪಡಿಸಿದರು. ಈ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ, ಜಮೀರ್ ಅಹಮದ್ ಖಾನ್, ಡಿಕೆ ಸುರೇಶ್ ಜೊತೆಗಿದ್ದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ್ ರಾಜೀನಾಮೆ ನೀಡಿದ್ದರು. ಅ.21ರಂದು ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಯೋಗೇಶ್ವರ್ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು.
ರಾಜ್ಯದಲ್ಲಿ ಘೋಷಣೆಯಾದ ಮೂರು ಬೈಎಲೆಕ್ಷನ್‌ಗಳಲ್ಲಿ ಎರಡನ್ನು ತಾನು ಇಟ್ಟುಕೊಂಡ ಬಿಜೆಪಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್‌ನಿಂದಲೇ ಸ್ಪರ್ಧಿಸುವಂತೆ ಯೋಗೇಶ್ವರ್ ಅವರಿಗೆ ಬಿಜೆಪಿ ಮುಖಂಡರೂ ಒತ್ತಾಯಿಸಿದ್ದರು. ಆದರೆ ಈ ಒತ್ತಾಯಕ್ಕೆ ಮಣಿಯದ ಯೋಗೇಶ್ವರ್, ಸ್ಪರ್ಧಿಸಿದರೆ ಬಿಜೆಪಿಯಿಂದ ಮಾತ್ರ, ಇಲ್ಲವಾದರೆ ಇಲ್ಲ ಎಂಬ ಸ್ಪಷ್ಟ ಸಂದೇಶ ಕೊಟ್ಟಿದ್ದರು. ನಿನ್ನೆ ಮಾತನಾಡಿದ್ದ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಅವರು, “ಚನ್ನಪಟ್ಟಣದ ವಿಷಯದಲ್ಲಿ ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ಸಾಧ್ಯವಿಲ್ಲ” ಎಂದಿದ್ದರು.
ಇದನ್ನೂ ಓದಿ: CP Yogeshwara: ಡಿಕೆಶಿ ನಿವಾಸದಲ್ಲಿ ಸಿಪಿ ಯೋಗೇಶ್ವರ್, ಇಂದು ಸಿಎಂ ಭೇಟಿ; ಕಾಂಗ್ರೆಸ್‌ನಿಂದ ಸ್ಪರ್ಧೆ ಖಚಿತ