Sunday, 15th December 2024

ಖಾಸಗಿ ದೇಗುಲಗಳಿಗೆ ಸರಕಾರದ ಶಾಪ

ದೇವಸ್ಥಾನ ನೋಂದಣಿ, ಆಸ್ತಿ ವಿವರ ಸಲ್ಲಿಕೆ ಕಡ್ಡಾಯ

ಚರ್ಚ್, ಮಸೀದಿ, ಬಸದಿಗಳಿಗೆ ಆದೇಶ ಅನ್ವಯ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ, ಹಿಂದೂಪರ ಎಂದು ಹೇಳಿಕೊಳ್ಳುತ್ತಲೇ ಖಾಸಗಿ ದೇವಾಲಯಗಳ ಅಧಿಕಾರವನ್ನು ಕಸಿದುಕೊಳ್ಳುವ, ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಮುಂದಾಗಿದೆ. ಆದರೆ ಈ ಆದೇಶ ಚರ್ಚು, ಮಸೀದಿ, ಬಸದಿಗಳಿಗೆ ಅನ್ವಯವಾಗುವುದಿಲ್ಲ  ಎನ್ನು ವುದು ವಿವಾದಕ್ಕೆ ಕಾರಣವಾಗಿದೆ.

ಹೌದು, ಕಳೆದ ಕೆಲ ದಿನಗಳ ಹಿಂದೆ ಮುಜರಾಯಿ ಇಲಾಖೆ, ಖಾಸಗಿ ದೇವಾಲಯಗಳ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶವೊಂದನ್ನು ಹೊರಡಿಸಿದ್ದು, ಇದರಲ್ಲಿ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರದ ಖಾಸಗಿ ದೇವಾಲಯಗಳು, ತಮ್ಮ ಸಂಪೂರ್ಣ ಮಾಹಿತಿಯನ್ನು ಮುಜರಾಯಿ ಇಲಾಖೆಗೆ ನೀಡಬೇಕು ಎಂದು ಆದೇಶಿಸಿ ಒಂದು ತಿಂಗಳ ಗಡುವು ನೀಡಲಾಗಿದೆ. ಒಂದು ತಿಂಗಳೊಳಗೆ ಮಾಹಿತಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಹೊರಡಿಸಲಾಗಿದೆ.

ಆದೇಶದಲ್ಲಿ ಏನಿದೆ?: ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಾರದ ಎಲ್ಲ ಖಾಸಗಿ ದೇವಾಲಯಗಳನ್ನು ಮುಂದಿನ ಒಂದು ತಿಂಗಳ ಅವಧಿಯೊಳಗೆ ನೋಂದಾಯಿಸಿಕೊಳ್ಳದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಣ್ಣ ಅಥವಾ ದೊಡ್ಡ ಟ್ರಸ್ಟ್‌‌ಗಳ ನಿರ್ವಹಣೆಯಲ್ಲಿ ನಡೆಯುತ್ತಿರುವ ದೇವಾಲಯಗಳ ಬಗ್ಗೆ ಆಯಾ ತಾಲೂಕು ವ್ಯಾಪ್ತಿಯ ಕಚೇರಿಯಲ್ಲಿ ದೊರೆಯುವ ನಿಗದಿತ ನಮೂನೆಯಲ್ಲಿ ತಮ್ಮ ದೇವಾಲಯದ ಸಮಗ್ರ ಮಾಹಿತಿ
ಯನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಲ್ಲಿಸಬೇಕು.

ದೇವಾಲಯದ ಸ್ಥಿರಾಸ್ತಿ, ಚರಾಸ್ತಿ, ಬಂಗಾರದ ಒಡವೆ, ಅಮೂಲ್ಯ ಆಭರಣ ಹರಳುಗಳು ಬಗ್ಗೆ ಪಟ್ಟಿ ತಯಾರಿಸಿ ನಿಯಮಾನುಸಾರ ಮೌಲ್ಯಮಾಪನ ನಡೆಸುವುದರೊಂದಿಗೆ ಲೆಕ್ಕ ತಪಾಸಣಾ ವಿವರ, ಸೇವಾರ್ಥಗಳ ವಿವರ, ಬ್ಯಾಂಕ್ ಖಾತೆ ವಿವರ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಗದಿತ ಅರ್ಜಿ
ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು.

ದೇವಾಲಯಗಳ ನೋಂದಣಿ ಉಸ್ತುವಾರಿಯನ್ನು ಸಂಬಂಧಿಸಿದ ಪ್ರದೇಶಗಳ ವ್ಯಾಪ್ತಿಯ ಗ್ರಾಮ ಲೆಕ್ಕಿಗರು ಪರಿಶೀಲನೆ ನಡೆಸಲಿದ್ದು, ನೋಂದಣಿ ಮಾಡಿಸಿಕೊಳ್ಳದ ದೇವಾಲಯಗಳ ಮಾಹಿತಿ ದೊರೆತಲ್ಲಿ ಆ ಮಾಹಿತಿಯನ್ನು ಸಂಬಂಧಿಸಿದ ತಹಸೀಲ್ದಾರರಿಗೆ ರವಾನಿಸಲಿದ್ದಾರೆ. ಎಲ್ಲ ಮಾಹಿತಿ ಗಳನ್ನು ಸಂಗ್ರಹಿಸಿ ಸರಕಾರವು ಸುಪರ್ದಿಯಲ್ಲಿಟ್ಟುಕೊಳ್ಳಲಿದೆ. ಯಾವುದೇ ದೇವಾಲಯಗಳ ಬಗ್ಗೆ ದೂರು ದಾಖಲಾದಲ್ಲಿ ಸಂಗ್ರಹಿತ ಮಾದರಿಯನ್ನು ಅನುಸರಿಸಿ ಸರಕಾರ ಕ್ರಮ ಕೈಗೊಳ್ಳಲಿದೆ. ನಿಯಮ ಉಲ್ಲಂಘಿಸಿದರೆ ದೇವಾಲಯದ ವ್ಯವಸ್ಥೆಯನ್ನು ಸರಕಾರ ವಶಕ್ಕೆ ಪಡೆಯಲಿದೆ.

ಖಾಸಗಿ ದೇವಾಲಯ ಸ್ವಾಧೀನದತ್ತ ಮೊದಲ ಹೆಜ್ಜೆ: ರಾಜ್ಯದಲ್ಲಿ ಹಲವು ದೇವಾಲಯಗಳು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಆದರೆ ಈ ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿಂದೆ ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಸೇರಿಸಬೇಕು ಎನ್ನುವ ಪ್ರಸ್ತಾಪ ಬಂದಾಗ, ಭಾರಿ ವಿರೋಧ ವ್ಯಕ್ತವಾಗಿತ್ತು.

ಆದ್ದರಿಂದ ಇದೀಗ ನೇರವಾಗಿ ಖಾಸಗಿ ದೇವಾಲಯಗಳನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವ ಬದಲು, ಈ ರೀತಿ ಆಸ್ತಿ ವಿವರ ಪಡೆಯುವ ಮೂಲಕ ಸ್ವಾಧೀನಪಡಿಸುವ ಮೊದಲ ಹೆಜ್ಜೆಯನ್ನಿಟ್ಟಿದೆ. ಮುಂದಿನ ದಿನಗಳಲ್ಲಿ ವರದಿಯನ್ನು ಆಧಾರವಾಗಿಟ್ಟುಕೊಂಡು, ಮುಜರಾಯಿ ಇಲಾಖೆ ಸ್ವಾಧೀನಪಡಿಸಿ ಕೊಳ್ಳುವ ಸಾಧ್ಯತೆಯಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯ, ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾ ಪರಮೇಶ್ವರಿ, ಗೋಕರ್ಣದ ಮಹಾಬಲೇಶ್ವರ ದೇವಾಲಯ ಸೇರಿದಂತೆ ರಾಜ್ಯದ ಹಲವು ದೇವಾಲಯಗಳಲ್ಲಿ ಧರ್ಮದರ್ಶಿಗಳ ನೇತೃತ್ವದಲ್ಲಿ ಆಡಳಿತ ಮಂಡಳಿ ಇದೆ. ಆದರೀಗ ರಾಜ್ಯ ಸರಕಾರದ ಆದೇಶದಿಂದ ಈ ಎಲ್ಲ ದೇವಾಲಯಗಳು ತಮ್ಮ ದೇವಾಲಯದ ಆಸ್ತಿಯನ್ನು ಸರಕಾರಕ್ಕೆ ಸಲ್ಲಿಸಬೇಕಿದೆ.

ನಿಷ್ಪ್ರಯೋಜಕ ಮಂತ್ರಿ ಮುಜರಾಯಿ ಖಾತೆ ಮಂತ್ರಿ ಕೋಟ ಶ್ರೀನಿವಾಸ್ ಪೂಜಾರಿ ಒಬ್ಬ ನಿಷ್ಪ್ರಯೋಜಕ ಮಂತ್ರಿ. ಸಂಘ ಪರಿವಾರದ ಮೂಲದ ವರೆಂದು ಗುರುತಿಸಿಕೊಂಡ ಪೂಜಾರಿಯವರಿದ್ದೂ ಇಂಥ ಕ್ರಮಕ್ಕೆ ಸರಕಾರ ಮುಂದಾಗಿದ್ದು ನಾಚಿಕೆಗೇಡು. ಮಂತ್ರಿಯಾದ ನಂತರ ಅವರು ಮಾಮೂಲು ರಾಜಕಾರಣಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಸರಕಾರ ಸಹ ಇಂಥ ನಿರ್ಧಾರಕ್ಕೆ ಮುಂದಾಗುತ್ತಿರಲಿಲ್ಲ.
ಆದರೆ ಬಿಜೆಪಿ ಸರಕಾರ ಇಂಥ ನಿರ್ಧಾರಕ್ಕೆ ಮುಂದಾಗಿದ್ದು ಅದರ ದ್ವಿಮುಖ ನೀತಿಗೆ ಸಾಕ್ಷಿ. ದೇವಾಲಯಗಳ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲ ಎಂದು ಖಾಸಗಿ ಒಡೆತನದ ದೇಗುಲಗಳ ಮುಖ್ಯಸ್ಥರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ದೇವರ ಬಗ್ಗೆ ಪೂಜಾರಿಗೇ ಗೊತ್ತಿಲ್ಲ ಈ ಆದೇಶಕ್ಕೆ ಸಂಬಂಧಿಸಿದಂತೆ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ‘ವಿಶ್ವವಾಣಿ’ ಪ್ರಶ್ನಿಸಿದಾಗ, ‘ದೇವಾಲಯಗಳ ಆಸ್ತಿ ವಿವರ ಪಡೆಯುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಬಗ್ಗೆ ಆದೇಶವಾಗಿರುವುದು ತಿಳಿದಿಲ್ಲ. ಅಧಿಕಾರಿಗಳೊಂದಿಗೆ ಚರ್ಚಿಸಿ, ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ತಿಳಿಸುತ್ತೇನೆ’ ಎಂದರು.

ಅಲ್ಪಸಂಖ್ಯಾತರಿಗೆ ಅನ್ವಯ ಇಲ್ಲ ರಾಜ್ಯ ಸರಕಾರ ಹೊರಡಿಸಿರುವ ಈ ಆದೇಶ ಕೇವಲ ಹಿಂದೂ ಧಾರ್ಮಿಕ ಖಾಸಗಿ ದೇವಾಲಯಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿದುಬಂದಿದೆ. ಮುಸ್ಲಿಂ ಧರ್ಮ ಮಸೀದಿ, ಕ್ರೈಸ್ತ ಸಮುದಾದ ಚರ್ಚ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾ
ಯವನ್ನು ಈ ನಿಯಮದಿಂದ ಹೊರಗಿಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಕೇಂದ್ರಗಳು ಎಂದ ಮೇಲೆ, ಎಲ್ಲ ಧರ್ಮದ ಕೇಂದ್ರಗಳನ್ನು ಒಂದೇ ರೀತಿ ನೋಡಬೇಕು. ಅದನ್ನು ಬಿಟ್ಟು, ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರ ಈ ರೀತಿ ಕಾನೂನು ಮಾಡುವುದು ಸರಿಯಲ್ಲ ಎನ್ನುವ ಮಾತು ಕೇಳಿಬಂದಿದೆ.