Thursday, 12th December 2024

Crop Survey Problems: ‘ಬೆಳೆ ಸಮೀಕ್ಷೆ’, ‘ದಿಶಾಂಕ್’ ಆ್ಯಪ್‌ಗಳ ನಕ್ಷೆಯಲ್ಲಾಗಿದೆ ಭೂ ಕುಸಿತ, ಭೂ ಪಲ್ಲಟ!

Crop Survey Problems
ಅರವಿಂದ ಸಿಗದಾಳ್, ಮೇಲುಕೊಪ್ಪ
Crop Survey Problems Land subsidence land displacement in Crop survey and Dishank apps map

ಭೂವೈಜ್ಞಾನಿಕ ಪುರಾವೆಗಳು (Crop Survey Problems) ಗೊಂಡ್ವಾನದ ಸೂಪರ್ ಖಂಡದ ವಿಭಜನೆಯ ಸಮಯದಲ್ಲಿ (ಅಂದರೆ ಜುರಾಸಿಕ್ ಸಮಯದಲ್ಲಿ – ಕೋಟಿ ವರ್ಷಗಳ ಹಿಂದೆ!) ಪರ್ವತಗಳು ರೂಪುಗೊಂಡವು ಎಂದು ಸೂಚಿಸುತ್ತದೆ. ಆ ಜುರಾಸಿಕ್ ಕಾಲದಲ್ಲಿ ನಮ್ಮ ಭಾರತದ ಪಶ್ಚಿಮ ಘಟ್ಟ ಪ್ರದೇಶ ಆಫ್ರಿಕಾ ಖಂಡದಿಂದ ಬೇರ್ಪಟ್ಟು ಭಾರತದ ಪಶ್ಚಿಮ ಕರಾವಳಿಯಲ್ಲಿ ಎಲ್ಲೋ ತೇಲಿ ಬಂದು ಸೇರಿಕೊಂಡಿದ್ದಂತೆ! ಹೀಗೆ ಭೂ ಪಲ್ಲಟವಾಗಿದ್ದು ಕೋಟಿಗಳ ವರ್ಷಗಳ ಹಿಂದೆ! ಹಾಗೆ ವಿಭಜನೆ ಮತ್ತು ಪಲ್ಲಟ ಆಗುವುದಕ್ಕೂ ಸಾವಿರಾರು ವರ್ಷಗಳು ಬೇಕಾಗಿದೆಯಂತೆ.

ಇತಿಹಾಸ ಆಗಾಗ ಮರುಕಳಿಸುತ್ತದೆ ಎನ್ನುವುದಕ್ಕೆ ಪಶ್ಚಿಮ ಘಟ್ಟದ, ಕರ್ನಾಟಕ ರಾಜ್ಯದ, ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿಯ ಭಂಡಿಗಡಿ ಗ್ರಾಮದ ಕೆಲವು ಭೂ ಭಾಗಗಳು ಪ್ರತ್ಯಕ್ಷವಾಗಿ ಯಾರ ಅರಿವಿಗೂ ಬಾರದಂತೆ ಸ್ಥಾನ ಪಲ್ಲಟಗೊಂಡಿವೆ! ಹಾಗೆ ಪಲ್ಲಟ ಆಗಲು ಸಾವಿರಾರು ವರ್ಷಗಳು ಬೇಕಾಗಲಿಲ್ಲ. ಕೇವಲ ಒಂದು ವರ್ಷದಲ್ಲಿ ಈ ಪಲ್ಲಟ ಆಗಿದೆ!

ಭಂಡಿಗಡಿ ಗ್ರಾಮದ ಅನೇಕ ಸರ್ವೇ ನಂಬರ್‌ಗಳ ಕೃಷಿ ಭೂಮಿಗಳು ಮಧ್ಯದಲ್ಲಿ ತುಂಗಾ ನದಿ ಅಡ್ಡ ಅಡ್ಡ ಹರಿಯುತ್ತಿದ್ದರೂ ಭೂಮಿ ಆಕಡೆ ಈ ಕಡೆ ಸ್ಥಾನ ಪಲ್ಲಟಗೊಂಡಿವೆ! ಈ ಭೂ ಪಲ್ಲಟವನ್ನು ದಿಶಾಂಕ್ ಆ್ಯಪ್ ಮತ್ತು ಬೆಳೆ ಸಮೀಕ್ಷೆ ಆ್ಯಪ್‌ಗಳ ‘ಭೂ ಪಟದಲ್ಲಿ’ FSL ವರದಿ ದೃಢಪಡಿಸಿವೆ!

ಭೂಪಟದಲ್ಲಿ ಕಂಡು ಬಂದಿರುವ ಇಡೀ ಗ್ರಾಮದ ಈ ಭೂ ಪಲ್ಲಟ ಪ್ರಕ್ರಿಯೆಯಲ್ಲಿ ಸ್ವಲ್ಪ ಅಧಿಕವಾಗಿಯೇ ಕೊಳೆ ಬಂದಿರುವ, ಎಲೆ ಚುಕ್ಕಿ ರೋಗವೂ ಸ್ವಲ್ಪ ಮಟ್ಟಿಗೆ ಇರುವ ನಮ್ಮ ಭೂಮಿ ನಮ್ಮ ಹಕ್ಕು ವಿನ ರೈತರ ಸ್ವಂತ ಹಿಡುವಳಿ ಭೂಮಿಯೂ ಸೇರಿಕೊಂಡಿವೆ!

ಈ ಸುದ್ದಿಯನ್ನೂ ಓದಿ | Land encroachment: ನಾಗರಬಾವಿಯಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಕಟ್ಟಡಗಳ ತೆರವು; 430 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ

ವಿಭಜನೆಗೊಂಡು ಭಾಗವಾಗಿ ಚಲಿಸಿದ ಐತಿಹಾಸಿಕ ಭೂ ಪಲ್ಲಟದಲ್ಲಿ, ‘ಭಾಗಾಯ್ತು’ ಜಮೀನಿನ ಸರ್ವೆ ನಂಬರ್‌ಗಳಾದ 86, 87, 88ಗಳಲ್ಲಿನ ಒಟ್ಟು ಮೂರು ಎಕರೆ ಎರಡು ಗುಂಟೆಗಳ ಅಡಿಕೆ ತೋಟವೂ ತೋರಿಸಲ್ಪಡುತ್ತಿದೆ. ಮತ್ತು ಪಲ್ಲಟಗೊಂಡ ಈ ಭೂಮಿ ಆ್ಯಪ್‌ಗಳಲ್ಲಿ ನಾಲ್ಕು ಕಿ ಮೀ ದೂರದ ತುಂಗಾ ಹೊಳೆ ಆಚೆಗಿನ ಜಾಗದಲ್ಲಿ ತೋರಿಸುತ್ತಿದೆ!

ಬೆಳೆಸರ್ವೆ ಆ್ಯಪ್‌ನಲ್ಲಿ (ಮತ್ತು ದಿಶಾಂಕ್ ಆ್ಯಪ್‌ನಲ್ಲಿ ಕೂಡ) ಜಮೀನಿನ ಸರ್ವೆ ನಂಬರ್‌ಗಳು ಭೂ ಕುಸಿತಕ್ಕೆ ಒಳಪಟ್ಟು ಪಲ್ಲಟ ಆಗಿರುವುದರಿಂದ ಸರ್ವೆ ನಂಬರ್‌ಗಳಾದ 88/1, 88/2, 88/3, 88/4ಗಳಿಗೆ ಬೆಳೆ ಸಮೀಕ್ಷೆ ಮಾಡಲಾಗುತ್ತಿಲ್ಲ. ಆದರೆ, ಬೆಳೆಸರ್ವೆ ಆ್ಯಪ್‌ನಲ್ಲಿ ಡಿಜಿಟಲಿ ಭೂ 4 ಕಿ. ಮೀ ಪಲ್ಲಟವಾಗಿದ್ದರೂ, ಸರ್ವೆ ನಂಬರ್ 86, 87ರ ಸಮೀಕ್ಷೆ ಮಾಡುವಾಗ ಯಾವುದೇ ಸಮಸ್ಯೆ ಇಲ್ಲದೆ ಹಿಂದಿನ ವರ್ಷಗಳಲ್ಲಿ ಮಾಡಿದಂತೆ, ಸಮೀಕ್ಷೆ ಅಪ್‌ಡೇಟ್ ಮಾಡಲು ಸಾಧ್ಯವಾಗಿದೆ. ಆದರೆ, 88/1, 88/2, 88/3, 88/4ಗಳನ್ನು ಸಮೀಕ್ಷೆ ಮಾಡಲಾಗುತ್ತಿಲ್ಲ. ಭಂಡಿಗಡಿ ಗ್ರಾಮ ಪಂಚಾಯಿತಿಯ ಬಹುತೇಕ ರೈತರ ಸರ್ವೆ ನಂಬರ್‌ಗಳಲ್ಲೂ ಈ ಸಮಸ್ಯೆ ಇದ್ದು, ಬೆಳೆ ಸಮೀಕ್ಷೆ ಮಾಡಲಾಗುತ್ತಿಲ್ಲ.

ಇಂಟರ್‌ ಚೇಂಜ್‌ ಸಮಸ್ಯೆ

ತುಂಗಾ ನದಿಯ ಆ ಬದಿಯ ಸರ್ವೆ ನಂಬರ್‌ಗಳು ಈ ಬದಿಗೂ, ಈ ಬದಿಯ ಸರ್ವೆ ನಂಬರ್‌ಗಳು ಆ ಬದಿಗೂ ಇಂಟರ್ ಚೇಂಜ್ ಆಗಿದೆ. ಈ ಸಮಸ್ಯೆ ದಿಷಾಂಕ್ ಆ್ಯಪ್‌ನಲ್ಲೂ ಇದೆ. ಬೆಳೆ ಸರ್ವೆ ಮಾಡಲಾಗದಿರುವ ಮತ್ತು ಅದಕ್ಕೆ ಕಾರಣವಾಗಿರುವ ಆ್ಯಪ್‌ಗಳಲ್ಲಿನ ಈ ದೋಷಗಳನ್ನು ತಾಲೂಕು ಮತ್ತು ಜಿಲ್ಲಾ ಕೃಷಿ ಅಧಿಕಾರಿಗಳಿಗೂ, ತೋಟಗಾರಿಕಾ ಅಧಿಕಾರಿಗಳಿಗೂ ತಿಳಿಸಲಾಗಿದೆ. ಕೊಪ್ಪ ತಾಲೂಕಿನ ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟಿದ್ದು ಮೇಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ADA (Assistant Director of Agriculture) ಮತ್ತು ಚಿಕ್ಕಮಗಳೂರು ಜಿಲ್ಲಾ DDH (Deputy Director of Horticulture) ರವರಿಗೂ ಆ್ಯಪ್‌ನಲ್ಲಿನ ದೋಷಗಳ ಬಗ್ಗೆ ಮಾಹಿತಿ ಕೊಟ್ಟಿದ್ದು, ಅವರು ಭೂ ಮಾಪನದ ತಾಂತ್ರಿಕ ವಿಭಾಗಕ್ಕೆ ವರದಿ ಕಳುಹಿಸಿ, ಶೀಘ್ರದಲ್ಲೇ ಸರಿ ಮಾಡಿಸುವ ಭರವಸೆ ನೀಡಿದ್ದಾರೆ.

ಪರಿಹಾರೋಪಾಯ ಇಲ್ಲ ಏಕೆ?

ತಾಂತ್ರಿಕವಾಗಿ ಇಂತಹ ಸಮಸ್ಯೆಗಳು ಹೊಸದಾಗಿ ಸಾಫ್ಟ್‌ವೇರ್, ಆ್ಯಪ್, ವೆಬ್‌ಸೈಟ್‌ಗಳನ್ನು ಮಾಡುವಾಗ ಬರುವುದು ಸಹಜ ಇರಬಹುದು. ಆದರೆ, ಇಂತಹ ಸಮಸ್ಯೆಗಳು ಬಂದಾಗ ತಕ್ಷಣವೇ ಪರಿಹಾರೋಪಯಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳವುದು ಸರಿಯಾದ ಕ್ರಮ. ಬೆಳೆ ಸಮೀಕ್ಷೆ ಆ್ಯಪ್ ಜಾರಿಗೆ ಬಂದು ಸುಮಾರು 5 ವರ್ಷಗಳಾಯ್ತು. ಅದರಲ್ಲಿ ಅನೇಕ ಸಮಸ್ಯೆಗಳಿದ್ದು, ಅದನ್ನು ಸರಿ ಪಡಿಸುವ ಕ್ರಮಕ್ಕೆ ಇಲಾಖೆಗಳು ಮತ್ತು ಸರ್ಕಾರ ಮುಂದಾಗಬೇಕಿದೆ.

ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿನ ಅನೇಕ ಸಮಸ್ಯೆಗಳಿಂದಾಗಿ ಅನೇಕ ರೈತರಿಗೆ ಬೆಳೆ ವಿಮೆ ಕಟ್ಟಲಾಗುತ್ತಿಲ್ಲ ಮತ್ತು ಹವಾಮಾನ ವೈಪರೀತ್ಯದಿಂದಾಗುವ ವಿಮಾ ಪರಿಹಾರ ಸೌಲಭ್ಯದಿಂದ ರೈತರು ವಂಚಿತರಾಗುವಂತಾಗಿದೆ.

ಬೆಳೆ ಸಮೀಕ್ಷೆಯಲ್ಲಿನ ಸಮಸ್ಯೆಗಳು ಏನೇನು?

ಕಳೆದ ಬಾರಿ ಬೆಳೆ ಸಮೀಕ್ಷೆಯನ್ನು ಸರಿಯಾಗಿ ಮಾಡಿದ್ದರೂ, ಬೆಳೆ ವಿಮೆ ಮಾಡಿಸುವಾಗ ಅಡಿಕೆ, ಕಾಫಿ ಇದ್ದ ಸರ್ವೆ ನಂಬರ್‌ಗಳಲ್ಲಿ ಭತ್ತ, ಹುಲ್ಲು ಎಂದು ಬೆಳೆ ಕಾಲಂ‌ನಲ್ಲಿ ಬದಲಾಗುವುದು. ಬೆಳೆ ಸಮೀಕ್ಷೆಯಲ್ಲಿ ಪ್ಲಾಂಟೇಷನ್ ಬೆಳೆಗಳಿಗೆ ಮರ ಗಿಡಗಳ ಸಂಖ್ಯೆಗನುಗುಣವಾಗಿ ಹೊಲದ ವಿಸ್ತೀರ್ಣವೇ ವ್ಯತ್ಯಾಸವಾಗುವುದು.

ಕಳೆದ ವರ್ಷ ಬೆಳೆ ಸರ್ವೆಯಲ್ಲಾದ ಲೋಪಗಳನ್ನು (PR ಮತ್ತು VA ಗಳು ಮಾಡಿದ ಲೋಪ!!?) ಸರಿಪಡಿಸಲಾಗದೆ, ಬೆಳೆ ವಿಮೆ ನೊಂದಣಿ ಆಗದೇ ಹೋದದ್ದು. ಕಳೆದ ಬಾರಿ ಬೆಳೆ ಸರ್ವೆ ಆದ ಮೇಲೆ ಬದಲಾದ ಹಕ್ಕುದಾರಿಕೆಯಲ್ಲಿ (ಖರೀದಿದಾರರಿಗೆ, ಪೌತಿದಾರರಿಂದ-ಬಾಧ್ಯಸ್ಥರಿಗೆ ಬಂದಾಗ ಇತ್ಯಾದಿ) ಹೊಸ ಹಕ್ಕುದಾರರು FRUIT ID, ಆಧಾರ್-ಪಹಣಿ ಸೀಡಿಂಗ್, NPCI ಎಲ್ಲ ಆಗಿದ್ದರೂ, ಬೆಳೆ ವಿಮೆ ನೋಂದಣಿಗೆ ಸಂರಕ್ಷಣ ವೆಬ್‌ಸೈಟ್‌ ಸಪೋರ್ಟ್ ಮಾಡದೆ, ರೈತರು ಅನೇಕ ರೀತಿಯಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತಿರುವುದು.

ಅವಶ್ಯಕತೆ ಇಲ್ಲದಿದ್ದರೂ, ದೀರ್ಘಾವಧಿ ಬೆಳೆ ಅಥವಾ ಬಹುವಾರ್ಷಿಕ ಬೆಳೆಗಳಿಗೆ ಪ್ರತೀ ವರ್ಷ ಬೆಳೆ ಸಮೀಕ್ಷೆ ಮಾಡುವ ಅನಗತ್ಯ ಮತ್ತು ಅವೈಜ್ಞಾನಿಕ ಕ್ರಮ ಅಸ್ಥಿತ್ವದಲ್ಲಿರುವುದು. (ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳಿಗೆ ಮತ್ತು ತೋಟಗಾರಿಕಾ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದರೂ, ಸರಿಪಡಿಸುವ ಕ್ರಮ ಇನ್ನೂ ಆಗಿಲ್ಲ)

ಮೇಲಿನ ಲೇಖನದಲ್ಲಿ ವಿಸ್ತರಿಸಿದ ಉದಾಹರಣೆಯಂತೆ. ಬೆಳೆ ಸರ್ವೆ ಆ್ಯಪ್‌ನಲ್ಲಿರುವ GPS ಮ್ಯಾಪ್ ದೋಷದಿಂದ ಬೆಳೆ ಸಮೀಕ್ಷೆ ಮಾಡಲಾಗದಿರುವುದು.

ಬೆಳೆ ಸಮೀಕ್ಷೆ PR ಆ್ಯಪ್‌ನಲ್ಲಿ VA ಯವರು GPS ಆಫ್ ಮಾಡಿಕೊಂಡು ಸಮೀಕ್ಷೆ ಮಾಡುವ ಅವಕಾಶ ಇಟ್ಟಿರುವುದು. ಇದರಿಂದ PR ಗಳು ತಮ್ಮ ಮನೆಯಲ್ಲೇ ಕುಳಿತು ಇಡೀ ಊರಿನ ರೈತರ ಬೆಳೆ ಸಮೀಕ್ಷೆ ಮಾಡುವುದು, ಪರಿಣಾಮ ಅನೇಕ ಲೋಪಗಳಾಗುವುದು ನೆಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಉಪ ಬೆಳೆಗಳು ಮತ್ತು ಅದರ ವಿಸ್ತೀರ್ಣಗಳ ಲೋಪ, ದೋಷಗಳಾಗುತ್ತಿದೆ.

ಬೆಳೆ ಸಮೀಕ್ಷೆ ಬಗ್ಗೆ ರೈತರಿಗೆ ಇಲಾಖೆಗಳಿಂದ, ಸರ್ಕಾರದಿಂದ ಸ್ಪಷ್ಟ ಮಾಹಿತಿ ಇಲ್ಲದಿರುವುದು.

ಬೆಳೆ ಸಮೀಕ್ಷೆ ಮಾಡುವ ಕ್ರಮದ ಬಗ್ಗೆ ಗ್ರಾಮೀಣ ರೈತರಿಗೆ ಯಾವುದೇ ಟ್ರೈನಿಂಗ್ ಕೊಡದಿರುವುದು.

ಹಳ್ಳಿಗಳಲ್ಲಿ ನೆಟ್ವರ್ಕ್, ಇಂಟರ್‌ನೆಟ್ ಸೌಲಭ್ಯ ಇಲ್ಲದೆ, ಬೆಳೆ ಸಮೀಕ್ಷೆ ಮಾಡಲಾಗದಿರುವುದು.

ಬೆಳೆ ಸಮೀಕ್ಷೆ ಮಾಡಿ ಅಪ್‌ಡೇಟ್ ಕೊಟ್ಟು ಆದ ಮೇಲೆ, ಬೆಳೆ ಸಮೀಕ್ಷೆ ಆ್ಯಪ್‌ನ್ನು ಮೊಬೈಲ್‌ನಲ್ಲಿ ಅನ್ ಇನ್‌ಸ್ಟಾಲ್ ಮಾಡಿ, ಪುನಃ ಇನ್‌ಸ್ಟಾಲ್ ಮಾಡಿದಾಗ (ಇನ್ನೊಬ್ಬ ರೈತರ ಬೆಳೆ ಸಮೀಕ್ಷೆ ಮಾಡಲು ಈ ಪ್ರಕ್ರಿಯೆ ಅವಶ್ಯಕ), ಮೊದಲು ಮಾಡಿದ ಬೆಳೆ ಸಮೀಕ್ಷೆ ವಿವರಗಳು ಅಪ್‌ಡೇಟ್ ಆಗಿದ್ದರೂ ಬಾಕಿ ಎಂದು ತೋರಿಸುವುದು.

ಬೆಳೆ ಸಮೀಕ್ಷೆ ಆ್ಯಪ್‌ ನಲ್ಲಿನ ಕಸ್ಟಮರ್ ನಂಬರ್‌ಗೆ ಕರೆ ಮಾಡಿದರೆ ಒಂದಾ ನಿರಂತರ ಎಂಗೇಜ್ ಸೌಂಡ್ ಬರುವುದು ಅಥವಾ ನಿರಂತರ ರಿಂಗ್ ಆಗ್ತಾ ಇದ್ರೂ (ಕಛೇರಿ ವರ್ಕಿಂಗ್ ಸಮಯದಲ್ಲೇ ಮಾಡಿದರೂ) ಯಾರೂ ಕರೆಯನ್ನು ಸ್ವೀಕರಿಸದಿರುವುದು.

ಬೆಳೆ ಸಮೀಕ್ಷೆ ಮಾಡುವ PR ಗಳಿಗೆ ಪ್ರತೀ ಸರ್ವೇ ನಂಬರ್‌ಗೆ ಕೊಡುವ ಸರ್ವಿಸ್ ಚಾರ್ಜ್‌ ಅತ್ಯಂತ ಕಡಿಮೆ ಇದ್ದು (₹.20) ಕೆಲವೊಮ್ಮೆ PR ಗಳ ವಾಹನದ ಇಂಧನಕ್ಕೂ ಸಾಲದೆಂಬ ಆರೋಪ. ತಾಂತ್ರಿಕವಾಗಿ ಸಮೀಕ್ಷೆ ಮಾಡಲಾಗದಿದ್ದಾಗ, PR ಗಳಿಗೆ ಇಂಧನದ ಖರ್ಚನ್ನೂ ಸ್ವತಃ ತಾವೇ ಭರಿಸಬೇಕಾಗುವುದು ಮತ್ತು ವ್ಯರ್ಥವಾಗುವ ಅನುತ್ಪಾದಿತ PR ಗಳ ಸಮಯ.

ಕೃಷಿ ಸಂಬಂಧಿತ ಬಹುತೇಕ ಎಲ್ಲಾ ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲೂ ದೋಷಗಳಿದ್ದು, ಸರಿಪಡಿಸುವ ಪ್ರಕ್ರಿಯೆಗಳನ್ನು ಮಾಡದೆ, ಅವುಗಳನ್ನು ದೋಷಗಳೊಂದಿಗೆ ಮುಂದುವರಿಸಿಕೊಂಡು ಹೋಗುತ್ತಿರುವುದು ಅತ್ಯಂತ ಅಸಮರ್ಪಕವಾಗಿರುತ್ತದೆ.

ಉದಾಹರಣೆಗೆ

ಬೆಳೆ ಸರ್ವೆ ಸರ್ವೆ ಆ್ಯಪ್: ಮೇಲಿನ ಪಟ್ಟಿಯಲ್ಲಿರುವ ಸಮಸ್ಯೆಗಳು
ದಿಶಾಂಕ್ ಆ್ಯಪ್: ಮೇಲಿನ ಬರಹದಲ್ಲಿರುವಂತೆ ಸರ್ವೆ ನಂಬರ್‌ಗಳು ಪಲ್ಲಟಗೊಂಡಿರುವುದು.
ಹಿಂದೆ ಮಾಡುತ್ತಿದ್ದ ಚೈನ್ ಸರ್ವೆಗೂ ಈಗಿನ ಜಿಪಿಎಸ್ ಆಧಾರಿತ ಸರ್ವೆಗೂ (ಬೆಳೆ ಸರ್ವೆ ಅಲ್ಲ, ಜಮೀನು ಸರ್ವೆ) ಶೇಕಡ 25 ಭಾಗಕ್ಕಿಂತ ಹೆಚ್ಚಿನ ಇಳಿಜಾರು ಇದ್ದಲ್ಲಿ ಜಾಗವನ್ನು ಕಡಿಮೆ ಅಳತೆಯನ್ನು ದಾಖಲಿಸುತ್ತವೆ.
ಸಂರಕ್ಷಣಾ ವೆಬ್‌ಸೈಟ್‌ನಲ್ಲಿ ಈ ಬಾರಿ ಬೆಳೆ ವಿಮೆ ಕಟ್ಟುವಾಗ ಆದ ಗೊಂದಲ, ಗೊಜಲುಗಳು, ರೈತರು ಅನೇಕ ಬಾರಿ ಇಲಾಖೆಗಳಿಗೆ-ಗ್ರಾಮ ಒನ್‌ಗಳಿಗೆ-ಬ್ಯಾಂಕ್‌ಗಳಿಗೆ ತಿರುಗಾಟ ಮಾಡುವಂತಾಗಿದ್ದು.
ಮಳೆ ಮಾಪನ ಡಿಜಿಟಲ್ ಯಂತ್ರಗಳ ದೋಷಗಳ ಬಗ್ಗೆ ಈಗಲೂ ಆಕ್ಷೇಪಣೆಗಳು ಬರುತ್ತಿರುವುದು

ಡಿಜಿಟಲ್‌ ಕಿರುಕುಳ

ಆ್ಯಪ್ ಮತ್ತು ವೆಬ್‌ಸೈಟ್‌ಗಳಲ್ಲಿನ ಇವಿಷ್ಟು ಮತ್ತು ಇಂತಹ ಅನೇಕ ಸಮಸ್ಯೆಗಳಿಂದ ಒಂದು ರೀತಿಯಲ್ಲಿ ಡಿಜಿಟಲ್ ಕಿರುಕುಳಗಳನ್ನು ಅನುಭವಿಸುತ್ತಿರುವ ರೈತರು, ಈಗಷ್ಟೇ ಬಂದಿರುವ ಲ್ಯಾಂಡ್ ಬೀಟ್ ಆ್ಯಪ್, ಅರಣ್ಯ ಇಲಾಖೆಯವರು ತೆರವು ಕಾರ್ಯಾಚರಣೆಗೆ ಬಳಸುತ್ತಿರುವ ಅರಣ್ಯ ಇಲಾಖಾ ಭೂ ಸಮಿಕ್ಷಾ ಆ್ಯಪ್, GPS ಸಮೀಕ್ಷಾ ಆ್ಯಪ್‌ಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನ, ಆತಂಕಗಳನ್ನು ಹೊಂದುವಂತಾಗಿದೆ.

ಕಂದಾಯ ಇಲಾಖೆ ಸ್ವಯಂ ಪ್ರೇರಿತವಾಗಿ ಮಾಡಬೇಕಿದ್ದ ಜಮೀನು ಮತ್ತು ಮನೆಗಳ ಇ-ಸ್ವತ್ತು ಪ್ರಕ್ರಿಯೆಗೆ ರೈತರು ಹತ್ತಾರು ತಿರುಗಾಟ ಮಾಡಿ, ‘ಮಾಮೂಲು’ ಕೊಟ್ಟು ಮಾಡಿಸಿಕೊಳ್ಳಬೇಕಾದ ದರಿದ್ರ ವ್ಯವಸ್ಥೆಯಿಂದ ರೈತರು ತಬರನಂತಾಗಿದ್ದಾರೆ.

ಮೂರು ತಿಂಗಳೊಳಗೆ ಫಿಸಿಕಲ್ ಸರ್ವೆ ಮಾಡಿ ಪೋಡಿ ಮುಕ್ತ ಗ್ರಾಮ ಮಾಡುವ ಹೇಳಿಕೆಗಳು ಮೂರು ಮೂರು ತಿಂಗಳಿಗೊಮ್ಮೆ ಪ್ರೆಸ್ ಸ್ಟೇಟ್‌ಮೆಂಟ್ ಆಗಿ ಕಾಣಿಸಿಕೊಳ್ಳುತ್ತವೆ ಹೊರತು, ಯಾವ ಬೆಳವಣಿಗೆಯೂ ಮಲೆನಾಡು-ಕರಾವಳಿ ಭೂಮಿಯಲ್ಲಿ ಕಾಣಿಸುತ್ತಿಲ್ಲ.

ಈ ಸುದ್ದಿಯನ್ನೂ ಓದಿ | Laptop theft case: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್‌ ಕಳ್ಳತನ; ಸಿಬ್ಬಂದಿ ಸೇರಿ 26 ಜನರ ಬಂಧನ

ಕಂದಾಯ ಇಲಾಖೆಯ ʼನಡಿಗೆ ಗ್ರಾಮದ ಕಡೆಗೆʼ ಎಂಬ ಘೋಷಣೆಯ ಜಾಹೀರಾತು ಪತ್ರಿಕೆಯಲ್ಲಿ ಮುಖಪುಟದಲ್ಲಿ ರಾರಾಜಿಸಿತೇ ಹೊರತು, ಯಾವ ಕಂದಾಯ ಇಲಾಖೆಯವರೂ ಗ್ರಾಮದ ಒಳಗೆ ಕಷ್ಟ ಸುಖ ಕೇಳಲು ಬರಲಿಲ್ಲ!